ADVERTISEMENT

ನಾನು ಸಿ.ಎಂ. ಆಗಿ ಮುಂದುವರಿಯಲು ಕಾಂಗ್ರೆಸ್‌ ಗೆಲ್ಲಿಸಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2024, 23:29 IST
Last Updated 4 ಮೇ 2024, 23:29 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ದಾವಣಗೆರೆ: ‘ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಕುರುಬ ಸಮುದಾಯದವರು ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಲೋಕಸಭೆ ಚುನಾವಣೆ ಅಂಗವಾಗಿ ನಗರದಲ್ಲಿ ಶನಿವಾರ ಕುರುಬ ಸಮುದಾಯದವರು ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾನು 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದರೆ ನೀವು ಕಾಂಗ್ರೆಸ್‌ ಬೆಂಬಲಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ನ ಹೆಚ್ಚು ಅಭ್ಯರ್ಥಿಗಳು ಗೆದ್ದರೆ ಸಿದ್ದರಾಮಯ್ಯ ನಾಯಕತ್ವಕ್ಕೆ ಹೆಸರು ಬರುತ್ತದೆ ಅಲ್ಲವೇ? ನನ್ನ ನಾಯಕತ್ವ ಉಳಿಯುತ್ತದೆ ಅಲ್ಲವೇ?’ ಎಂದು ಅವರು ಪ್ರಶ್ನಿಸಿದರು.

‘ಮುಖ್ಯಮಂತ್ರಿಯಾದ ನಿಮ್ಮ ಸಮುದಾಯದ ನಾನು ಬೇಕಾ, ಇಲ್ಲ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಬೇಕಾ ನೀವೇ ನಿರ್ಧರಿಸಿ. ವಿನಯ್‌ಗೆ ಒಂದೂ ಮತ ಕೊಡಬಾರದು’ ಎಂದೂ ಅವರು ಇದೇ ವೇಳೆ ಕೋರಿದರು.

ADVERTISEMENT

‘ನೀವು ವಿನಯ್‌ಕುಮಾರ್‌ಗೆ ಮತ ನೀಡಿದರೆ ಅದು ನೇರವಾಗಿ ಬಿಜೆಪಿಗೆ ಹಾಕಿದಂತೆ. ಗ್ಯಾರಂಟಿ ಯೋಜನೆ ಸೇರಿದಂತೆ ಜನಪರ ಕಾರ್ಯಕ್ರಮ ತಂದಿದ್ದು ನಾನಾ ಅಥವಾ ವಿನಯ್‌ಕುಮಾರ್ ಅವರಾ ತಿಳಿಸಿ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಒಂದು ವೇಳೆ ವಿನಯ್‌ಕುಮಾರ್‌ ಗೆದ್ದರೂ ಅವರಿಗೆ ಕೇಂದ್ರದಿಂದ ಅನುದಾನ ತರಲು ಸಾಧ್ಯವೇ? ಅವರು ಯಾವುದಾದರೂ ಪಕ್ಷದಿಂದ ನಿಂತಿದ್ದಾರಾ?’ ಎಂದು ಪ್ರಶ್ನಿಸಿದರು.

‘ವಿನಯ್‌ ಕುರುಬ ಸಮುದಾಯದವರು ಎಂದು ಮತ ನೀಡಬೇಕಾ? ಒಂದು ಜಾತಿಯ ಮತದಿಂದ ಯಾವುದಾದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ? ನೀವೇ ಹೇಳಿ. ಅವರಿಗೆ ಮುಂದೆ ಭವಿಷ್ಯವಿದೆ. ಈಗ ಸ್ಪರ್ಧೆಯಿಂದ ಹಿಂದೆ ಸರಿಯಿರಿ ಎಂದು ಹೇಳಿದರೂ ಕೇಳಲಿಲ್ಲ. ಅಂತಹವರಿಗೆ ನೀವು ಮತ ಹಾಕುವಿರಾ?’ ಎಂದು ಪ್ರಶ್ನಿಸಿದರು.

ಜಿ.ಬಿ. ವಿನಯ್‌ಕುಮಾರ್

‘ಸಿದ್ದರಾಮಯ್ಯ ಹೇಳಿಕೆ ಆಶೀರ್ವಾದ ಇದ್ದಂತೆ’

‘ಪಕ್ಷೇತರನಾದ ನನಗೆ ಮತ ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದವರಿಗೆ ಮನವಿ ಮಾಡಿದ್ದು ನನಗೆ ಆಶೀರ್ವಾದ ಇದ್ದಂತೆ. ಅವರು ನನ್ನ ಹೆಸರು ದೆಹಲಿ ಮಟ್ಟಕ್ಕೆ ತಲುಪಲು ಮಹತ್ವದ ಪಾತ್ರ ವಹಿಸಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್‌ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಅವರು ‘ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಅನಿವಾರ್ಯತೆ ಇದೆ. ಅವರೊಬ್ಬ ರಾಜಕಾರಣಿಯಾಗಿ ಆ ಹೇಳಿಕೆ ನೀಡಿದ್ದಾರೆ’ ಎಂದರು. ‘ಒಂದು ವೇಳೆ ವಿನಯ್‌ಕುಮಾರ್ ಗೆದ್ದರೆ ಮೋದಿಯಿಂದ ಫಂಡ್ ತರಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ನನಗೆ ಗೆಲುವಿನ ಆಶೀರ್ವಾದವನ್ನು ಅವರು ಮಾಡಿದ್ದಾರೆ’ ಎಂದು ಹೇಳಿದರು. ‘ಕಾಗಿನೆಲೆ ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ನನಗೆ ಸ್ಪರ್ಧಿಸದಂತೆ ಸೂಚಿಸಿದ್ದರು. ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದು ಸ್ಪರ್ಧೆ ಮಾಡಿದ್ದೇನೆ. ಈಶ್ವರಪ್ಪ ಕುಮ್ಮಕ್ಕು ಅನ್ನೋದು ಸತ್ಯಕ್ಕೆ ದೂರವಾದದ್ದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.