ದಾವಣಗೆರೆ: ಬಿಸಿಲ ತಾಪದಿಂದ ಕೋಳಿಗಳ ಉತ್ಪಾದನೆ ಕಡಿಮೆಯಾಗಿದ್ದು, ದರ ನಿಯಂತ್ರಣ ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿರುವುದರಿಂದ ಕೋಳಿ ಮಾಂಸದ ದರ ದುಬಾರಿಯಾಗಿದ್ದು, ಜಿಲ್ಲೆಯಲ್ಲಿ ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
‘ಚಿಕನ್ ಸ್ಟಾಲ್‌ಗಳಲ್ಲಿ ಚರ್ಮಸಹಿತ ಕೋಳಿ ಒಂದು ಕೆ.ಜಿಗೆ ₹ 260–₹ 280, ಚರ್ಮರಹಿತ ಕೋಳಿಗೆ ₹280–₹300 ಹಾಗೂ ಜೀವಂತ ಕೋಳಿಗೆ ₹ 180–₹ 190 ದರವಿದೆ’ ಎಂದು ಜಿಲ್ಲಾ ಹಲಾಲ್ ಕೋಳಿ ಮಾರಾಟ ಅಂಗಡಿದಾರರ ಸಂಘದ ಅಧ್ಯಕ್ಷ ಶಂಶು ತಬ್ರೀಜ್ (ಚಾರ್ಲಿ) ಪ್ರಜಾವಾಣಿಗೆ ತಿಳಿಸಿದರು.
‘ತಂಪು ಪ್ರದೇಶದಲ್ಲಿ ಬದುಕುವ ಕೋಳಿಗಳಿಗೆ ಈ ಬಾರಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಕೋಳಿಗಳ ಉತ್ಪಾದನೆ ಕಡಿಮೆಯಾಗಲು ಕಾರಣ. ಕೋಳಿ ಸಾಕಣೆಗೆ ಬೇಕಾಗುವ ಕಚ್ಚಾ ವಸ್ತುಗಳು, ಮೇವು, ಕೂಲಿ ಸೇರಿದಂತೆ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ನಷ್ಟವಾಗಿ ಕೋಳಿ ಸಾಕಣೆದಾರರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರಿಂದ ಮಾಂಸದ ದರ ಹೆಚ್ಚಾಗಲು ಕಾರಣ’ ಎಂದು ಅವರು ತಿಳಿಸಿದರು.
‘ಬಿಸಿಲಿನಲ್ಲಿ ಕೋಳಿಗಳು ಆಹಾರ ತಿನ್ನುವುದಿಲ್ಲ. ಬದಲಾಗಿ ನೀರನ್ನೇ ಹೆಚ್ಚು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಇದರಿಂದಾಗಿ ರೈತರು ಉತ್ಪಾದನೆಯನ್ನು ಸ್ಥಗಿತಗೊಳಿಸಿದರು. ಬಿಸಿಲ ತಾಪಕ್ಕೆ ದೊಡ್ಡದಾಗುವ ಹಂತದಲ್ಲಿಯೇ ಮರಿಗಳು ಸಾವನ್ನಪ್ಪಿದ್ದು, ಹೆಚ್ಚಿನ ಕೋಳಿಗಳು ಉತ್ಪಾದನೆಯಾಗಲಿಲ್ಲ. ಅಲ್ಲದೇ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹಬ್ಬ, ಮದುವೆ ಮುಂತಾದ ಕಾರ್ಯಕ್ರಮಗಳು ಇರುವುದಿಂದ ಹೆಚ್ಚಿನ ಪ್ರಮಾಣದ ಕೋಳಿಗಳು ಮಾರಾಟವಾಗಿ ಈಗ ಕೊರತೆಯಾಗಿದೆ’ ಎಂದು ಶಂಶು ತಬ್ರೀಜ್ ಹೇಳಿದರು.
‘ಕೋಳಿ ದರ ನಿಗದಿ ಮಾಡುವ ಅಧಿಕಾರ ವೆಂಕಾಬ್, ಸುಗುಣ, ಗೋದ್ರೇಜ್, ಸಿಬಿ, ಐಬಿ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಯಲ್ಲಿದ್ದು, ರೈತರು (ಕೋಳಿ ಸಾಕಣೆದಾರರು) ಬಳಿ ಕೋಳಿಗಳು ಇಲ್ಲದಿರುವ ಸಮಯವನ್ನು ನೋಡಿ ಕೃತಕ ಅಭಾವ ಸೃಷ್ಟಿಸಿ ಕೋಳಿ ಮಾಂಸದ ಬೆಲೆಯನ್ನು ಹೆಚ್ಚಿಸಿವೆ’ ಎಂದು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಧ್ಯಕ್ಷ ಮಲ್ಲಾಪುರ ದೇವರಾಜ್ ಆರೋಪಿಸಿದರು.
‘ಜನವರಿಯಿಂದ ಏಪ್ರಿಲ್ ತಿಂಗಳ ಅವಧಿಯಲ್ಲಿ ರೈತರು ಮೇವು, ಕೂಲಿ ಸೇರಿದಂತೆ ಒಂದು ಕೆ.ಜಿ. ಕೋಳಿ ಉತ್ಪಾದಿಸಲು ₹ 70ರಿಂದ ₹75 ವೆಚ್ಚ ಮಾಡಿದರು. ಆದರೆ ಆ ವೇಳೆಯಲ್ಲಿ ಕಂಪನಿಗಳು ರೈತರಿಂದ ಕೊಂಡುಕೊಳ್ಳುವ ದರವನ್ನು ₹60ರಿಂದ ₹70 ದರ ನಿಗದಿಪಡಿಸಿದರು. ಇದರಿಂದಾಗಿ ನಷ್ಟವಾಗಿ ಕೋಳಿಗಳನ್ನು ಉತ್ಪಾದಿಸುವುದನ್ನು ಬಂದ್ ಮಾಡಿದರು. ಅದರ ಪರಿಣಾಮವಾಗಿ ಈಗ ಬೆಲೆ ಏರಿಕೆ ಕಂಡಿದೆ. ರೈತರ ಬಳಿ ಕೋಳಿ ಇಲ್ಲದಿರುವುದನ್ನು ಮನಗಂಡು ಈಗ ಬೆಲೆ ಹೆಚ್ಚಿಸಿವೆ. ಇನ್ನೂ ಎರಡು ತಿಂಗಳು ಇದೇ ದರವನ್ನು ಮುಂದುವರೆಸಲಿವೆ’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಕೋಳಿ ಮಾರುಕಟ್ಟೆಯನ್ನು ನಿಯಂತ್ರಿಸುವ ಅಧಿಕಾರವನ್ನು ಕಂಪನಿಗಳ ಕೈಗೆ ನೀಡಬಾರದು. ಸರ್ಕಾರವೇ ನಿಯಂತ್ರಿಸಬೇಕು. ರಾಜಕಾರಣಿಗಳು ಅಧಿಕಾರಿಗಳು ಅವರ ಮಾಫಿಯಾಕ್ಕೆ ಬಲಿಯಾಗಿದ್ದಾರೆ. ಈ ಕುರಿತು ಹೋರಾಟ ಮಾಡುತ್ತೇವೆ-ಮಲ್ಲಾಪುರ ದೇವರಾಜ್ ರಾಜ್ಯ ಕಾರ್ಯಾಧ್ಯಕ್ಷ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.