ADVERTISEMENT

ದಾವಣಗೆರೆ: ನಗರದಲ್ಲಿ ಚಿತ್ರಸಂತೆ ನಾಳೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 4:53 IST
Last Updated 25 ಫೆಬ್ರುವರಿ 2023, 4:53 IST

ದಾವಣಗೆರೆ: ನಗರದ ಎ.ವಿ.ಕೆ. ಕಾಲೇಜು ರಸ್ತೆಯಲ್ಲಿ ಫೆಬ್ರುವರಿ 26ರಂದು ಬೆಳಿಗ್ಗೆ 8ರಿಂದ ಸಂಜೆ 7ರವರಗೆ ಚಿತ್ರಸಂತೆ ನಡೆಯಲಿದೆ ಎಂದು ಚಿತ್ರಸಂತೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್ ತಿಳಿಸಿದರು.

ಚಿತ್ರಸಂತೆಗೆ ಹಂದರ ಗಂಬದ ಪೂಜೆ ಹಮ್ಮಿಕೊಂಡಿದ್ದು, ಫೆ.25ರಂದು ಬೆಳಿಗ್ಗೆ 10ಕ್ಕೆ ಮೇಯರ್ ಜಯಮ್ಮ ಗೋಪಿನಾಯ್ಕ ನೆರವೇರಿಸಲಿದ್ದಾರೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ರಾಜಸ್ಥಾನದಿಂದ 130ಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೊರ ರಾಜ್ಯದಿಂದ ಬರುವ ಕಲಾವಿದರಿಗೆ ವಸತಿ, ಬೆಣ್ಣೆದೋಸೆ, ಮಧ್ಯಾಹ್ನದ ಊಟ, ಚಹಾ, ಖಾರ ಮಂಡಕ್ಕಿ ನೀಡುವ ವ್ಯವಸ್ಥೆ ಮಾಡಲಾಗಿದೆ. ‘ಬೆಸ್ಟ್ ಸ್ಟಾಲ್’ ಹಾಗೂ ‘ಬೆಸ್ಟ್ ಪೇಂಟಿಂಗ್’ ವಿಭಾಗದಲ್ಲಿ 6 ಬಹುಮಾನಗಳನ್ನು ನೀಡಲಾಗುವುದು. ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಕಲಾವಿದರಿಗೆ ನಗದು ರೂಪದಲ್ಲಿ ಬಹುಮಾನ ನೀಡಲಾಗುತ್ತದೆ. ವ್ಯಂಗ್ಯಚಿತ್ರಕಾರ ಎಚ್‌.ಬಿ. ಮಂಜುನಾಥ್‌, ‘ಪ್ರಜಾವಾಣಿ’ ದಾವಣಗೆರೆ ಬ್ಯುರೊ ಮುಖ್ಯಸ್ಥ ‌ಸಿದ್ದಯ್ಯ ಹಿರೇಮಠ, ಗುಜರಾತ್‌ನ ರಶ್ಮಿ ಸುತಾರ್‌ ಬಹುಮಾನ ವಿತರಿಸುವರು ಎಂದು ಮಾಹಿತಿ ನೀಡಿದರು.

ADVERTISEMENT

ಫೆ. 26ರಂದು ಬೆಳಿಗ್ಗೆ 10.30ಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರ, ಪ್ರೊ.ಎನ್. ಲಿಂಗಣ್ಣ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಮೇಯರ್ ಜಯಮ್ಮ ಗೋಪಿನಾಯ್ಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 5.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ದಾವಿವಿ ಕುಲಪತಿ ಬಿ.ಡಿ. ಕುಂಬಾರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ. ರಿಷ್ಯಂತ್, ಜಿ.ಪಂ. ಸಿಇಒ ಡಾ.ಎ.ಚನ್ನಪ್ಪ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರಕಲಾ ಪರಿಷತ್‌ನ ಶೇಷಾಚಲ ಡಿ., ರವಿ ಹುದ್ದಾರ್, ಸಂತೋಶ್, ಮಯೂರ್, ಶಾಂತಯ್ಯ ಪರಡಿಮಠ, ಚನ್ನಬಸವನಗೌಡ್ರು, ಗಣೇಶ್ ಆಚಾರ್ಯ, ಶಿವಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.