ಚನ್ನಗಿರಿ: ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 100ರಿಂದ 250 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ.
ಪ್ರಸ್ತುತ ತಾಲ್ಲೂಕು ಕೇಂದ್ರದಲ್ಲಿರುವ 100 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆರೋಗ್ಯ ಕೇಂದ್ರ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುವುದರಿಂದ ತಾಲ್ಲೂಕಿನ ಜನ ಅಗತ್ಯ ಚಿಕಿತ್ಸೆಗಾಗಿ 60 ಕಿ.ಮೀ. ದೂರದ ಶಿವಮೊಗ್ಗ ಅಥವಾ ದಾವಣಗೆರೆ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಜತೆಗೆ ಈ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿದರೂ ತಜ್ಞ ವೈದ್ಯರ ಹಾಗೂ ಅಗತ್ಯ ಉಪಕರಣಗಳ ಕೊರತೆ ಇರುವುದರಿಂದ ಕೆಲ ರೋಗಿಗಳನ್ನು ಶಿವಮೊಗ್ಗ ಅಥವಾ ದಾವಣಗೆರೆ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆದುಕೊಳ್ಳುವಂತೆ ಇಲ್ಲಿನ ವೈದ್ಯರು ಸಲಹೆ ನೀಡಿ ಕಳುಹಿಸುತ್ತಿದ್ದರು.
ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ಜನರು ವಾಸಿಸುತ್ತಿದ್ದು, ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಷ್ಟು ಆರ್ಥಿಕವಾಗಿ ಶಕ್ತರಾಗಿಲ್ಲ. ಅಂತೆಯೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಸರ್ಕಾರಕ್ಕೆ 250 ಹಾಸಿಗೆಗಳ ಸಾಮರ್ಥ್ಯವುಳ್ಳ ವಿಭಾಗೀಯ ಆಸ್ಪತ್ರೆ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಫಲವಾಗಿ ಸರ್ಕಾರ ಈಚೆಗೆ ಬೆಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ವಿಭಾಗೀಯ ಆಸ್ಪತ್ರೆಯನ್ನು ಮಂಜೂರು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಶಿಫಾರಸು ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಚನ್ನಗಿರಿ ಪಟ್ಟಣದಲ್ಲಿ ವಿಭಾಗೀಯ ಆಸ್ಪತ್ರೆ ನಿರ್ಮಾಣಕ್ಕೆ ಆಡಳಿತ್ಮಾಕ ಅನುಮೋದನೆಯನ್ನು ಶನಿವಾರ ನೀಡಿದ್ದಾರೆ. ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣನ್ನು ಒಳಗೊಂಡಂತೆ ನೂತನ ಕಟ್ಟಡ ನಿರ್ಮಾಣಕ್ಕೆ ₹ 26.50 ಕೋಟಿ ಅನುದಾನವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ಜತೆಗೆ ನೂತನ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವೇತನಕ್ಕಾಗಿ ಆವರ್ತಕ ವೆಚ್ಚ ₹7.67 ಕೋಟಿ ಸೇರಿ ಒಟ್ಟಾರೆ ನೂತನ ಆಸ್ಪತ್ರೆ ನಿರ್ಮಾಣಕ್ಕೆ ₹ 34.17 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಒಂದು ತಿಂಗಳಲ್ಲಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ಈ ಆಸ್ಪತ್ರೆ ನಿರ್ಮಾಣವಾದರೆ ತಾಲ್ಲೂಕಿನ ಕಡು ಬಡವರು ಅಗತ್ಯ ತುರ್ತು ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ತಾಲ್ಲೂಕಿನ ಬಡ ಜನರು ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗ ಅಥವಾ ದಾವಣಗೆರೆಗಳಿಗೆ ಹೋಗಬೇಕಿತ್ತು. ಇದನ್ನು ಮನಗಂಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.
- ಮಾಡಾಳ್ ವಿರೂಪಾಕ್ಷಪ್ಪ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.