ADVERTISEMENT

ಪಾಲಿಕೆ ಗದ್ದುಗೆ ಉಮೇದಿನಲ್ಲಿ ಕಾಂಗ್ರೆಸ್‌

ಸೆ.27ಕ್ಕೆ ಮೇಯರ್‌, ಉಪಮೇಯರ್‌ ಚುನಾವಣೆ, ಗರಿಗೆದರಿಗೆ ರಾಜಕೀಯ

ಜಿ.ಬಿ.ನಾಗರಾಜ್
Published 17 ಸೆಪ್ಟೆಂಬರ್ 2024, 7:10 IST
Last Updated 17 ಸೆಪ್ಟೆಂಬರ್ 2024, 7:10 IST
ದಾವಣಗೆರೆಯ ಮಹಾನಗರ ಪಾಲಿಕೆ ಕೇಂದ್ರ ಕಚೇರಿ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಮಹಾನಗರ ಪಾಲಿಕೆ ಕೇಂದ್ರ ಕಚೇರಿ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್‌ ಮತ್ತು ಉಪಮೇಯರ್‌ ಚುನಾವಣೆ ಸೆ.27ಕ್ಕೆ ನಿಗದಿಯಾಗಿದೆ. ಗದ್ದುಗೆ ಏರಲು ಕಾಂಗ್ರೆಸ್‌ ಮತ್ತು ಬಿಜೆಪಿ ಪಾಳೆಯದಲ್ಲಿ ರಾಜಕೀಯ ಗರಿಗೆದರಿದೆ. ಬಹುಮತಕ್ಕೆ ಸಂಖ್ಯಾಬಲ ಹೆಚ್ಚಿಸಿಕೊಂಡಿರುವ ಕೈ ಪಾಳೆಯದಲ್ಲಿ ಅಧಿಕಾರ ಹಿಡಿಯುವ ಉಮೇದು ಹೆಚ್ಚಾಗಿದೆ.

ಮೇಯರ್‌ ಸ್ಥಾನ ಬಿಸಿಎಂ ‘ಎ’ ಹಾಗೂ ಉಪಮೇಯರ್‌ ಸ್ಥಾನ ಬಿಸಿಎಂ ‘ಬಿ’ಗೆ ಮೀಸಲು ನಿಗದಿಪಡಿಸಿ ಸರ್ಕಾರ ಆದೇಶಿಸಿದೆ. ಮೀಸಲಾತಿ ನಿಗದಿ ಆರು ತಿಂಗಳು ವಿಳಂಬವಾಗಿದ್ದು, ಹೊಸಬರ ಅಧಿಕಾರವಧಿ ಮುಂದಿನ ಆರು ತಿಂಗಳು ಮಾತ್ರ ಸಿಗಲಿದೆ. ಕಾಂಗ್ರೆಸ್‌ನಲ್ಲಿ ಮೇಯರ್‌ ಸ್ಥಾನಕ್ಕೆ ನಾಲ್ವರು, ಉಪಮೇಯರ್‌ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ ಜೋರಾಗಿದೆ. ರಾಜಕೀಯ ದಾಳ ಉರುಳಿಸಲು ಬಿಜೆಪಿ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮಹಾನಗರ ಪಾಲಿಕೆಗೆ 2019ರಲ್ಲಿ ಚುನಾವಣೆ ನಡೆದಿದ್ದು, ಇದು ಕೌನ್ಸಿಲ್‌ನ ಅಂತಿಮ ಅಧಿಕಾರವಧಿ. 45 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌, ಅಧಿಕಾರ ಹಿಡಿಯಲು ಸಜ್ಜಾಗಿದೆ. 17ಸ್ಥಾನ ಗೆದ್ದು ಉಪಚುನಾವಣೆ ಮೂಲಕ ಇನ್ನಷ್ಟು ಹಿಗ್ಗಿರುವ ಬಿಜೆಪಿ, ಮೂರು ಅವಧಿಗೆ ಅಧಿಕಾರ ಅನುಭವಿಸಿದೆ. ಈಗ ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲ ಇಲ್ಲದೇ ಕೈಚಲ್ಲುವ ಸಾಧ್ಯತೆ ಇದೆ. ಐವರು ಪಕ್ಷೇತರರು ಹಾಗೂ ಒಬ್ಬರು ಜೆಡಿಎಸ್‌ ಸದಸ್ಯರು ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ADVERTISEMENT

ಶಕ್ತಿ ಹೆಚ್ಚಿಸಿಕೊಂಡ ಕೈ ಪಾಳೆಯ:

ಮಹಾನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ ಸಂಪೂರ್ಣ ಅಧಿಕಾರ ಅನುಭವಿಸಲು ಸಾಧ್ಯವಾಗದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿರುವ ಕಾಂಗ್ರೆಸ್‌, ಮೇಯರ್‌ ಹಾಗೂ ಉಪಮೇಯರ್‌ ಸ್ಥಾನವನ್ನು ‘ಕೈ’ ವಶ ಮಾಡಿಕೊಳ್ಳಲು ಶಕ್ತಿ ಹೆಚ್ಚಿಸಿಕೊಂಡಿದೆ. ಇಬ್ಬರು ಪಕ್ಷೇತರರು ಹಾಗೂ ನಾಲ್ವರು ಕಮಲ ಪಾಳೆಯದ ಸದಸ್ಯರನ್ನು ತನ್ನತ್ತ ಸೆಳೆದಿದೆ. ಕಳೆದ ಮೂರು ಅವಧಿಯಲ್ಲಿ ಆಗಿರುವ ತಪ್ಪುಗಳು ಮರುಕಳುಹಿಸದಂತೆ ಎಚ್ಚರವಹಿಸಿದೆ.

ಒಬ್ಬ ಕೌನ್ಸಿಲರ್‌ ಅಕಾಲಿಕ ನಿಧನದಿಂದ 44 ಸದಸ್ಯರನ್ನು ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಮತ್ತು ಉಪಮೇಯರ್‌ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಸಂಸದೆ, ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್‌ನ ಒಬ್ಬರು ಸದಸ್ಯರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್‌ ಹಿಡಿತದಲ್ಲಿವೆ. ಲೋಕಸಭಾ ಸದಸ್ಯರು, ಒಬ್ಬರು ವಿಧಾನಸಭಾ ಸದಸ್ಯರು ಕೂಡ ಕಾಂಗ್ರೆಸ್‌ನವರೇ ಇದ್ದಾರೆ. ಬಹುಮತಕ್ಕೆ ಅಗತ್ಯ ಇರುವ 25 ಸದಸ್ಯ ಬಲವನ್ನು ಕಾಂಗ್ರೆಸ್‌ ಸುಲಭವಾಗಿ ಹೊಂದಿದೆ.

ಮೇಯರ್‌ ಸ್ಥಾನಕ್ಕೆ ಪೈಪೋಟಿ:

ಬಿಸಿಎಂ ‘ಎ’ಗೆ ಮೀಸಲಾಗಿರುವ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದೆ. 16ನೇ ವಾರ್ಡ್‌ನ ಎ.ನಾಗರಾಜ್‌, 15ನೇ ವಾರ್ಡ್‌ನ ಆಶಾ ಡಿ.ಎಸ್‌, 14ನೇ ವಾರ್ಡ್‌ನ ಕೆ.ಚಮನ್‌ ಸಾಬ್‌ ಹಾಗೂ 3 ವಾರ್ಡ್‌ನ ಎ.ಬಿ.ರಹೀಂ ಸಾಬ್‌ ಮೇಯರ್‌ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಬಿಸಿಎಂ ‘ಬಿ’ಗೆ ಮೀಸಲಾಗಿರುವ ಉಪಮೇಯರ್‌ ಸ್ಥಾನಕ್ಕೆ 22ನೇ ವಾರ್ಡ್‌ನ ಶಿವಲೀಲಾ ಕೊಟ್ರಯ್ಯ ಹಾಗೂ 18ನೇ ವಾರ್ಡ್‌ನ ಸೋಗಿ ಶಾಂತಕುಮಾರ್‌ ಕೂಡ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ನಾಲ್ಕು ಬಾರಿ ಗೆದ್ದಿರುವ ನಾಗರಾಜ್‌ ಹಿರಿತನದ ಆಧಾರದ ಮೇರೆಗೆ ಅವಕಾಶ ಕೇಳುತ್ತಿದ್ದಾರೆ. ಮುಸ್ಲಿಂ ಸಮುದಾಯದ ಇಬ್ಬರು ಸದಸ್ಯರು ಕೂಡ ಪಟ್ಟು ಹಿಡಿದಿದ್ದಾರೆ.

ಹುದ್ದೆಯ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಯ ಬಾಗಿಲು ತಟ್ಟುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರನ್ನು ಬೆಂಬಲಿಗರೊಂದಿಗೆ ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆ, ಪಕ್ಷ ನಿಷ್ಠೆ ಸೇರಿ ಹಲವು ಆಯಾಮದಲ್ಲಿ ಚರ್ಚಿಸಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವಂತೆ ಆಕಾಂಕ್ಷಿಗಳಿಗೆ ವರಿಷ್ಠರು ಸೂಚನೆ ನೀಡಿದ್ದಾರೆ.

ಮೇಯರ್‌ ಸ್ಥಾನಕ್ಕೆ ನಾಲ್ಕೈದು ಜನರು ಆಕಾಂಕ್ಷಿಗಳಿದ್ದಾರೆ. ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಎಚ್‌.ಬಿ.ಮಂಜಪ್ಪ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್‌
ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಮೇಯರ್‌ ಹುದ್ದೆಗೆ ಪಕ್ಷದಲ್ಲಿ ಆಕಾಂಕ್ಷಿಗಳಿದ್ದಾರೆ. ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ.
ಎನ್‌.ರಾಜಶೇಖರ್‌ ಅಧ್ಯಕ್ಷ ಜಿಲ್ಲಾ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.