ದಾವಣಗೆರೆ: ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ–777’ ಸಿನಿಮಾದ ಪ್ರೇರಣೆಯಿಂದ ನಗರದಲ್ಲಿ ಶ್ವಾನಗಳಿಗೆ ಬೇಡಿಕೆ ಬಂದಿದೆ. ಸಾಕುಪ್ರಾಣಿಗಳ ಕುರಿತ ಮಾನವೀಯ ಸಂಬಂಧದ ಚಿತ್ರದ ಕಥೆ ಪ್ರಾಣಿಪ್ರಿಯರ ಮೇಲೆ ಪ್ರಭಾವ ಬೀರಿದ್ದು, ಶ್ವಾನಗಳನ್ನು ಸಾಕುವ ಮನೋಭಾವದ ಜನರು ಅವುಗಳ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ.
ಚಿತ್ರ ವೀಕ್ಷಿಸಿದಮಕ್ಕಳ ಒತ್ತಾಯದಿಂದಲೂ ಶ್ವಾನ ಖರೀದಿಗೆ ಪಾಲಕರು ಉತ್ಸುಕತೆ ತೋರುತ್ತಿದ್ದಾರೆ.
ಶ್ವಾನಗಳಿಗೆ ಅದರಲ್ಲೂ ಲ್ಯಾಬ್ರೆಡ್ರಾರ್ ಜಾತಿಯ ನಾಯಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಶ್ವಾನಗಳ ಬಗ್ಗೆ ತಿಳಿಯಲು ಹೆಚ್ಚು ಜನರು ಆಸಕ್ತಿ ತೋರುತ್ತಿದ್ದು, ಬ್ರೀಡರ್‌ಗಳು, ಶ್ವಾನಗಳಿಗೆ ಸಂಬಂಧಿಸಿದ ಅಂಗಡಿ (ಪೆಟ್ ಶಾಪ್)ಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
ಶ್ವಾನಗಳ ದರದಲ್ಲೂ ಹೆಚ್ಚಳವಾಗಿದೆ. ಕಳೆದ ತಿಂಗಳು ಸಾಮಾನ್ಯ ಜಾತಿಯ ಶ್ವಾನದ ಮರಿಯೊಂದಕ್ಕೆ ₹ 8 ಸಾವಿರದಿಂದ ₹ 10 ಸಾವಿರ ಬೆಲೆ ಇತ್ತು. ಈ ತಿಂಗಳು ಅದು ₹ 10 ಸಾವಿರದಿಂದ ₹12 ಸಾವಿರಕ್ಕೆ ಏರಿದೆ ಎನ್ನುತ್ತಾರೆ ಶ್ವಾನ ಸಾಕಾಣಿಕೆದಾರರು.
‘ಹತ್ತು ಜನ ಶ್ವಾನಗಳನ್ನು ಸಾಕಲು ಕೇಳಿಕೊಂಡು ಬಂದರೆ ಅದರಲ್ಲಿ ಕನಿಷ್ಠ ಮೂವರು ಖರೀದಿಸುತ್ತಿದ್ದಾರೆ. ಶ್ವಾನಗಳನ್ನು ಸಾಕುವ ಬಗೆ, ಅವುಗಳ ಔಷಧ, ಚುಚ್ಚುಮದ್ದು, ಆರೈಕೆ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಕೆಲವರು ಖರೀದಿಸುತ್ತಿದ್ದಾರೆ. ಶ್ವಾನಗಳನ್ನು ಸಾಕುವುದಕ್ಕೆ ಮುಖ್ಯವಾಗಿ ಬದ್ಧತೆ ಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು ಶ್ವಾನ ಸಾಕಾಣಿಕೆದಾರ ವಿದ್ಯಾನಗರದ ‘ಬ್ರದರ್‌ಗ್ರೂಪ್’ ಶ್ವಾನಕೇಂದ್ರದ ಆರ್.ಎಸ್. ನಂದೀಶ್
‘ಕ್ರಾಸ್ ಬ್ರೀಡಿಂಗ್ ಆಗದ, ವಿದೇಶದಲ್ಲೇ ಬ್ರೀಡ್ ಆದ ಉತ್ತಮ ತಳಿಯ ಲ್ಯಾಬ್ರೆಡಾರ್ ಶ್ವಾನಗಳಿಗೆ ₹ 50 ಸಾವಿರದಿಂದ ₹ 70 ಸಾವಿರದವರೆಗೂ ಬೆಲೆ ಇದೆ. ಒಳ್ಳೆಯ ತಳಿಯಲ್ಯಾಬ್ರೆಡಾರ್‌ನ ಬೆಲೆ ₹ 25 ಸಾವಿರದಿಂದ ಆರಂಭವಾಗುತ್ತದೆ.ಜರ್ಮನ್ ಶಫರ್ಡ್, ರ‍್ಯಾಟ್‌ವಿಲ್ಲರ್, ರೆಟ್ರಿವಿವರ್, ಲ್ಯಾಬ್ರೆಡಾರ್ ತಳಿಯ ಶ್ವಾನಗಳನ್ನು ಸಾಕಿದ್ದೇನೆ’ ಎನ್ನುತ್ತಾರೆ ಅವರು.
ಸಿನಿಮಾದಲ್ಲಿ ಬೀದಿನಾಯಿಗಳನ್ನು ರಕ್ಷಿಸಿ ಸಾಕುವ ಸಂದೇಶ ಇದೆ. ಹೀಗಾಗಿ ಬೇರೆ ನಗರಗಳಲ್ಲಿ ರಕ್ಷಣೆ ಮಾಡಲಾದ ಶ್ವಾನಗಳನ್ನು ಸಾಕಲು ಆಸಕ್ತಿ ತೋರುತ್ತಿದ್ದಾರೆ. ದಾವಣಗೆರೆಯಲ್ಲಿ ರಕ್ಷಣೆ ಮಾಡುವ ತಂಡ ಅಥವಾ ಸಂಸ್ಥೆಗಳಿಲ್ಲ. ಹೀಗಾಗಿ ಅಂತಹ ಶ್ವಾನಗಳಿಗೆ ಬೇಡಿಕೆ ಇಲ್ಲ. ಆದರೆ ಶ್ವಾನಗಳ ಬಗ್ಗೆ ವಿಚಾರಿಸುತ್ತಿರುವವರು ಹೆಚ್ಚಾಗಿದ್ದಾರೆ ಎಂದರು ಅವರು.
‘ಸಿನಿಮಾದ ಬಳಿಕ ಶ್ವಾನಗಳಿಗೆ ಬೇಡಿಕೆ ಬಂದಿದೆ. ಕಳೆದ ಎರಡು–ಮೂರು ತಿಂಗಳಿಗೆ ಹೋಲಿಸಿದರೆ ಈ ತಿಂಗಳು 6ಕ್ಕೂ ಹೆಚ್ಚು ಮರಿಗಳು ಮಾರಾಟವಾಗಿವೆ’ ಎಂದರು ಶ್ವಾನ ಸಾಕಾಣಿಕೆದಾರ ಮಣಿಕಂಠ.
‘ಚಾರ್ಲಿಸಿನಿಮಾದಿಂದ ಜನರಲ್ಲಿ ಶ್ವಾನ ಸಾಕುವ ಕ್ರೇಜ್ ಹೆಚ್ಚಾಗಿದೆ. ಬಹಳಷ್ಟು ಮಂದಿ ವಿಚಾರಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಿಗೆ ಹಾಕಿದ್ದ ರೀತಿಯದ್ದೇ ನೆಕ್ ಬೆಲ್ಟ್ ಸೇರಿ ಕೆಲ ಪರಿಕರಗಳು ಬೇಕು ಎಂದೂ ಬಯಸುತ್ತಿದ್ದಾರೆ. ಶ್ವಾನಗಳು ಹಾಗೂ ಅವುಗಳ ಆಹಾರದ ಬೇಡಿಕೆಯೂ ಹೆಚ್ಚಾಗಿದೆ’ ಎಂದರು ಶ್ವಾನಗಳಿಗೆ ಸಂಬಂಧಿಸಿದ ಪರಿಕರಗಳ ಅಂಗಡಿ ‘ಪೆಟ್ ಪ್ಯಾರಡೈಸ್’ನ ಪ್ರದೀಪ್.
‘ಚಿತ್ರದಲ್ಲಿನ ಸಾಕುಪ್ರಾಣಿಗಳಭಾವನಾತ್ಮಕ ಸಂಬಂಧ ನೋಡಿ ಇಷ್ಟವಾಗಿ ಶ್ವಾನ ಖರೀದಿಸಿದ್ದೇನೆ. ಅದರ ಪರಿಕರಗಳ ಅಂಗಡಿಗಳ ಬಗ್ಗೆಯೂ ವಿಚಾರಿಸಿದ್ದೇನೆ‘ ಎಂದು ಖುಷಿಯಿಂದಲೇ ಹೇಳಿದರು ಸರಸ್ವತಿ ನಗರದ ಅನುಪಮ.
*
ಚಾರ್ಲಿಸಿನಿಮಾಬಿಡುಗಡೆಯಾದ ನಂತರ ಬಹಳಷ್ಟು ಮಂದಿ ಅಂಗಡಿಗೆ ಬಂದು ಶ್ವಾನಗಳು ಹಾಗೂ ಅವುಗಳ ಆಹಾರದ ಬಗ್ಗೆ ವಿಚಾರಿಸುತ್ತಿದ್ದಾರೆ. ಕೆಲವರಿಗೆ ಸಾಕಾಣೆಕೆದಾರರ ಮಾಹಿತಿಯನ್ನೂ ನೀಡಿದ್ದೇನೆ.
–ಪ್ರದೀಪ್, ಪೆಟ್ ಪಾರಡೈಸ್‌ನ ಮಾಲೀಕ, ನಿಜಲಿಂಗಪ್ಪ ಲೇಔಟ್
*
ಲಾಬ್ರೆಡಾರ್ ಜಾತಿಯ ಶ್ವಾನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಮೊದಲಿನಿಂದಲೂ ಶ್ವಾನ ಸಾಕಬೇಕು ಎಂದು ಆಸಕ್ತಿ ಹೊಂದಿದವರು ಹೆಚ್ಚು ಖರೀದಿಸುತ್ತಿದ್ದಾರೆ.
–ಆರ್.ಎಸ್. ನಂದೀಶ್, ‘ಬ್ರದರ್‌ಗ್ರೂಪ್’ ಶ್ವಾನಕೇಂದ್ರ, ವಿದ್ಯಾನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.