ದಾವಣಗೆರೆ: ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರಮಂದಿರಗಳಿಗೆ ಹಸಿರು ನಿಶಾನೆ ಸಿಕ್ಕಿದೆ. ಸ್ಟಾರ್ ನಟರ ಚಿತ್ರಗಳು ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿವೆ. ಆದರೂ ಥಿಯೇಟರ್ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಸಣ್ಣಪುಟ್ಟ ಸಿನಿಮಾಗಳಿಗೆ ಪ್ರೇಕ್ಷಕರು ಬರುವುದು ಕಡಿಮೆಯೇ. ಆದ್ದರಿಂದ ಥಿಯೇಟರ್‌ಗಳ ಮಾಲೀಕರಿಗೆ ಸ್ಟಾರ್ ನಟರ ಚಿತ್ರಗಳೇ ಬೇಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ 8 ಥಿಯೇಟರ್‌ಗಳು ಹಾಗೂ ಎರಡು ಪರದೆಯ ಒಂದು ಮಾಲ್ ಇದೆ. ಪದ್ಮಾಂಜಲಿ ಥಿಯೇಟರ್ ಬಿಟ್ಟು ಉಳಿದೆಡೆ ವಿವಿಧ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ದಸರಾ ಹಬ್ಬದಿಂದ ಸಿನಿಮಾಗಳ ಬಿಡುಗಡೆಯ ಪರ್ವ ಶುರುವಾಗಿದೆ. ಎಸ್.ಎಸ್. ಮಾಲ್‌ನಲ್ಲಿ ಕನ್ನಡದ ‘ಶ್ರೀಕೃಷ್ಣ@ಜಿಮೇಲ್ ಡಾಟ್ ಕಾಂ’ ಅಲ್ಲದೆ ಒಂದು ಇಂಗ್ಲಿಷ್ ಹಾಗೂ ಒಂದು ತಮಿಳು ಚಿತ್ರ ಪ್ರದರ್ಶನಗೊಳ್ಳುತ್ತಿವೆ.
ವಸಂತ ಹಾಗೂ ಗೀತಾಂಜಲಿ ಚಿತ್ರಮಂದಿರಗಳಲ್ಲಿ ‘ಕೋಟಿಗೊಬ್ಬ–3’ ಹಾಗೂ ಅಶೋಕ ಚಿತ್ರಮಂದಿರದಲ್ಲಿ ‘ಸಲಗ’ ಚಿತ್ರಗಳು ಉತ್ತಮ ಆರಂಭ ಪಡೆದಿವೆ. ಭಾನುವಾರ ವಸಂತ ಚಿತ್ರಮಂದಿರದಲ್ಲಿ ದಾವಣಗೆರೆ ಜಿಲ್ಲಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜು ಕುಂದವಾಡ ಹಾಗೂ ಸಂಚಾಲಕ ಮಾರುತಿ ಅವರು ‘ಕೋಟಿಗೊಬ್ಬ–3’ ಸಿನಿಮಾ ವೀಕ್ಷಣೆಗೆ ಬಂದವವರಿಗೆ ಸಿಹಿ ಹಂಚಿದರು.
‘ಕೊರೊನಾ ಕಾರಣದಿಂದ ವಿಧಿಸಿದ ಲಾಕ್‌ಡೌನ್‌ನಿಂದಾಗಿ 2020 ಮಾರ್ಚ್ 14ರಿಂದ ಥಿಯೇಟರ್‌ಗಳಿಗೆ ಬೀಗಮುದ್ರೆ ಬಿದ್ದಿತ್ತು. ಒಂದೂವರೆ ವರ್ಷದ ನಂತರ ಥಿಯೇಟರ್‌ಗಳು ಆರಂಭವಾದರೂ ಮೊದಲಿನ ಪರಿಸ್ಥಿತಿಗೆ ಮರಳುವ ಗ್ಯಾರಂಟಿ ಇಲ್ಲ. ಸ್ಟಾರ್ ನಟರ ಚಿತ್ರಗಳನ್ನು ಹೊರತುಪಡಿಸಿ ಇತರೆ ಚಿತ್ರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ’ ಎಂಬುದು ಥಿಯೇಟರ್ ಮಾಲೀಕರ ಹೇಳಿಕೆ.
ಮೊದಲ ಅಲೆಯ ಲಾಕ್‌ಡೌನ್ ಬಳಿಕ 7 ತಿಂಗಳ ನಂತರ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿ ಶೇ 50ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಲಾಗಿತ್ತು. ಆ ವೇಳೆ ‘ಶಿವಾರ್ಜುನ’, ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ಲವ್ ಮಾಕ್‌ಟೇಲ್’ ಚಿತ್ರಗಳು ಪ್ರದರ್ಶನ ಕಂಡಿದ್ದವು. ಚಿತ್ರಮಂದಿರಗಳ ಮಾಲೀಕರಿಗೆ ಸ್ಪಷ್ಟ ನಿರ್ದೇಶನ ಬಾರದೇ ಇದ್ದುದರಿಂದ ಹೆಚ್ಚಿನ ಮಾಲೀಕರು ಥಿಯೇಟರ್ ಓಪನ್ ಮಾಡಲು ಮನಸ್ಸು ಮಾಡಲಿಲ್ಲ.
ಕೊರೊನಾ ಮೊದಲನೇ ಅಲೆಯ ಬಳಿಕ ‘ಪೊಗರು’, ‘ಯುವರತ್ನ’ ಹಾಗೂ ‘ರಾಬರ್ಟ್’ ಚಿತ್ರಗಳಿಂದ ಮಾಲೀಕರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ‘ಪೊಗರು’ ಹಾಗೂ ‘ರಾಬರ್ಟ್’ ಚಿತ್ರಗಳು ಬಿಡುಗಡೆಯಾಗಿ ಹೆಚ್ಚಿನ ಕಲೆಕ್ಷನ್ ಮಾಡಿದ್ದವು. ಆದರೆ ‘ಯುವರತ್ನ’ ಬಿಡುಗಡೆಯಾದ ಒಂದು ವಾರಕ್ಕೆ ಪುನಃ ಲಾಕ್‌ಡೌನ್ ಘೋಷಣೆಯಾಯಿತು. ಇದಾದ ಬಳಿಕ ಅಮೆಜಾನ್ ಪ್ರೈಮ್‌ನಲ್ಲಿ ‘ಯುವರತ್ನ’ ಬಿಡುಗಡೆ ಮಾಡಲಾಯಿತು.
‘ಟಿವಿ-ಮೊಬೈಲ್‌ಗಳ ಹಾವಳಿಯಿಂದ ತತ್ತರಿಸಿದ ಚಿತ್ರಮಂದಿರಗಳಿಗೆ ಕೊರೊನಾ ಬಹುದೊಡ್ಡ ಪೆಟ್ಟು ನೀಡಿತ್ತು. ಬಹುತೇಕ ಎಲ್ಲಾ ಚಟುವಟಿಕೆಯಿಂದ ನಿರ್ಬಂಧವನ್ನು ಸಡಿಲಗೊಳಿಸಲಾಯಿತಾದರೂ ಚಿತ್ರಮಂದಿರಗಳಿಗೆ ಮಾತ್ರ ತಡವಾಗಿ ಅವಕಾಶ ನೀಡಿದ್ದರಿಂದ ಥಿಯೇಟರ್ ಮಾಲೀಕರಿಗೆ ನಿರಾಶೆಯಾಗಿತ್ತು. ಇದೀಗ ಪ್ರೇಕ್ಷಕರು ಥಿಯೇಟರ್‌ನತ್ತ ಧಾವಿಸುತ್ತಿರುವುದು ಮಾಲೀಕರಲ್ಲಿ ಆಶಾಭಾವನೆ ಮೂಡಿಸುತ್ತಿದೆ’ ಎಂಬುದು ಸಿನಿಪ್ರಿಯರ ಅಭಿಪ್ರಾಯ.
‘ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಿದ್ದರೂ ಕೊರೊನಾ 3ನೇ ಅಲೆಯಿಂದಾಗಿ ಬಿಡುಗಡೆ ಮಾಡಲು ಥಿಯೇಟರ್‌ನತ್ತ ಧಾವಿಸಲು ಸಿದ್ಧರಿಲ್ಲ. ಅಭಿಮಾನಿಗಳು ಬಂದರಷ್ಟೇ ಹೆಚ್ಚಿನ ಕಲೆಕ್ಷನ್ ಆಗುವುದಿಲ್ಲ. ಜನರು ಬಂದು ನೋಡಬೇಕು. ಈಗ 50 ದಿನ, 100 ದಿನದ ಕಲೆಕ್ಷನ್‌ಗಳನ್ನು ಮರೆಯಬೇಕಾದ ಪರಿಸ್ಥಿತಿ ಬಂದಿದೆ. ಜನರಿಗೆ ವ್ಯಾಪಾರವಿಲ್ಲ. ಶಾಲಾ–ಕಾಲೇಜುಗಳು ಇದೀಗ ಆರಂಭವಾಗುತ್ತಿವೆ. ಜನರು ಖುಷಿಯಾಗಿ ಬರುತ್ತಿದ್ದ ಕಾಲ ಹೋಗಿದೆ. ಚೇತರಿಕೆ ಕಾಣಬೇಕಾದರೆ
6 ತಿಂಗಳು ಇಲ್ಲವೇ ವರ್ಷವೇ ಬೇಕಾಗುತ್ತದೆ’ ಎನ್ನುತ್ತಾರೆ ‘ಗೀತಾಂಜಲಿ’ ಚಿತ್ರಮಂದಿರದ ಮ್ಯಾನೇಜರ್ ಎಚ್.ವಿ. ಮಹದೇವಗೌಡ ಹೇಳುತ್ತಾರೆ.
ಹರಿಹರದ ಜಯಶ್ರೀ ಚಿತ್ರಮಂದಿರದಲ್ಲಿ ‘ಸಲಗ’, ಶ್ರೀಕಾಂತ್ ಚಿತ್ರಮಂದಿರದಲ್ಲಿ ‘ಕೋಟಿಗೊಬ್ಬ–3’, ಜಗಳೂರಿನ ಭಾರತ್ ಚಿತ್ರಮಂದಿರದಲ್ಲಿ ‘ಕೋಟಿಗೊಬ್ಬ–3’ ಹಾಗೂ ನಟರಾಜ್ ಚಿತ್ರಮಂದಿರದಲ್ಲಿ ‘ಸಲಗ’ ಚಿತ್ರಗಳು ಪ್ರದರ್ಶನ
ಗೊಳ್ಳುತ್ತಿವೆ. ಹೊನ್ನಾಳಿಯ ಶಾಂತ ಚಿತ್ರಮಂದಿರದಲ್ಲಿ ‘ಕೋಟಿಗೊಬ್ಬ–3’ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಹೊನ್ನಾಳಿಯ ಮತ್ತೊಂದು ಥಿಯೇಟರ್ ಚಿತ್ರಮಂದಿರ ಇನ್ನೂ ಬಾಗಿಲು ತೆರೆದಿಲ್ಲ.
ತೆರೆಕಾಣಲು ಸಿದ್ಧವಾಗಿರುವ ‘ಭಜರಂಗಿ–2’, ‘ಕೆಜಿಎಫ್–2’, ‘ಕಬ್ಜ’ ಹಾಗೂ ‘ವಿಕ್ರಾಂತ್ ರೋಣ‘ದಂತಹ ಚಿತ್ರಗಳು ಚಿತ್ರಮಂದಿರಗಳ ಮಾಲೀಕರಿಗೆ ಬಲ ನೀಡುವ ನಿರೀಕ್ಷೆಯಲ್ಲಿವೆ.
ಪೂರಕ ಮಾಹಿತಿ (ಆರ್. ರಾಘವೇಂದ್ರ, ಎನ್.ಕೆ. ಆಂಜನೇಯ, ಡಿ.ಎಂ. ಹಾಲಾರಾಧ್ಯ, ಡಿ. ಶ್ರೀನಿವಾಸ್)
1960ರಲ್ಲಿಯೇ ಟೂರಿಂಗ್ ಟಾಕೀಸ್ ನಡೆಸಲಾಗುತ್ತಿತ್ತು. 2000ನೇ ವರ್ಷದವರೆಗೆ ಚಿತ್ರಮಂದಿರಗಳಿಗೆ ಉತ್ತುಂಗ ಕಾಲವಿತ್ತು. ಟಿವಿ ಪದಾರ್ಪಣೆ ಬಳಿಕ ಗ್ರಾಮೀಣ ಚಿತ್ರಮಂದಿರಗಳ ಅವನತಿ ಶುರುವಾಯಿತು.
ಎಚ್.ಎಸ್. ಪ್ರಕಾಶ್, ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ, ಸಂತೇಬೆನ್ನೂರು.
‘ಕೋಟಿಗೊಬ್ಬ–3’ ಹಾಗೂ ‘ಸಲಗ’ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲೆಕ್ಷನ್ ಆಗುತ್ತಿದೆ. ಪರಿಸ್ಥಿತಿ ಹೀಗೆಯೇ ಇದ್ದರೆ ತೊಂದರೆ ಇಲ್ಲ.
ಎಚ್. ಪರಮೇಶ್, ಮೂವಿಟೈಮ್’ನ ಮ್ಯಾನೇಜರ್, ಎಸ್.ಎಸ್. ಮಾಲ್.
ಬಹಳ ದಿನಗಳ ಬಳಿಕ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿದ್ದರಿಂದ ತುಂಬಾ ಖುಷಿಯಾಗಿದೆ. ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಖುಷಿ ಒಟಿಟಿಯಲ್ಲಿ ಸಿಗುವುದಿಲ್ಲ.
ಮಂಜುನಾಥ್, ಪ್ರೇಕ್ಷಕ
ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು ಬಂದ್ ಆಗಿದ್ದವು. ಪರಿಸ್ಥಿತಿ ಹೀಗೆಯೇ ಮುಂದುವರಿದಿದ್ದರೆ ನಮ್ಮ ಪರಿಸ್ಥಿತಿ ಶೋಚನೀಯವಾಗುತ್ತಿತ್ತು. ಶೇ 100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿ, ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದರೆ ಮಾತ್ರ ಥಿಯೇಟರ್‌ಗಳಿಗೆ ಉಳಿಗಾಲ.
ಜಿ.ವಿ. ಸಂತೋಷ್, ನಿರ್ಮಾಪಕರ ಪ್ರತಿನಿಧಿ
ಮೂರನೇ ಅಲೆ ಬಂದಿದ್ದರೆ ಶಾಶ್ವತವಾಗಿ ಮುಚ್ಚುತ್ತಿದ್ದವು
‘ಸಣ್ಣಪುಟ್ಟ ಸಿನಿಮಾಗಳನ್ನು ಹಾಕಿದರೆ 5ರಿಂದ 10 ಜನರೂ ಬರುವುದಿಲ್ಲ. ಇಷ್ಟು ಹಣ ವಿದ್ಯುತ್ ಬಿಲ್‌ಗೂ ಸಾಕಾಗುವುದಿಲ್ಲ. ನೈಟ್ ಕರ್ಫ್ಯೂ ಜಾರಿಗೊಳಿಸಿದ ಬಳಿಕ ಸೆಕೆಂಡ್ ಶೋ ಸಿನಿಮಾ ನಡೆಯುತ್ತಿಲ್ಲ. 11 ಗಂಟೆಯವರೆಗೆ ಸಮಯದಲ್ಲಿ ರಿಯಾಯಿತಿ ನೀಡಿದರೆ ಸೆಕೆಂಡ್ ಶೋ ನಡೆಸಬಹುದು’ ಎಂದು ಹೇಳುತ್ತಾರೆ.
‘ಥಿಯೇಟರ್ ಬಾಡಿಗೆ ಸೇರಿ ತಿಂಗಳಿಗೆ ₹ 3ಲಕ್ಷ ಖರ್ಚಾಗುತ್ತದೆ. ಥಿಯೇಟರ್ ಓಡದಿದ್ದರೂ ವಿದ್ಯುತ್ ಬಿಲ್ ಅನ್ನು ಕಟ್ಟಲೇಬೇಕು. ಕನಿಷ್ಠ ತಿಂಗಳಿಗೆ ₹ 12 ಸಾವಿರದಿಂದ ₹ 13 ಸಾವಿರ ಬರುತ್ತದೆ. ನಿರ್ವಹಣೆಗೆ ₹ 30 ಸಾವಿರ ಖರ್ಚು ಬರುತ್ತದೆ. ಮೂರನೇ ಅಲೆ ಬಂದಿದ್ದರೆ ಶಾಶ್ವತವಾಗಿ ಮುಚ್ಚುತ್ತಿದ್ದವು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ‘ಗೀತಾಂಜಲಿ’ ಚಿತ್ರಮಂದಿರದ ಮ್ಯಾನೇಜರ್
ಎಚ್.ವಿ. ಮಹದೇವಗೌಡ.
ಸ್ಟಾರ್ ನಟರ ಸಿನಿಮಾಗಳೇ ಗ್ರಾಮೀಣ ಚಿತ್ರಮಂದಿರಗಳ ಜೀವಾಳ
ಕೆ.ಎಸ್. ವೀರೇಶ್ ಪ್ರಸಾದ್
ಸಂತೇಬೆನ್ನೂರು: ಸ್ಟಾರ್ ನಟರ ಸಿನಿಮಾಗಳೇ ಗ್ರಾಮೀಣ ಚಿತ್ರಮಂದಿರಗಳ ಜೀವಾಳ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
‘ವರ್ಷಕ್ಕೆ 15ರಿಂದ 20 ಚಿತ್ರಗಳು ಬಿಡುಗಡೆಗೊಳ್ಳುತ್ತವೆ. ಮೊದಲೆರಡು ದಿನ ಉತ್ತಮ ಕಲೆಕ್ಷನ್ ಇರುತ್ತದೆ. ಒಂದು ವಾರ ನಿತ್ಯ ನಾಲ್ಕು ಪ್ರದರ್ಶನಗಳಿಗೆ ನೆಚ್ಚಿನ ನಟರ ಚಿತ್ರ ನೋಡಲು ಧಾವಿಸುತ್ತಾರೆ. ವರ್ಷದಲ್ಲಿ 20 ವಾರಗಳು ಮಾತ್ರ ಗ್ರಾಮೀಣ ಚಿತ್ರಮಂದಿರಗಳು ನಡೆಯುತ್ತವೆ. ಉಳಿದ 32 ವಾರ ಮುಚ್ಚುವ ಸ್ಥಿತಿ ಒದಗಿದೆ. ನಿರ್ವಹಣೆ ವೆಚ್ಚ ಪ್ರದರ್ಶನ ಇಲ್ಲದಿದ್ದರೂ ₹2000 ಖರ್ಚು ಇರುತ್ತದೆ. ಚಿತ್ರ ನಡೆದರೆ ನಿತ್ಯ ₹1000 ವಿದ್ಯುತ್ ಬಿಲ್ ದಾಖಲಿಸುತ್ತದೆ’ ಎಂದು ಇಲ್ಲಿನ ವೆಂಕಟೇಶ್ವರ ಚಿತ್ರ ಮಂದಿರದ ಮಾಲೀಕ ಎಚ್.ಎಸ್. ಪ್ರಕಾಶ್ ಹೇಳುತ್ತಾರೆ.
‘ಕಳೆದೆರೆಡು ದಿನದಿಂದ ಕೋಟಿಗೊಬ್ಬ-3 ಸಿನಿಮಾ ಭರ್ಜರಿ ಪ್ರದರ್ಶನ ನಡೆಯುತ್ತಿದೆ. ಸಿನಿಮಾಗೆ ಪಾವತಿಸಿದ ಮೊತ್ತದ ಇನಿಷಿಯಲ್ ಡ್ರಾ(ಆರಂಭಿಕ ಸಂಗ್ರಹ) ಬಂದಿದೆ. ನಂತರ ನಡೆದಷ್ಟೂ ದಿನ ಲಾಭಾಂಶ ಸಂಗ್ರಹ ಇರುತ್ತದೆ. 2014ರಿಂದ ಮೂರು ವರ್ಷ ಚಿತ್ರಮಂದಿರ ನಿಲ್ಲಿಸಲಾಗಿತ್ತು. ಸೆಲ್ಯುಲಾಯ್ಡ್‌ನಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾಗುವ ಅನಿವಾರ್ಯದಲ್ಲಿ ಡೋಲಾಯಮಾನ ಸ್ಥಿತಿಯಲ್ಲಿದ್ದೆವು. ಗ್ರಾಮೀಣ ಪ್ರದೇಶಕ್ಕೂ ಡಿಜಿಟಲ್ ತಂತ್ರಜ್ಞಾನದ ಸ್ಯಾಟಲೈಟ್ ಮೂಲಕ ಚಿತ್ರ ಬಿಡುಗಡೆಗೆ ಅನುಕೂಲ ಕಲ್ಪಿಸಲಾಯಿತು. ಆನಂತರ ಹೊಸ ಉಪಕರಣಗಳಿಗೆ ₹12 ಲಕ್ಷ ಖರ್ಚು ಮಾಡಿದ್ದೇನೆ’ ಎಂದು ಹೇಳುತ್ತಾರೆ.
‘ದಾವಣಗೆರೆ-ಚಿತ್ರದುರ್ಗ ಜಿಲ್ಲೆ ಸೇರಿ ಸುಮಾರು 120 ಚಿತ್ರಮಂದಿರಗಳಿದ್ದವು. ಈಗ 30ರಿಂದ 40 ಮಾತ್ರ ಪ್ರದರ್ಶನ ನೀಡುತ್ತಿವೆ. ಕನ್ನಡ, ತೆಲುಗು ಸಿನಿಮಾ ಮಾತ್ರ ಉತ್ತಮ ಕಲೆಕ್ಷನ್ ಇದೆ. ಹಿಂದಿ ಸಿನಿಮಾಗಳಿಗೆ ನೀರಸ ಪ್ರತಿಕ್ರಿಯೆ ಬರುತ್ತಿದೆ’ ಎನ್ನುತ್ತಾರೆ.
‘ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಸಂಖ್ಯೆ ಹೆಚ್ಚಿದಲ್ಲಿ ಗ್ರಾಮೀಣ ಭಾಗದ ಚಿತ್ರಮಂದಿರಗಳಿಗೆ ಉಳಿಗಾಲ. ದೀರ್ಘಾವಧಿ ಚಿತ್ರೀಕರಣ, ನಾಯಕ ನಟರ ಒತ್ತಾಸೆಯಂತೆ ನಿರ್ಮಾಪಕರು ಸಿನಿಮಾ ಸಿದ್ಧತೆ ಮಾಡಿಕೊಳ್ಳುವ ಪರಿಪಾಠ, ಡಿಜಿಟಲ್ ಎಡಿಟಿಂಗ್‌ನಿಂದಾಗಿ ಮರು ಚಿತ್ರೀಕರಣಕ್ಕೆ ಹೆಚ್ಚಿನ ಕಾಲಾವಧಿ ಒಟ್ಟಾರೆ ವೃತ್ತಿಪರತೆ ಕೊರತೆಯಿಂದ ಸಿನಿಮಾ ಬಿಡುಗಡೆಗೆ ಸುದೀರ್ಘ ಅವಧಿ ತೆಗೆದುಕೊಳ್ಳಲಾಗುತ್ತಿದೆ. ಚಿತ್ರಗಳ ಬಿಡುಗಡೆ ನಿಯತಕಾಲಿಕವಾಗಿದ್ದರೆ ಚಿತ್ರಮಂದಿರಗಳ ಮಾಲೀಕರು ಉಳಿಯಲು ಸಾಧ್ಯ’ ಎಂಬುದು ಅವರ ವಾದ.
‘ಸದ್ಯ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿಸಲು ಮಾಲೀಕರು ಹಿಂತಿರುಗಿಸದ ಮುಂಗಡ (ಎನ್‌ಆರ್‌ಎ) ಹಾಗೂ ಕನಿಷ್ಠ ಗ್ಯಾರಂಟಿ ಪಾವತಿಸಬೇಕು. ಇದರಿಂದ ಬಹುತೇಕ ಚಿತ್ರಗಳಲ್ಲಿ ನಷ್ಟ ಅನುಭವಿಸುತ್ತಿದ್ದೇವೆ. ಇದರ ಬದಲು ಒಟ್ಟಾರೆ ಕಲೆಕ್ಷನ್‌ನಲ್ಲಿ ಶೇಕಡವಾರು ಪದ್ಧತಿ ಜಾರಿಗೊಳಿಸಬೇಕು ಎಂದು ನಿರ್ಮಾಪಕ ಸಂಘಕ್ಕೆ ಆಗ್ರಹಿಸುತ್ತಿದ್ದೇವೆ. ಆದರೆ ಇದಕ್ಕೆ ಸಮ್ಮತಿ ಸಿಗುತ್ತಿಲ್ಲ. ಗ್ರಾಮೀಣ ಚಿತ್ರಮಂದಿರಗಳ ಡೋಲಾಯಮಾನ ಸ್ಥಿತಿಯಿಂದ ಭದ್ರ ನೆಲೆಗೊಳಿಸಲು ಒಮ್ಮತ ನಿಲುವು ಅಗತ್ಯ. ಚಿತ್ರರಂಗದ ಸರ್ವ ವಿಭಾಗಗಳಲ್ಲಿಯೂ ಪರಿಹಾರ ಸೂತ್ರಕ್ಕೆ ನಾಂದಿ ಹಾಡಬೇಕು’ ಎನ್ನುತ್ತಾರೆ ಪ್ರಕಾಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.