ದಾವಣಗೆರೆ: ‘ಶಿಕ್ಷಣ ಸಚಿವ ಮಧು ಬಂಗಾರಪ್ಪ ಈಡಿಗ ಸಮಾಜದ ಭೂಮಿ ಕಬಳಿಸಿದ್ದಾರೆ. ಜನವರಿ 6ರಂದು ದೆಹಲಿಗೆ ತೆರಳಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖಂಡ ರಾಹುಲ್ ಗಾಂಧಿಯವರಿಗೆ ದಾಖಲೆ ಸಮೇತ ದೂರು ಸಲ್ಲಿಸುತ್ತೇವೆ’ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
‘ಬೆಂಗಳೂರಿನಲ್ಲಿ ಪ್ರದೇಶ ಈಡಿಗರ ಸಮಾವೇಶ ಆಯೋಜಿಸುವುದಕ್ಕೆ ನಾಲ್ವರು ಸಚಿವರಿಂದ ಹಣ ಪಡೆದಿದ್ದಾರೆ. ಬೇಕಾದರೆ ಧರ್ಮಸ್ಥಳಕ್ಕೆ ಹೋಗಿ ಗಂಟೆ ಹೊಡೆದು ಪ್ರಮಾಣ ಮಾಡುತ್ತೇನೆ. ಅವರು ಬಂದು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ನನಗೆ ತಲೆ ಕೆಟ್ಟಿದೆ ಎಂದು ಅವರು ಹೇಳಿದ್ದಾರೆ. ಯಾರಿಗೆ ತಲೆ ಕೆಟ್ಟಿದೆ ಎಂಬುದು ಜನರಿಗೆ ಗೊತ್ತಿದೆ. ಅವರ ಹಾಗೆ ನನ್ನ ಮೇಲೆ ಚೆಕ್ ಬೌನ್ಸ್ ಪ್ರಕರಣ ಇಲ್ಲ. ಈ ಪ್ರಕರಣದಲ್ಲಿ ಅವರು ಜೈಲು ಸೇರುವ ಪರಿಸ್ಥಿತಿ ಎದುರಾಗಲಿದೆ. ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಸಮಾಜದ ಬೇರೊಬ್ಬ ಮುಖಂಡರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು.
‘ಮಧು ಬಂಗಾರಪ್ಪ, ಅಸಂಸ್ಕೃತ ಹಾಗೂ ಅವಿದ್ಯಾವಂತ ವ್ಯಕ್ತಿ. ಅವರ ಭ್ರಷ್ಟಾಚಾರವನ್ನು ಬಿಚ್ಚಿಡುವ ಕೆಲಸ ಮಾಡುತ್ತೇನೆ. ಸ್ವಾಮೀಜಿಗಳಿಗೆ, ಸಾಧು–ಸಂತರಿಗೆ ಅವರು ಕಿಂಚಿತ್ತೂ ಮರ್ಯಾದೆ ಕೊಡುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.