ಚನ್ನಗಿರಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದರಿಂದ, ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ.
ಇದೇ ರಸ್ತೆಯಲ್ಲಿ ತಾಲ್ಲೂಕು ಕಚೇರಿ, ಮುಖ್ಯ ಅಂಚೆ ಕಚೇರಿ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ನಿಲಯ, ಲೋಕೋಪಯೋಗಿ ಇಲಾಖೆ ಕಚೇರಿ, ಸರ್ಕಾರಿ ದಪವಿ ಪೂರ್ವ ಕಾಲೇಜು, ಗ್ಯಾಸ್ ಏಜೆನ್ಸಿ ಕಚೇರಿ, ಪತ್ರ ಬರಹಗಾರರ ಕಚೇರಿ ಸೇರಿದಂತೆ ಹಲವು ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಿವೆ. ಹೀಗಾಗಿ ಈ ರಸ್ತೆ ಸದಾ ಜನಸಂದಣಿಯಿಂದ ಕೂಡಿರುತ್ತದೆ.
ಪೊಲೀಸ್ ವಸತಿಗೃಹ, ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿಗೃಹಗಳಿಗೆ ಈ ರಸ್ತೆ ದಾಟಿಕೊಂಡೇ ಹೋಗಬೇಕು. ಪ್ರತಿ ದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆ, ಪತ್ರ ಬರಹಗಾರರ ಕಚೇರಿಗಳಿಗೆ ದ್ವಿಚಕ್ರ ವಾಹನಗಳಲ್ಲಿ ಬರುವ ಸಾರ್ವಜನಿಕರು ರಸ್ತೆಬದಿಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡಿ ಹೋಗುತ್ತಾರೆ. ಹೀಗಾಗಿ ತುರ್ತು ಚಿಕಿತ್ಸೆ ವಾಹನಗಳು ಸಹ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಹಸಪಡಬೇಕಾಗಿದೆ. ರಸ್ತೆ ಕೂಡಾ ಕಿರಿದಾಗಿದ್ದು, ವಾಹನಗಳನ್ನು ಓಡಿಸಲು ತುಂಬಾ ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ರಸ್ತೆಯಲ್ಲಿ ಇಷ್ಟೆಲ್ಲಾ ಸಮಸ್ಯೆಯಾಗುತ್ತಿದ್ದರೂ ಕೂಡಾ ಪೊಲೀಸ್ ಇಲಾಖೆಯಾಗಲೀ ಅಥವಾ ಪುರಸಭೆಯವರಾಗಲೀ ಗಮನ ಹರಿಸುತ್ತಿಲ್ಲ. ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಕ್ರಮ ತೆಗೆದುಕೊಂಡರೆ, ಆಸ್ಪತ್ರೆಗೆ ಹೋಗುವ ವಾಹನಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ರೋಗಿಯ ಸಂಬಂಧಿರೊಬ್ಬರು ಹೇಳಿದ್ದಾರೆ.
‘ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ತುಂಬಾ ದೊಡ್ಡದಾಗಿ ಬೆಳೆದಿದೆ. ಪುರಸಭೆ ಸಿಬ್ಬಂದಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜನಸಂದಣಿ ಹೊಂದಿರುವ ಈ ರಸ್ತೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದರೆ ದ್ವಿಚಕ್ರ ವಾಹನಗಳನ್ನು ಒಂದೆಡೆ ನಿಲುಗಡೆ ಮಾಡುವಂತೆ ನಿಯಮ ರೂಪಿಸಬೇಕಿದೆ’ ಎಂದು ಪಟ್ಟಣದ ವಾಸಿ ಪುನೀತ್ ಸಲಹೆ ನೀಡಿದ್ದಾರೆ.
‘ಜನಸಂದಣಿ ಹೊಂದಿರುವ ರಸ್ತೆಗಳ ಬದಿಯಲ್ಲಿ ವಾಹನಗಳ ನಿಲುಗಡೆ ಮಾಡಬಾರದು ಎಂದು ಗೊತ್ತಿದ್ದರೂ, ದ್ವಿಚಕ್ರ ವಾಹನಗಳಲ್ಲಿ ಬರುವ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಹೋಗುವುದು ಸಾಮಾನ್ಯ ಎಂಬಂತಾಗಿದೆ. ಪಟ್ಟಣದಲ್ಲಿ ರಸ್ತೆಗಳು ಕಿರಿದಾಗಿದ್ದು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಜಾಗದ ಕೊರತೆ ಇದೆ. ವಾಹನ ಸವಾರರು ನಿಗದಿತ ಜಾಗದಲ್ಲಿ ನಿಲುಗಡೆ ಮಾಡಿ ಹೋದರೇ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಮದ್ ವಾಸೀಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.