ADVERTISEMENT

ನಲ್ಲೂರು: ವಿವಾದಾತ್ಮಕ ಸ್ಟೇಟಸ್‌ ಹಾಕಿಕೊಂಡಿದ್ದ ಯುವಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 8:13 IST
Last Updated 10 ಫೆಬ್ರುವರಿ 2022, 8:13 IST
ಯುವಕ ಮನೆಯ ಮೇಲೆ ಗುಂಪು ಹಲ್ಲೆ– ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಸ್ಕ್ರೀನ್‌ ಶಾಟ್‌
ಯುವಕ ಮನೆಯ ಮೇಲೆ ಗುಂಪು ಹಲ್ಲೆ– ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಸ್ಕ್ರೀನ್‌ ಶಾಟ್‌   

ಚನ್ನಗಿರಿ: ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ವಿವಾದಾತ್ಮಕ ಫೋಟೊವನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಯುವಕ ಮನೆಯ ಮೇಲೆ ಸುಮಾರು 300 ಜನರಿದ್ದ ಗುಂಪು ಬುಧವಾರ ರಾತ್ರಿ ದಾಳಿ ನಡೆಸಿದೆ. ಘಟನೆಯಲ್ಲಿ ಯುವಕ ಹಾಗೂ ಆತನ ತಾಯಿ ಗಾಯಗೊಂಡಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ನಲ್ಲೂರು ಗ್ರಾಮದಲ್ಲಿ ನವೀನ್‌ (25) ಎಂಬ ಯುವಕ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ವಿವಾದಾತ್ಮಕ ಫೋಟೊವನ್ನು ಹಾಕಿಕೊಂಡಿದ್ದ. ಇದರಿಂದ ಕೆರಳಿದ ಒಂದು ಸಮುದಾಯದವರು ಬುಧವಾರ ರಾತ್ರಿ ಬಡಿಗೆ, ಮಾರಕಾಸ್ತ್ರಗಳೊಂದಿಗೆ ಯುವಕನ ಮನೆಯ ಮುಂದೆ ಜಮಾವಣೆಗೊಂಡಿದ್ದಾರೆ. ಕೆಲವರು ಮನೆಯೊಳಗೆ ನುಗ್ಗಿ ಯುವಕನ ಮೇಲೆ ದಾಳಿ ಮಾಡಿದ್ದಾರೆ. ಜೊತೆಗೆ ಆತನ ತಾಯಿ ಸರೋಜಮ್ಮ (60) ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ನವೀನ್‌ ಹಾಗೂ ಸರೋಜಮ್ಮ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಗುಂಪು ಹೋಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.

ಗ್ರಾಮದಲ್ಲಿ ರಾತ್ರಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಸುದ್ದಿ ತಿಳಿದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರೂ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಮುಂದಾದರು.

ADVERTISEMENT

ಗುರುವಾರ ಗ್ರಾಮದಲ್ಲಿ ಪೊಲೀಸರು ಶಾಂತಿ ಸಭೆಯನ್ನು ನಡೆಸಿದ್ದಾರೆ. ಬಿಗುವಿನ ವಾತಾವರಣ ಇದ್ದುದರಿಂದ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.