ಮೊಳಕಾಲ್ಮುರು: ಪಟ್ಟಣ ಅಥವಾ ಗ್ರಾಮ ಎಂಬ ಬೇಧವಿಲ್ಲದೇ ಎಲ್ಲ ಕಡೆಯೂ ಮನೆ ನಿರ್ಮಾಣದ ಮೌಲ್ಯಕ್ಕೆ ತಕ್ಕಂತೆ ತೆರಿಗೆ ನಿಗದಿಪಡಿಸುವ ಕಾರ್ಯ ಆರಂಭವಾಗಿದೆ.
ತಾಲ್ಲೂಕಿನಲ್ಲಿ 4 ತಿಂಗಳಿಂದ ಗ್ರಾಮ ಪಂಚಾಯಿತಿ ಮಟ್ಟದ ಪ್ರತಿ ಗ್ರಾಮಗಳಲ್ಲೂ ಮನೆ, ಖಾಲಿ ನಿವೇಶನ ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಆಸ್ತಿಗಳನ್ನು ಗುರುತಿಸಿ ಆನ್‌ಲೈನ್ ನೋಂದಣಿ ಮಾಡುವ ಕಾರ್ಯವನ್ನು ಗ್ರಾಮ ಪಂಚಾಯಿತಿಗಳು ಮಾಡುತ್ತಿವೆ. ಈ ಕಾರ್ಯ ರಾಜ್ಯದಾದ್ಯಂತ ನಡೆಯುತ್ತಿದ್ದು, ಈ ವರ್ಷದ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
‘ಈವರೆಗೆ ಮನೆ ಅಥವಾ ಖಾಲಿ ನಿವೇಶನ ಎಂದಷ್ಟೇ ಪಂಚಾಯಿತಿಗಳಲ್ಲಿ ನೋಂದಣಿ ಮಾಡಲಾಗುತ್ತಿತ್ತು. ಯಾವ ಬಗೆಯ ಮನೆ, ಚಾವಣಿ ರೀತಿ, ನೆಲಹಾಸು, ಉದ್ದ, ಅಗಲ, ಎಷ್ಟು ಅಂತಸ್ತಿನ ಮನೆ, ಬಳಕೆ ಮಾಡಿರುವ ಸಾಮಗ್ರಿಗಳು ಸೇರಿ ಯಾವ ಸಂಗತಿಗಳನ್ನೂ ಪಡೆಯುತ್ತಿರಲ್ಲ. ಮನೆ ಅಥವಾ ನಿವೇಶನ ಎಂದು ಮಾತ್ರ ಪರಿಗಣಿಸಿ ತೆರಿಗೆ ನಿಗದಿ ಮಾಡಲಾಗುತ್ತಿತ್ತು. ಇನ್ನು ಮುಂದೆ ಮೇಲಿನ ಎಲ್ಲ ಅಂಶಗಳನ್ನು ಉಲ್ಲೇಖಿಸಿ ತೆರಿಗೆ ನಿಗದಿಯಾಗಲಿದೆ. ಅಲ್ಲದೆ, ನಿವೇಶನದ ಮಾದರಿ ಹಾಗೂ ಕಟ್ಟಡದಲ್ಲಿ ನಡೆಯುವ ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳನ್ನು ಆಧರಿಸಿ ತೆರಿಗೆ ನಿಗದಿಪಡಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ಪ್ರಕಾಶ್ ತಿಳಿಸಿದರು.
‘ರಾಜ್ಯ ಸರ್ಕಾರ ಇದಕ್ಕೆ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿದ್ದು, ಇದರಲ್ಲಿ ಹಲವು ಕಟ್ಟಡ, ನಿವೇಶನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಚೆಕ್‌ಬಂದಿ ಸಹಿತ ಅಪ್‌ಲೋಡ್ ಮಾಡಬೇಕಿದೆ. ಎಲ್ಲ ಅಂಶಗಳನ್ನು ಅಪ್‌ಲೋಡ್ ಮಾಡಿದ ತಕ್ಷಣ ಮನೆ ಅಥವಾ ನಿವೇಶನ ಮೌಲ್ಯ ಬರುತ್ತದೆ. ಇದನ್ನು ಆಧರಿಸಿ ಆ್ಯಪ್ ತೆರಿಗೆ ನಿಗದಿ ಮಾಡುತ್ತದೆ. ಅಕ್ರಮ ಆಸ್ತಿಗಳು, ಬಿಟ್ಟು ಹೋಗಿರುವ ಆಸ್ತಿಗಳು ಇದರಲ್ಲಿ ಸೇರಲಿವೆ. ಪ್ರತಿ ಆಸ್ತಿಗೆ ಒಂದು ನಂಬರ್ ನೀಡಲಾಗುತ್ತದೆ. ಜತೆಗೆ ಪ್ರತಿ ಜಿಲ್ಲೆಗೆ, ಗ್ರಾಮ ಪಂಚಾಯಿತಿಗೆ ಕೋಡ್ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ವರ್ಷದ ಹಿಂದೆಯೇ ಈ ಕುರಿತ ಸರ್ವೇ ಮಾಡಬೇಕಿತ್ತು. ಕೆಲಸದ ಒತ್ತಡದಿಂದ ಸಾಧ್ಯವಾಗಿರಲಿಲ್ಲ. ತಾಲ್ಲೂಕಿನಲ್ಲಿ ಒಟ್ಟು 49,000 ಆಸ್ತಿಗಳಿದ್ದು, ಈವರೆಗೆ ಶೇ 13ರಷ್ಟು ಸರ್ವೆ ಕಾರ್ಯ ಪೂರೈಸಲಾಗಿದೆ. ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಏಪ್ರಿಲ್‌ನಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ ಬರುವ ಸಾಧ್ಯತೆ ಇದೆ’ ಎಂದರು.
‘ಸರ್ವೆ ಕಾರ್ಯದ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಧ್ವನಿವರ್ಧಕ, ಡಂಗೂರ ಮೂಲಕ ಪ್ರಚಾರ ಮಾಡಲಾಗಿದೆ. ಸರ್ವೆಗೆ ಸಾರ್ವಜನಿಕರು ಸಹಕಾರಿಸುತ್ತಿದ್ದಾರೆ. ಸಣ್ಣ ಮನೆ, ಶೀಟ್ ಮನೆ ಹೊಂದಿರುವವರು ಯಾವುದೇ ಅಡ್ಡಿ ಮಾಡುತ್ತಿಲ್ಲ. ಕೆಲ ಶ್ರೀಮಂತರು, ದೊಡ್ಡ ಮನೆಗಳ ಮಾಲೀಕರು ಮಾಹಿತಿ ನೀಡಲು ವಿಳಂಬ ಮಾಡುತ್ತಿದ್ದಾರೆ’ ಎಂದು ರಾಂಪುರ ಪಿಡಿಒ ಗುಂಡಪ್ಪ ಹೇಳಿದರು.
ಹೊಸ ತೆರಿಗೆ ಪದ್ಧತಿಯಿಂದ ಐಷರಾಮಿ ಮನೆಗಳ ತೆರಿಗೆ 3– 4 ಪಟ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈವರೆಗೆ ಐಷರಾಮಿ ಮನೆಗಳನ್ನು ಸಹ ಸಾಮಾನ್ಯ ಮನೆಗಳಂತೆ ಪರಿಗಣಿಸಲಾಗುತ್ತಿತ್ತು. ಇನ್ನು ಮುಂದೆ ಮನೆ ಕಟ್ಟಲು ಮಾಡಿರುವ ಮೌಲ್ಯಕ್ಕೆ ತಕ್ಕನಾಗಿ ತೆರಿಗೆ ನಿಗದಿಯಾಗಲಿದೆ. ನೀರಿನ ತೆರಿಗೆ ಸ್ವಚ್ಛತೆ ಶಿಕ್ಷಣ ಬೀದಿದೀಪ ತೆರಿಗೆಗಳು ಇದರಲ್ಲಿ ಸೇರಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇ– ಸ್ವತ್ತು ಮಾಡಿಸಲು ಜನರು ಸಾಕಷ್ಟು ಹೈರಾಣಾದ ಪ್ರಕರಣಗಳು ನಡೆದಿವೆ. ಹೊಸ ಆಸ್ತಿ ನೋಂದಣಿ ಕಾರ್ಯದಿಂದ ಇ– ಸ್ವತ್ತು ಪಡೆಯಲು ಅನುಕೂಲವಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ.-ಜಾಫರ್ ಷರೀಫ್ ಸಿಪಿಐ ಕಾರ್ಯದರ್ಶಿ ಮೊಳಕಾಲ್ಮುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.