ಚನ್ನಗಿರಿ: ಪೊಲೀಸ್ ವಶದಲ್ಲಿದ್ದಾಗಲೇ ವ್ಯಕ್ತಿಯೊಬ್ಬ ಮೃತಪಟ್ಟಿದ್ದರಿಂದ ಉದ್ವಿಗ್ನಗೊಂಡಿದ್ದ ಪಟ್ಟಣ ಈಗ ಸಹಜ ಸ್ಥಿತಿಯತ್ತ ಮರಳಿದೆ. ಆದರೆ ಪಟ್ಟಣದ ಸನಿಹದಲ್ಲೇ ಇರುವ, ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಗ್ರಾಮಗಳಲ್ಲಿ ಈಗ ನೀರವ ಮೌನ ಆವರಿಸಿದೆ.
ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದಲ್ಲದೇ ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಈವರೆಗೂ 29 ಜನ ಬಂಧನಕ್ಕೊಳಪಟ್ಟಿದ್ದಾರೆ. ಪೊಲೀಸರು ಇನ್ನಷ್ಟು ಮಂದಿಯನ್ನು ಬಂಧಿಸಲು ಮುಂದಾಗಿದ್ದಾರೆ ಎಂಬ ವಿಷಯ ತಿಳಿದು ಭಯಭೀತರಾಗಿರುವ ಚನ್ನಗಿರಿ ಪಟ್ಟಣ, ಹೊನ್ನೇಬಾಗಿ, ನಲ್ಲೂರು ಹಾಗೂ ಆಗರಬನ್ನಿಹಟ್ಟಿ ಗ್ರಾಮದ 200ಕ್ಕೂ ಹೆಚ್ಚು ಕುಟುಂಬದವರು ಮನೆಗಳಿಗೆ ಬೀಗ ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಹೊನ್ನೇಬಾಗಿ ಗ್ರಾಮವೊಂದರಲ್ಲಿಯೇ 100 ಮನೆಗಳಿಗೆ ಬೀಗ ಹಾಕಲಾಗಿದೆ. ನಲ್ಲೂರಿನಲ್ಲಿ 60 ಹಾಗೂ ಆಗರಬನ್ನಿಹಟ್ಟಿ ಗ್ರಾಮದಲ್ಲಿ 40 ಕುಟುಂಬದವರು ಮನೆಗಳಿಗೆ ಬೀಗ ಹಾಕಿಕೊಂಡು ಊರು ತೊರೆದಿದ್ದಾರೆ. ಮುಸ್ಲಿಂ ಸಮುದಾಯದವರು ನಡೆಸುತ್ತಿದ್ದ ಬೇಕರಿ, ಗ್ಯಾರೇಜ್ ಹಾಗೂ ಗುಜರಿ ಅಂಗಡಿಗಳೂ ಐದು ದಿನಗಳಿಂದ ಬಂದ್ ಆಗಿವೆ.
‘ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಕಿಡಿಗೇಡಿಗಳನ್ನು ಬಂಧಿಸಲಿ. ಅದಕ್ಕೆ ನಮ್ಮ ವಿರೋಧವೇನೂ ಇಲ್ಲ. ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ತಪ್ಪಿತಸ್ಥರಲ್ಲದವರನ್ನೂ ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಇಡೀ ಸಮುದಾಯದಲ್ಲೇ ಭೀತಿ ಶುರುವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹೊನ್ನೇಬಾಗಿಯ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
‘ಜನರು ಮನೆಗಳಿಗೆ ಬೀಗ ಹಾಕಿ ಹೋಗಿರುವುದರಿಂದ ಇಡೀ ಗ್ರಾಮ ಬಿಕೋ ಎನ್ನುತ್ತಿದೆ. ಪೊಲೀಸರು ನಿರಪರಾಧಿಗಳು ಹಾಗೂ ಅಮಾಯಕರನ್ನು ಬಂಧಿಸಬಾರದು’ ಎಂದು ಅವರು ಮನವಿ ಮಾಡಿದರು.
ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ಮೇ 24ರಂದು ರಾತ್ರಿ ಆದಿಲ್ ಎಂಬುವವರನ್ನು ಪೊಲೀಸರು ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದರು. ಆಗ ಅವರು ಮೃತಪಟ್ಟಿದ್ದರು. ಇದು ‘ಲಾಕಪ್ ಡೆತ್’ ಎಂದು ಆರೋಪಿಸಿದ್ದ ಕುಟುಂಬಸ್ಥರು ಹಾಗೂ ಸಮುದಾಯದ ಕೆಲವರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ 7 ವಾಹನಗಳು ಜಖಂಗೊಂಡಿದ್ದವು. 11 ಮಂದಿ ಪೊಲೀಸರು ಗಾಯಗೊಂಡಿದ್ದರು.
ಸಿ.ಸಿ.ಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ನಿರಪರಾಧಿಗಳು ಭಯಪಡುವ ಅಗತ್ಯವಿಲ್ಲ. ಅಮಾಯಕರನ್ನು ಬಂಧಿಸುವುದಿಲ್ಲಆರ್. ಹಿತೇಂದ್ರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ
ಹೃದಯ ಸಂಬಂಧಿ ಕಾಯಿಲೆಯಿಂದ ಆದಿಲ್ ಸಾವು?
ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟ ಪಟ್ಟಣದ ನಿವಾಸಿ ಆದಿಲ್ ಖಲೀಂ ಉಲ್ಲಾ ಅವರ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ‘ಅದಿಲ್ ಮೃತದೇಹವನ್ನು ಈಚೆಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಡಿಮೆ ರಕ್ತದೊತ್ತಡದಿಂದಾಗಿ ಹೃದಯಸ್ತಂಭನಗೊಂಡು ಅವರು ಸಾವಿಗೀಡಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಸ್ಥಳೀಯ ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ’ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.