ADVERTISEMENT

ಚನ್ನಗಿರಿ: ಆಮೆಗತಿಯಲ್ಲಿ ಬಹು ಮಹಡಿ ಕಟ್ಟಡ ಕಾಮಗಾರಿ

ಚನ್ನಗಿರಿ: ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶ: ₹9 ಕೋಟಿ ವೆಚ್ಚದಲ್ಲಿ ನಿರ್ಮಾಣ

ಎಚ್.ವಿ. ನಟರಾಜ್‌
Published 14 ಜೂನ್ 2024, 7:54 IST
Last Updated 14 ಜೂನ್ 2024, 7:54 IST
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ಕಟ್ಟಡದ ನೋಟ
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ಕಟ್ಟಡದ ನೋಟ   

ಚನ್ನಗಿರಿ: ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. 

ತಾಲ್ಲೂಕಿನಲ್ಲಿ 61 ಗ್ರಾಮ ಪಂಚಾಯಿತಿಗಳಿವೆ. ಇವುಗಳ ವ್ಯಾಪ್ತಿಯ ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ತಾಲ್ಲೂಕು ಕೇಂದ್ರಕ್ಕೆ ಬಂದು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. 

ನಾಗರಿಕರು ಹೀಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ 2021-22 ನೇ ಸಾಲಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚಾಲನೆ ನೀಡಿದ್ದರು. ಇದಕ್ಕಾಗಿ ₹ 9 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿಸಿದ್ದರು. ಈ ಕಟ್ಟಡದಲ್ಲಿ ಒಟ್ಟು 5 ಅಂತಸ್ತುಗಳಿವೆ. ಸ್ವಂತ ಕಟ್ಟಡವೇ ಇಲ್ಲದ ಸರ್ಕಾರಿ ಕಚೇರಿಗಳು ಮುಂದೆ ಇಲ್ಲಿ ಕಾರ್ಯನಿರ್ವಹಿಸಲಿವೆ.  

ADVERTISEMENT

ಈ ಬಹುಮಹಡಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡು 2 ವರ್ಷ ಕಳೆಯುತ್ತಾ ಬಂದಿದೆ. ಇಷ್ಟಾದರೂ ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ. ಇದು ನಾಗರಿಕರ ಬೇಸರಕ್ಕೂ ಕಾರಣವಾಗಿದೆ.   

‘ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ 5 ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ. ಸದ್ಯ ಪಟ್ಟಣದಲ್ಲಿ ಒಂದು ಸರ್ಕಾರಿ ಕಚೇರಿಯಿಂದ ಮತ್ತೊಂದು ಕಚೇರಿಗೆ ಹೋಗಬೇಕಾದರೆ 1 ಕಿ.ಮೀ ದೂರ ಕ್ರಮಿಸುವ ಸ್ಥಿತಿ ಇದೆ. ಹಳ್ಳಿಗಳಿಂದ ಬರುವ ವೃದ್ಧರು, ಅಂಗವಿಕಲರು ಸರ್ಕಾರಿ ಕಚೇರಿಗಳನ್ನು ಹುಡುಕಿಕೊಂಡು ಅಲ್ಲಿ ತಲುಪುವುದಕ್ಕೆ ಪ್ರಯಾಸ ಪಡುವಂತಾಗಿದೆ’ ಎಂದು ಹಿರೇಕೋಗಲೂರು ಗ್ರಾಮದ ಜಗದೀಶ್ ಹೇಳುತ್ತಾರೆ. 

‘ಬಹುಮಹಡಿ ಕಟ್ಟಡ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡರೆ ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸೂರಿನಲ್ಲಿ ಕಾರ್ಯನಿರ್ವಹಿಸುವಂತಾಗುತ್ತದೆ. ಇದರಿಂದ ಜನರು ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವುದೂ ತಪ್ಪುತ್ತದೆ. ಸಂಬಂಧಪಟ್ಟಣ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗನೇ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮುಂದಾಗಬೇಕು’ ಎಂದು ಒತ್ತಾಯಿಸುತ್ತಾರೆ. 

‘ಈಗಾಗಲೇ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದೆ. ಚುನಾವಣೆ ಹಾಗೂ ಅನುದಾನ ಬಿಡುಗಡೆ ವಿಳಂಬದ ಕಾರಣದಿಂದಾಗಿ ನಾಲ್ಕು ತಿಂಗಳು ಕಾಮಗಾರಿ ನಿಧಾನಗತಿಯಲ್ಲಿ ನಡೆಯಿತು.  ಈಗಾಗಲೇ ₹ 8 ಕೋಟಿ ಅನುದಾನ ಬಿಡುಗಡೆಯಾಗಿದೆ. ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಲೋಕಾರ್ಪಣೆಗೆ ಸಿದ್ಧವಾಗಲಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.