ADVERTISEMENT

ದಶಕಗಳಿಂದ ಹನಿ ನೀರು ಕಾಣದ ಕೆರೆಗಳು ಈಗ ಅಪಾಯದ ಸ್ಥಿತಿಯಲ್ಲಿ: ಹೆಚ್ಚಿದ ಆತಂಕ

ಜಗಳೂರು ಕೆರೆ ತೂಬಿನಿಂದ ನೀರು ಸೋರಿಕೆ; ನೀರಾವರಿ ಇಲಾಖೆ ನಿರ್ಲಕ್ಷ್ಯ

ಡಿ.ಶ್ರೀನಿವಾಸ
Published 25 ಅಕ್ಟೋಬರ್ 2022, 5:17 IST
Last Updated 25 ಅಕ್ಟೋಬರ್ 2022, 5:17 IST
ಜಗಳೂರು ಕೆರೆ ದಶಕಗಳ ನಂತರ ಈಚೆಗೆ ಸತತವಾಗಿ ಸುರಿದ ಮಳೆಗೆ ತುಂಬಿದೆ.
ಜಗಳೂರು ಕೆರೆ ದಶಕಗಳ ನಂತರ ಈಚೆಗೆ ಸತತವಾಗಿ ಸುರಿದ ಮಳೆಗೆ ತುಂಬಿದೆ.   

ಜಗಳೂರು: ದಶಕಗಳಿಂದ ಹನಿ ನೀರಿಲ್ಲದೆ ಬತ್ತಿಹೋಗಿದ್ದ ಬರಪೀಡಿತ ತಾಲ್ಲೂಕಿನ ಬಹುತೇಕ ಕೆರೆಗಳು ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಮೈದುಂಬಿದ್ದು, 20ಕ್ಕೂ ಹೆಚ್ಚು ಕೆರಗೆಳು ಕೋಡಿ ಬಿದ್ದು ಹರಿಯುತ್ತಿವೆ. ಹಲವು ಕೆರೆಗಳ ಏರಿ, ತೂಬುಗಳಲ್ಲಿ ಮುಳ್ಳುಕಂಟಿಗಳು ಬೆಳೆದು ಬಿರುಕುಗಳು ಕಾಣಿಸಕೊಂಡಿದ್ದು, ನೀರು ಸೋರಿಕೆಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸಣ್ಣ ನೀರಾವರಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ವೈಫಲ್ಯದಿಂದಾಗಿ ತಾಲ್ಲೂಕಿನ ಹಲವು ಕೆರೆ ಏರಿ ಹಾಗೂ ತೂಬುಗಳು ಮುಳ್ಳುಕಂಟಿಗಳಿಂದ ಆವೃತವಾಗಿ ಅಪಾಯದ ಸ್ಥಿತಿಯಲ್ಲಿವೆ. ನಾಲ್ಕು ದಶಕದಲ್ಲೇ ಮೊದಲ ಬಾರಿಗೆ ಬಹುತೇಕ ಕೋಡಿ ಬೀಳುವ ಹಂತದಲ್ಲಿರುವ ಐತಿಹಾಸಿಕ ಜಗಳೂರು ಕೆರೆಯ ತೂಬಿನಲ್ಲಿ ನಾಲ್ಕೈದು ದಿನಗಳಿಂದ ನಿರಂತರವಾಗಿ ನೀರು ಹರಿದು ಹೋಗುತ್ತಿದೆ. ದಿನೇ ದಿನೇ ನೀರಿನ ಸೋರಿಕೆಯ ಪ್ರಮಾಣವೂ ಹೆಚ್ಚುತ್ತಿದೆ.

ಮುಂಗಾರು ಪೂರ್ವದಲ್ಲಿ ಕೆರೆಗಳತ್ತ ಸುಳಿಯದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದು ತೂಬಿನಲ್ಲಿ ಸೋರಿಕೆ ಕಂಡು ಬರುತ್ತಿದ್ದಂತೆಯೇ ಜನರ ಒತ್ತಡದಿಂದಾಗಿ ಹಲವು ಲೋಡ್‌ಗಳಷ್ಟು ಮಣ್ಣನ್ನು ನೀರಿನಲ್ಲಿ ಮುಳುಗಿರುವ ತೂಬಿನ ಕೆಳಭಾಗದಲ್ಲಿ ಹಾಕಿ ತೇಪೆ ಹಚ್ಚುವ ಕೆಲಸ ಆರಂಭಿಸಿದ್ದಾರೆ. ಭಾನುವಾರ ಮಣ್ಣು ಸುರಿದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರು ಸೋರಿ ಹೋಗುವುದು ನಿಂತಿಲ್ಲ. ಅಪರೂಪಕ್ಕೆ ಕೆರೆಗೆ ಭಾರಿ ಪ್ರಮಾಣದ ನೀರು ಬಂದಿದ್ದು, ತೂಬಿನ ಸಮಸ್ಯೆಯಿಂದ ನಿರಂತರವಾಗಿ ನೀರು ಪೋಲಾಗಿ ಹರಿಯುತ್ತಿದೆ.

ADVERTISEMENT

‘ಜಗಳೂರು ಕೆರೆ ತೂಬಿನಲ್ಲಿ ಸಣ್ಣದಾಗಿ ನೀರು ಸೋರಿಕೆಯಾಗುತ್ತಿದೆ. ಹರಪನಹಳ್ಳಿ ತಾಲ್ಲೂಕಿನಿಂದ ನುರಿತ ಕೆಲಸಗಾರರನ್ನು ಕರೆಸಿ ದುರಸ್ತಿ ಮಾಡಿಸಲಾಗುತ್ತಿದೆ. ತೂಬಿಗೆ ಮಣ್ಣು ಹಾಕುವುದನ್ನು ಬಿಟ್ಟರೆ ಬೇರಾವುದೇ ರೀತಿಯಲ್ಲಿ ಸೋರಿಕೆ ನಿಲ್ಲಿಸಲು ಆಗುವುದಿಲ್ಲ. ತಳಭಾಗದಲ್ಲಿ ನೀರು ಇರುವುದರಿಂದ ದುರಸ್ತಿ ಕಾರ್ಯ ಕಷ್ಟವಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರಾಘವೇಂದ್ರ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಲ್ಲೂಕಿನ ರಸ್ತೆ ಮಾಚಿಕೆರೆ ಕೆರೆ 30 ವರ್ಷಗಳ ನಂತರ ಕೋಡಿ ಬಿದ್ದಿದ್ದು, ಕೆರೆ ಏರಿಯ ತಳಭಾಗದಲ್ಲಿ ಅಲ್ಲಲ್ಲಿ ನೀರು ಬಸಿಯುತ್ತಿದೆ. ಇದರಿಂದಾಗಿ ಜಗಳೂರು-ದಾವಣಗೆರೆ ರಸ್ತೆ ಮೇಲೆ ಸಣ್ಣಗೆ ನೀರು ಹರಿಯುತ್ತಿದೆ. ಬಿಳಿಚೋಡು ಕೆರೆ ಸಹ 4 ದಶಕದಲ್ಲಿ ಮೊದಲ ಬಾರಿಗೆ ತಂಬಿದ್ದು, ಏರಿಯ ಹಲವೆಡೆ ನೀರು ಬಸಿಯುವುದು ನಿಂತಿಲ್ಲ. ಕೋಡಿ ಬಿದ್ದು ಹರಿಯುತ್ತಿರುವ ಚಿಕ್ಕ ಅರಕೆರೆ ಹಾಗೂ ಚದರಗೊಳ್ಳ ಕೆರೆಗಳ ಏರಿಯಲ್ಲಿ ದೊಡ್ಡ ಪ್ರಮಾಣದ ಬಿರುಕುಗಳು ಕಂಡುಬಂದಿದ್ದು, ದುರಸ್ತಿ ಕಾರ್ಯ ಮುಂದುವರಿದಿದೆ.

ಜಿಲ್ಲೆಯ ಅತಿದೊಡ್ಡ ಕೆರೆಗಳಲ್ಲಿ ಒಂದಾದ ಸಂಗೇನಹಳ್ಳಿ ಕೆರೆ 15 ವರ್ಷಗಳ ನಂತರ ಕೋಡಿ ಬಿದ್ದಿದೆ. ಈ ಕೆರೆ ಏರಿಯ ಮೇಲೆ 20 ಅಡಿಗೂ ಹೆಚ್ಚು ವಿಶಾಲವಾದ ರಸ್ತೆ ಇತ್ತು. ಆದರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದು ಕಿ.ಮೀ ಉದ್ದಕ್ಕೂ ಏರಿಯ ಮೇಲೆ ದೈತ್ಯಾಕಾರವಾಗಿ ಜಾಲಿ ಗಿಡಗಳು ಬೆಳೆದು ನಿಂತಿದ್ದು, ರಸ್ತೆ ಸಂಪೂರ್ಣ ಮುಚ್ಚಿಹೋಗಿದೆ.

ಏರಿಯ ಉದ್ದಕ್ಕೂ ಜಾಲಿ ಗಿಡಗಳಿಂದಾಗಿ ಏರಿಯ ಭದ್ರತೆಗೆ ಅಪಾಯ ಒದಗಿ ಬಂದಿದೆ. ಸಂಗೇನಹಳ್ಳಿ ಕೆರೆ ಅಭಿವೃದ್ಧಿಗೆ ₹ 1 ಕೋಟಿಗೂ ಹೆಚ್ಚು ಅನುದಾನ ಬಂದಿದ್ದರೂ ಯಾವುದೇ ದುರಸ್ತಿ ಅಥವಾ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.