ಬಸವಾಪಟ್ಟಣ: ಅಡಿಕೆಗೆ ಇರುವ ಭಾರಿ ಬೆಲೆ ಕೆಲವು ಕುಟುಂಬಗಳಿಗೆ ಪರ್ಯಾಯವಾಗಿ ಆಸರೆಯಗಿರುವ ಕಥೆ ಇದು.
ಬದುಕಿನ ಬಂಡಿ ಸಾಗಿಸಲು ನೂರಾರು ದಾರಿಗಳಿವೆ. ಅಂತೆಯೇ ಬಸವಾಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೆಲವು ಮಹಿಳೆಯರು, ಅದರಲ್ಲೂ ವಿಶೇಷವಾಗಿ ವೃದ್ಧೆಯರು ರೈತರು ಅಡಿಕೆ ಸುಲಿದು ರಸ್ತೆ ಬದಿಯಲ್ಲಿ ಎಸೆಯಲಾದ ಸಿಪ್ಪೆಯ ರಾಶಿಯಲ್ಲಿ ಅಳಿದುಳಿದುರವ ಅಡಿಕೆ ತುಣುಕುಗಳನ್ನು ಹೆಕ್ಕಿ ತೆಗೆಯುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಅಡಿಕೆ ಬೆಳೆಗಾರರು ಅಥವಾ ಕೇಣಿದಾರರು ಹಸಿ ಅಡಿಕೆ ಸುಲಿದ ನಂತರ ರಸ್ತೆಯ ಪಕ್ಕದಲ್ಲಿ ಸುರಿಯುವ ಸಿಪ್ಪೆಯ ರಾಶಿಯಲ್ಲಿ ವೃದ್ಧೆಯರು ಬಿಸಿಲು ಮಳೆಯನ್ನು ಲೆಕ್ಕಿಸದೇ ಅಡಿಕೆ ಚೂರುಗಳನ್ನು ಹೆಕ್ಕುತ್ತಾರೆ. ಸಿಗುವಷ್ಟು ಅಡಿಕೆ ತುಣುಕುಗಳನ್ನು ಒಣಗಿಸಿ, ಮಾರುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
‘ವಯಸ್ಸಾಗಿರುವುದರಿಂದ ಕೂಲಿ ಕೆಲಸ ಮಾಡಲು ಶಕ್ತಿ ಇಲ್ಲ. ಮನೆಯಲ್ಲಿ ಬಡತನ. ಅಡಿಕೆ ಸಿಪ್ಪೆಯ ರಾಶಿಗಳಲ್ಲಿ ಸಿಗುವ ಅಡಿಕೆ ಚೂರುಗಳನ್ನು ಸಂಗ್ರಹಿಸಿ ಒಣಗಿಸಿ ಮಾರಾಟ ಮಾಡುವುದರಿಂದ ನಮ್ಮ ಖರ್ಚನ್ನು ನಾವೇ ನೋಡಿಕೊಳ್ಳುತ್ತೇವೆ. ಕುಟುಂಬಕ್ಕೂ ನೆರವಾಗುತ್ತೇವೆ’ ಎಂದು ಸಮೀಪದ ಪುಣ್ಯಸ್ಥಳ ಗ್ರಾಮದ ಪ್ರೇಮಮ್ಮ ತಿಳಿಸಿದರು.
‘ಇಂತಹ ಅಡಿಕೆಯನ್ನು ಕೊಳ್ಳಲು ಕೆಲ ವ್ಯಾಪಾರಿಗಳು ಮನೆ ಬಾಗಿಲಿಗೇ ಬರುತ್ತಾರೆ. ಕೆ.ಜಿ.ಗೆ ₹ 100ರಿಂದ ₹ 150 ನೀಡಿ ಖರೀದಿಸುತ್ತಾರೆ. ಇಡೀ ದಿನ ಆರಿಸಿದರೂ ಒಬ್ಬೊಬ್ಬರಿಗೆ ಒಂದರಿಂದ ಒಂದೂವರೆ ಕೆ.ಜಿ.ಯಷ್ಟು ಚೂರು ಅಡಿಕೆ ಸಿಗುತ್ತದೆ. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಮಾತ್ರ ನಮಗೆ ಈ ಕೆಲಸ ಸಿಗುತ್ತದೆ. ಉಳಿದ ದಿನಗಳಲ್ಲಿ ಈ ಕೆಲಸವೂ ಇಲ್ಲ. ಕೈಯಲ್ಲಿ ಕಾಸೂ ಇರುವುದಿಲ್ಲ’ ಎಂದು ವೃದ್ಧೆ ಬಸಮ್ಮ ಬೇಸರ ವ್ಯಕ್ತಪಡಿಸಿದರು.
‘ಅಡಿಕೆ ಸಿಪ್ಪೆಯಲ್ಲಿ ಅಡಿಕೆ ಚೂರು ಆರಿಸುವುದು ಸುಲಭದ ಕೆಲಸವಲ್ಲ. ಮಳೆಯಿಂದಾಗಿ ಸಿಪ್ಪೆ ಹಸಿಯಾಗಿರುವುದರಿಂದ ಕೆಟ್ಟ ವಾಸನೆ ಬರುತ್ತದೆ. ಅದನ್ನು ಸಹಿಸಿಕೊಂಡು ಕೆಲಸ ಮಾಡುತ್ತೇವೆ. ಅಲ್ಲದೇ ರಾಶಿಯಲ್ಲಿ ಹಾವು, ಚೇಳಿನಂತಹ ವಿಷ ಜಂತುಗಳಿರುತ್ತವೆ. ಕೆಲವೊಮ್ಮೆ ರಣರಣ ಬಿಸಿಲು, ಮಳೆ ನಮ್ಮನ್ನು ಕಾಡುತ್ತದೆ. ಒಂದಷ್ಟು ಕಾಸು ಸಿಗುತ್ತದೆ ಎಂಬ ಆಸೆಯಿಂದ ಈ ಉದ್ಯೋಗ ಆಯ್ದುಕೊಂಡಿದ್ದೇವೆ. ಕೆಲವರು ರಸ್ತೆ ಬದಿ ಸುರಿಯುವ ಅಡಿಕೆ ಸಿಪ್ಪೆ ರಾಶಿಗೆ ಬೆಂಕಿ ಹಾಕುವುದರಿಂದ ಅಡಿಕೆ ಚೂರು ಸುಟ್ಟು ಬೂದಿಯಾಗುತ್ತದೆ. ನಮಗೆ ಅಡಿಕೆ ಚೂರು ಸಿಗುವುದಿಲ್ಲ’ ಎನ್ನುತ್ತಾರೆ ಮತ್ತೊಬ್ಬ ವೃದ್ಧೆ ಸಾವಿತ್ರಮ್ಮ.
‘ಬೃಹತ್ ಗಾತ್ರದ ಯಂತ್ರಗಳಲ್ಲಿ ಹಸಿ ಅಡಿಕೆ ಸುಲಿಯುವಾಗ ಎಳೆಯ ಆಪಿ ಅಡಿಕೆಯು ಯಂತ್ರಗಳಿಂದ ಸಣ್ಣ ಚೂರುಗಳಾಗಿ ಒಡೆದು ಸಿಪ್ಪೆಯೊಂದಿಗೆ ಉಳಿಯುತ್ತದೆ. ಸಿಪ್ಪೆಯನ್ನು ಕೆಲವರು ಗೊಬ್ಬರವನ್ನಾಗಿಸಲು ತಮ್ಮ ಹೊಲಗಳು, ಗದ್ದೆಗಳು ಮತ್ತು ತೋಟಗಳಿಗೆ ಸಾಗಿಸುತ್ತಾರೆ. ಮತ್ತೆ ಕೆಲವರು ರಸ್ತೆಯ ಬದಿಗಳಲ್ಲಿ ಬಿಸಾಡುತ್ತಾರೆ. ಇಂತಹ ರಾಶಿಗಳಲ್ಲಿ ಈ ಆಪಿ ಅಡಿಕೆ ಚೂರುಗಳನ್ನು ವೃದ್ಧೆಯರು ಸಂಗ್ರಹಿಸಿ, ಒಣಗಿಸಿ, ಮಾರಾಟ ಮಾಡಿ ಚೂರುಪಾರು ಹಣ ಗಳಿಸುತ್ತಿದ್ದಾರೆ. ಇವರಿಂದ ಖರೀದಿಸಿದ ಈ ಅಡಿಕೆಯನ್ನು ವ್ಯಾಪಾರಿಗಳು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಕೃತಕ ಬಣ್ಣ ಸೇರಿಸಿ, ತಾಂಬೂಲದ ಅಡಿಕೆ ತಯಾರಿಸುವವರಿಗೆ ಮಾರುತ್ತಾರೆ’ ಎಂದು ಗ್ರಾಮದ ರೈತ ಕೆ. ಹಾಲಪ್ಪ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.