ಚನ್ನಗಿರಿ: ‘ಅಡಿಕೆ ನಾಡು’ ಎಂಬ ಖ್ಯಾತಿ ಗಳಿಸಿರುವ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿರುವ ಚನ್ನಗಿರಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಕೈಗೊಳ್ಳಲಾದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.
ವಾಲಿಬಾಲ್, ಕೊಕ್ಕೊ, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ವೇಯ್ಟ್‌ಲಿಫ್ಟಿಂಗ್ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳು ತಾಲ್ಲೂಕಿನಲ್ಲಿ ಇದ್ದಾರೆ. ಕ್ರೀಡಾಪಟುಗಳ ತರಬೇತಿಗೆ ಉತ್ತೇಜನ ನೀಡಲು 2022ರಲ್ಲಿ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ₹ 3 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಭೂಮಿಪೂಜೆ ನೆರವೇರಿಸಿದ್ದರು.
6 ತಿಂಗಳಲ್ಲಿ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಮುಕ್ತಾಯಗೊಳ್ಳುವ ಭರವಸೆಯನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ನೀಡಿದ್ದರು. ಆದರೆ, ಕಾಮಗಾರಿ ಆರಂಭವಾಗಿ ವರ್ಷವಾಗುತ್ತ ಬಂದರೂ ಇನ್ನೂ ಮುಕ್ತಾಯಗೊಳ್ಳದೇ ಪ್ರಸ್ತುತ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ.
ಇದರಿಂದ ತಾಲ್ಲೂಕಿನ ಕ್ರೀಡಾಪಟುಗಳ ಕನಸು ಕನಸಾಗಿಯೇ ಉಳಿದಿದೆ. ಒಳಾಂಗಣ ಕ್ರೀಡಾಂಗಣವಾಗಿದ್ದರೆ ಶಟಲ್ ಬ್ಯಾಡ್ಮಿಂಟನ್, ಸ್ನೂಕರ್, ಬಿಲಿಯರ್ಡ್ಸ್, ಕೇರಂ, ಕೊಕ್ಕೊ, ಕಬಡ್ಡಿ, ಬ್ಯಾಸ್ಕೆಟ್‌ಮಬಾಲ್, ವಾಲಿಬಾಲ್, ಚೆಸ್ ಮುಂತಾದ ಕ್ರೀಡೆಗಳ ತರಬೇತಿಯನ್ನು ಪಡೆಯಲು ಅನುಕೂಲವಾಗುತ್ತಿತ್ತು. ಪಟ್ಟಣದಲ್ಲಿ ಕ್ರೀಡಾಪಟುಗಳು ತರಬೇತಿ ಪಡೆಯಲು ಸುಸಜ್ಜಿತ, ಸಕಲ ಸೌಲಭ್ಯವುಳ್ಳ ಕ್ರೀಡಾಂಗಣ ಇಲ್ಲ. ಈ ಕಾರಣದಿಂದ ಕ್ರೀಡಾಪಟುಗಳು ದಾವಣಗೆರೆ, ಶಿವಮೊಗ್ಗ ಮತ್ತಿತರ ನಗರ ಪ್ರದೇಶಗಳಿಗೆ ಹೋಗಿ ತರಬೇತಿ ಪಡೆದುಕೊಳ್ಳುವ ಅನಿವಾರ್ಯತೆ ಇದೆ.
ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರು ತಿಂಗಳಿಂದ ಸ್ಥಗಿತಗೊಂಡಿದೆ. ಕಾರಣ ಗೊತ್ತಾಗುತ್ತಿಲ್ಲ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಶೀಘ್ರ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಮುಕ್ತಾಯಗೊಳಿಸಲು ಮುಂದಾಗಬೇಕು.ಅಫ್ರೋಜ್ ಖಾನ್ ಪಟ್ಟಣದ ಹಿರಿಯ ಕ್ರೀಡಾಪಟು ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.