ADVERTISEMENT

ಮಲೇಬೆನ್ನೂರು: ವೈಭವದ ಬಸವೇಶ್ವರ ರಥೋತ್ಸವಕ್ಕೆ ಜನಸಾಗರ

ಕಾರ್ಣಿಕ ನುಡಿ: ‘ಕಂಬಳಿ ಹಾರಾಡೀತು, ಮುತ್ತಿನ ರಾಶಿ ಎದ್ದೇತಲೆ, ಅದಕ್ಕೆ ನಾನು ಅದೀನಿ’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 4:56 IST
Last Updated 25 ಫೆಬ್ರುವರಿ 2023, 4:56 IST
ಮಲೇಬೆನ್ನೂರಿನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಮೇಜರ್ ಮುಜರಾಯಿ ಬಸವೇಶ್ವರ ದೇವರ ರಥೋತ್ಸವ ಶುಕ್ರವಾರ ವೈಭವದಿಂದ ನೆರವೇರಿತು.
ಮಲೇಬೆನ್ನೂರಿನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಮೇಜರ್ ಮುಜರಾಯಿ ಬಸವೇಶ್ವರ ದೇವರ ರಥೋತ್ಸವ ಶುಕ್ರವಾರ ವೈಭವದಿಂದ ನೆರವೇರಿತು.   

ಮಲೇಬೆನ್ನೂರು: ಪಟ್ಟಣದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಬಸವೇಶ್ವರ ರಥೋತ್ಸವ ಶುಕ್ರವಾರ ಗೋಧೂಳಿ ಲಗ್ನದಲ್ಲಿ ವೈಭವದಿಂದ
ನೆರವೇರಿತು.

ಬಸವೇಶ್ವರ ಸ್ವಾಮಿ ಚಿಕ್ಕರಥದ ರಾಜಬೀದಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬ್ರಾಹ್ಮಿ ಸಮಯದಲ್ಲಿ ನಡೆಯಿತು.

ಉತ್ಸವಮೂರ್ತಿಯ ರಥಾ ರೋಹಣವಾದ ನಂತರ ತಹಶೀಲ್ದಾರ್ ಪೃಥ್ವಿ ಸಾನಿಕಂ, ಉಪತಹಶೀಲ್ದಾರ್ ದೇವಾಲಯ ಆಡಳಿತಾಧಿಕಾರಿ ಆರ್‌. ರವಿ ರಥಪೂಜೆ ನೆರವೇರಿಸಿದರು. ಅಷ್ಟ ದಿಕ್ಪಾಲಕರಿಗೆ ಬಲಿದಾನ
ಹಾಕಿದರು.

ADVERTISEMENT

ಜನಸ್ತೋಮ ರಥದ ಗಾಲಿಗೆ ತೆಂಗಿನಕಾಯಿ ಒಡೆದು, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿ ‘ಹರಹರ ಮಹಾದೇವ’ ‘ಬಸವೇಶ್ವರ ಮಹಾರಾಜ್‌ ಕಿ ಜೈ’ ಎಂಬ ಉದ್ಘೋಷದೊಂದಿಗೆ ರಥ
ಎಳೆದರು.

ತಮಟೆ, ಜಾಂಝ್‌, ಡೊಳ್ಳು, ಭಜನಾ ತಂಡ, ಪುರವಂತರ ವೀರಭದ್ರ ದೇವರ ಕುಣಿತ, ನಂದಿಕೋಲು, ಬೊಂಬೆ, ಕೀಲು ಕುದುರೆ ಕುಣಿತ ಮಂಗಳವಾದ್ಯ, ಕೊಂಬು ಕಹಳೆ ವಾದನ ಉತ್ಸವಕ್ಕೆ ಕಳೆ ತಂದಿದ್ದವು. ಗ್ರಾಮ ದೇವತೆ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ, ದುರ್ಗಾಂಬಿಕಾ, ಬೀರಲಿಂಗೇಶ್ವರ, ಕಾಳಿಕಾಂಬಾ, ಜೋಡಿ ಆಂಜನೇಯ ಉತ್ಸವ ಮೂರ್ತಿಗಳು ಇದ್ದವು. ದೇವಾಲಯ, ರಾಜಬೀದಿಗೆ ವಿದ್ಯುದ್ದೀಪಗಳಿಂದ, ರಥವನ್ನು ಹೂವಿನಿಂದ ಅಲಂಕರಿಸಿದ್ದರು. ಕೊನೆಯ ಮುಖ್ಯವೃತ್ತದಲ್ಲಿ ಪಟಾಕಿ ಸಿಡಿಸಲಾಯಿತು.

ಬೀರಲಿಂಗೇಶ್ವರ ಕಾರಣೀಕೋತ್ಸವ ದಲ್ಲಿ ದೇವತೆ ಆವಾಹಿತ ವ್ಯಕ್ತಿ ‘ಕಂಬಳಿ ಹಾರಾಡೀತು, ಮುತ್ತಿನ ರಾಶಿ ಎದ್ದೇತಲೆ, ಅದಕ್ಕೆ ನಾನು ಅದೀನಿ’ ಎಂದು
ನುಡಿದ.

ಕಂದಾಯ ನಿರೀಕ್ಷಕ ಆನಂದ್, ವಿ.ಎ. ಅಣ್ಣಪ್ಪ, ಪಟ್ಟಣದ ಪ್ರಮುಖರು, ಧಾರ್ಮಿಕ ಮುಖಂಡರು, ಪುರಸಭಾ ಸದಸ್ಯರು, ಸುತ್ತಮುತ್ತಲ ಗ್ರಾಮಸ್ಥರು ಇದ್ದರು.

ಮುಖ್ಯವೃತ್ತ, ಪೇಟೆ ಬೀದಿ ತುಂಬೆಲ್ಲ ಆಟಿಕೆ ಸಾಮಗ್ರಿ, ಬಳೆ ಅಂಗಡಿ ಸಾಲುಗಳು ಆಕ್ರಮಿಸಿದ್ದವು. ಉತ್ಸವದ ಕೊನೆಗೆ ಬಲೂನು ಹಾರಿಸಿ, ಪಟಾಕಿ ಸಿಡಿಸಿದರು. ಪೊಲೀಸರು ಸಂಚಾರ ವ್ಯವಸ್ಥೆ ನಿಯಂತ್ರಿಸಿ ಭದ್ರತೆ ಒದಗಿಸಿದ್ದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಶುಭಾಶಯ ಕೋರುವವರ ಫ್ಲೆಕ್ಸ್ ಹಾವಳಿ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.