ADVERTISEMENT

ದಾವಣಗೆರೆ: ಯಾರು ಕೊಡಬೇಕು ಕೂಲಿ? ವರ್ತಕರು–ಲಾರಿ ಮಾಲೀಕರ ನಡುವೆ ಸಂಘರ್ಷ

ಹಮಾಲಿಗಳಿಗೆ ಕೂಲಿ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ l ಡೀಸೆಲ್ ದರ ಹೆಚ್ಚಳ; ಬಾಡಿಗೆ ಸಿಗದೇ ಸಂಕಷ್ಟ

ಡಿ.ಕೆ.ಬಸವರಾಜು
Published 12 ಅಕ್ಟೋಬರ್ 2020, 2:15 IST
Last Updated 12 ಅಕ್ಟೋಬರ್ 2020, 2:15 IST
ದಾವಣಗೆರೆಯ ಪುಷ್ಪಾಂಜಲಿ ಚಿತ್ರಮಂದಿರದ ರಸ್ತೆಯ ಬಳಿ ಸಾಲುಗಟ್ಟಿ ನಿಂತಿರುವ ಲಾರಿಗಳು.
ದಾವಣಗೆರೆಯ ಪುಷ್ಪಾಂಜಲಿ ಚಿತ್ರಮಂದಿರದ ರಸ್ತೆಯ ಬಳಿ ಸಾಲುಗಟ್ಟಿ ನಿಂತಿರುವ ಲಾರಿಗಳು.   

ದಾವಣಗೆರೆ: ಹಮಾಲಿಗಳಿಗೆ ಕೂಲಿ ನೀಡುವ ವಿಚಾರದಲ್ಲಿ ಲಾರಿ ಮಾಲೀಕರು ಹಾಗೂ ವರ್ತಕರ ನಡುವೆ ಸಂಘರ್ಷ ಉಂಟಾಗಿದೆ. ಇದರ ನಡುವೆ ಹಮಾಲಿಗಳೂ ತಮಗೆ ಹೆಚ್ಚಿನ ಕೂಲಿ ನಿಗದಿಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಹೆಚ್ಚುತ್ತಿರುವ ಡೀಸೆಲ್ ದರ, ಕಡಿಮೆ ಬಾಡಿಗೆ, ಸಾಲದ ಕಂತು ಹಾಗೂ ವಿಮೆಯನ್ನು ಭರಿಸಲು ಕಷ್ಟವಾಗಿದ್ದು, ಲಾರಿ ಮಾಲೀಕರು ಹೈರಾಣಾಗಿದ್ದಾರೆ. ನಗರದಲ್ಲಿ700ಕ್ಕೂ ಹೆಚ್ಚು ಮಾಲೀಕರು ಒಂದು ವಾರದಿಂದ ತಮ್ಮ ಲಾರಿಗಳನ್ನು ರಸ್ತೆಗೆ ಇಳಿಸಿಲ್ಲ. ಇದರಿಂದಾಗಿ ನಗರದ ಆರ್‌.ಎಂ.ಸಿ. ಲಿಂಕ್‌ ರಸ್ತೆ, ಪುಷ್ಪಾಂಜಲಿ ಟಾಕೀಸ್‌ ರಸ್ತೆಯಲ್ಲಿ ಲಾರಿ ಹಾಗೂ ಮಿನಿ ಲಾರಿಗಳು ಸಾಲುಗಟ್ಟಿ ನಿಂತಿವೆ.

‘ಡೀಸೆಲ್ ದರ ಒಂದು ಲೀಟರ್‌ಗೆ ₹ 77ರಿಂದ ₹ 78 ಇದೆ. ವಾಹನದ ವಿಮೆ ಹಣ ₹ 10 ಸಾವಿರ ಇದ್ದಿದ್ದು, ₹ 70 ಸಾವಿರವಾಗಿದೆ. ಟೈರ್‌ಗಳ ಬೆಲೆ ₹ 17 ಸಾವಿರದಿಂದ ₹ 44 ಸಾವಿರಕ್ಕೆ ಹೆಚ್ಚಳವಾಗಿದೆ. ಆದರೆ, ಬಾಡಿಗೆ ಮಾತ್ರ ಹಳೆಯ ದರವೇ ಇದೆ. ಇದರಿಂದಾಗಿ ನಮಗೆ ಲಾಭವಾಗುತ್ತಿಲ್ಲ. ಇದರಿಂದಾಗಿ ಲಾರಿಗಳನ್ನು ಬಾಡಿಗೆ ಕಳುಹಿಸುತ್ತಿಲ್ಲ’ ಎಂದು ದಾವಣಗೆರೆ ಲೋಕಲ್‌ ಮತ್ತು ಗೂಡ್ಸ್‌ ಶೆಡ್‌ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ದಾದಾಪೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಡ್ರೈವರ್‌ಗಳ ಬಾಡಿಗೆ, ಊಟ–ತಿಂಡಿಗೆ ಹಣ, ಟೋಲ್‌ಗೆ ಹಣ ಭರಿಸಬೇಕು. ಇದೆಲ್ಲಾ ನಮಗೆ ಹೊರೆ ಯಾಗಿದೆ. ವರ್ತಕರು ಹಮಾಲಿಗಳಿಗೆ ಹಣ ನೀಡಿದರೆ ಲಾರಿ ಕಳುಹಿಸುತ್ತೇವೆ. ಇಲ್ಲದಿದ್ದರೆ ಇಲ್ಲ’ ಎನ್ನುತ್ತಾರೆ ಅವರು.

‘ಕೋವಿಡ್ ಕಾರಣದಿಂದಾಗಿ ಮೊದಲಿನ ರೀತಿ ವರ್ತಕರು ಬಾಡಿಗೆ ಕೊಡುತ್ತಿಲ್ಲ. ಈಗ ಎಲ್ಲಾ ವರ್ತಕರು ಹಮಾಲರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು,ಒಂದು ಟನ್‌ ಸರಕುಗಳನ್ನು ಲೋಡ್ ಮಾಡಲು ಒಬ್ಬ ಹಮಾಲಿಗೆ ₹ 70ರಿಂದ ₹ 120ರಷ್ಟು ಕೂಲಿ ನೀಡಬೇಕು. ಅವರ ಸರಕುಗಳನ್ನು ಲೋಡ್ ಮಾಡಿಸಲು ನಾವು ಏಕೆ ಹಣ ಕೊಡಬೇಕು’ ಎಂಬುದು ದಾದಾಪೀರ್ ಅವರ ಪ್ರಶ್ನೆ.

‘ಟ್ಯಾಕ್ಸಿಗಳಿಗೆ, ಆಟೊಗಳಿಗೆ ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ. ಆದರೆ, ನಮಗೆ ಯಾವುದೇ ದರ ನಿಗದಿ
ಯಾಗಿಲ್ಲ. ಏಜೆಂಟ್‌ಗಳು ನಮ್ಮ ಹೆಸರು ಹೇಳಿಕೊಂಡು ಹಣ ತಿನ್ನುತ್ತಿದ್ದಾರೆ.ಮಾರುಕಟ್ಟೆ ಬೆಲೆಗೆ ತಕ್ಕಂತೆ ಬಾಡಿಗೆ ನೀಡಬೇಕು’ ಎಂಬುದು ಅವರ ಆಗ್ರಹ. ‘ವರ್ತಕರು ತಮ್ಮ ಸರಕುಗಳಿಗೆ ಅವರೇ ಕೂಲಿ ನೀಡಬೇಕು. ಟಾರ್ಪಾಲು ಹಾಕಿಕೊಳ್ಳಲು ₹ 500 ಕೊಡುತ್ತೇವೆ. ಒಂದು ಕಡೆಯಿಂದ ಬಾಡಿಗೆ ಹೋದರೆ ವಾಪಸ್ ಬರುವಾಗ ಬಾಡಿಗೆ ಸಿಗುತ್ತದೆ ಎಂದು ನಿರೀಕ್ಷಿಸಲು ಆಗುವುದಿಲ್ಲ. ಇದರಿಂದ ನಮಗೆ ನಷ್ಟವಾಗುತ್ತಿದೆ’ ಎನ್ನುತ್ತಾರೆಲಾರಿ ಮಾಲೀಕರ ರಾಜ್ಯ ಘಟಕದ ಉಪಾಧ್ಯಕ್ಷಸೈಯದ್
ಸೈಫುಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.