ADVERTISEMENT

ಪಕ್ಷ ವಿರೋಧಿ ಚಟುವಟಿಕೆ ಬಿಡಿ

ಜಿ.ಬಿ. ವಿನಯ್‌ಕುಮಾರ್‌ಗೆ ಎಚ್.ಬಿ.ಮಂಜಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 6:15 IST
Last Updated 31 ಮಾರ್ಚ್ 2024, 6:15 IST
ಎಚ್‌.ಬಿ. ಮಂಜಪ್ಪ
ಎಚ್‌.ಬಿ. ಮಂಜಪ್ಪ   

ದಾವಣಗೆರೆ: ‘ಇನ್‌ಸೈಟ್ ಐಎಎಸ್ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದ್ದು, ಪಕ್ಷ ವಿರೋಧಿ ಚಟುವಟಿಕೆಯನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸಲಹೆ ನೀಡಿದರು.

‘ಸರ್ವೇ ಪ್ರಕಾರವೇ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಗೆ ಬಂದು ಅಭಿಪ್ರಾಯ ಕೇಳಿದಾಗ ವಿನಯ್‌ಕುಮಾರ್ ಸೇರಿದಂತೆ ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಒಂದು ಬಾರಿ ಟಿಕೆಟ್ ಘೋಷಣೆಯಾದ ಮೇಲೆ ಬದಲಾವಣೆ ಮಾಡುವುದು ಅಸಾಧ್ಯ. ವಿನಯ್‌ ಕುಮಾರ್ ಅವರಿಗೆ ಇನ್ನೂ ವಯಸ್ಸಿದೆ. ಪಕ್ಷದ ಪರವಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಅವಕಾಶ ಸಿಗುತ್ತದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾಂಗ್ರೆಸ್‌ನಿಂದ ಲೋಕಸಭೆಗೆ ಟಿಕೆಟ್ ಕೇಳಿದ್ದೀರಿ, ಇದಕ್ಕೆ ನಮ್ಮ ಅಭ್ಯಂತರವಿಲ್ಲ. ನಾನು ಕಳೆದ ಲೋಕಸಭೆಯಲ್ಲಿ ಪರಾಜಿತ ಅಭ್ಯರ್ಥಿಯಾದರೂ ನಾಯಕರ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂಬ ಕಾರಣದಿಂದ ಟಿಕೆಟ್‌ಗಾಗಿ ಹೆಚ್ಚಿನ ಹೋರಾಟ ಮಾಡದೇ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇನೆ’ ಎಂದರು.

ADVERTISEMENT

‘ಕಾಂಗ್ರೆಸ್‌ ಪಕ್ಷಕ್ಕೆ ಬಂದ ಮೇಲೆ ಪಕ್ಷದ ಸಿದ್ಧಾಂತವನ್ನು ಮೊದಲು ತಿಳಿದುಕೊಳ್ಳಬೇಕು. ಪಕ್ಷದ ಅಭ್ಯರ್ಥಿ, ಮುಖಂಡರ ಬಗ್ಗೆ ಹೇಳಿಕೆ ಮುಜುಗರವಾಗುವ ಹೇಳಿಕೆ ನೀಡುವುದು ತಪ್ಪು. ವಿನಯ್‌ಕುಮಾರ್ ಅವರು ಗ್ರಾಮ ವಾಸ್ತವ್ಯದ ವೇಳೆ ಯಾವುದೋ ಒಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ, ಇದು ಸರಿಯಲ್ಲ’ ಎಂದರು.

‌‌‘ವಿನಯ್‌ಕುಮಾರ್ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿಲ್ಲ. ಏಕಾಏಕಿ ಒಂದೇ ಬಾರಿಗೆ ಲೋಕಸಭೆ ಟಿಕೆಟ್ ಕೇಳುತ್ತಿದ್ದಾರೆ ಇದು ತಪ್ಪಲ್ಲ. ಟಿಕೆಟ್ ಘೋಷಣೆಯಾದ ಮೇಲೆ ಪಕ್ಷಕ್ಕೆ ಮುಜುಗರ ತರಬಾರದು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು, ಕ್ಷೇತ್ರದಲ್ಲಿ ಸಂಚರಿಸಿಲ್ಲ ಎಂದು ಹೇಳುವುದು ತಪ್ಪು.  ಕಳೆದ 3 ಚುನಾವಣೆಗಳಲ್ಲಿ ಎಸ್‌.ಎಸ್.ಮಲ್ಲಿಕಾರ್ಜುನ್ ಪರವಾಗಿ ಪ್ರಭಾ ಮಲ್ಲಿಕಾರ್ಜುನ್ ಹಳ್ಳಿಗಳನ್ನು ಸುತ್ತಿದ್ದಾರೆ. ಎಸ್‌.ಎಸ್.ಕೇರ್ ಟ್ರಸ್ಟ್ ಮೂಲಕ ಜನೋಪಯೋಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅವರದೇ ಆದ ವರ್ಚಸ್ಸು ಇದೆ. ಶಾಮನೂರು ಕುಟುಂಬದವರು ರಾಜಕೀಯ, ಶೈಕ್ಷಣಿಕವಾಗಿ ಶ್ರಮಿಸಿದ್ದಾರೆ. ವಿನಯ್‌ಗೆ ಶಾಮನೂರು ಕುಟುಂಬದ ಬಗ್ಗೆ ಮಾಹಿತಿ ಇಲ್ಲ’ ಎಂದು ಟೀಕಿಸಿದರು.

‘ಚನ್ನಯ್ಯ ಒಡೆಯರ್ ಶಿವಕುಮಾರ್ ಪುತ್ರ ಕಾಂಗ್ರೆಸ್‌ನಿಂದ ಟಿಕೆಟ್ ಬಯಸ್ಸಿದ್ದರು, ಅವರಿಗೆ ಟಿಕೆಟ್ ಸಿಗದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಾದ ಬಳಿಕ ಕ್ಷೇತ್ರಕ್ಕೆ ಬಂದಿದ್ದಾರೆ. ಅವರು ಏಕೆ ಬಂದಿದ್ದಾರೆ ಎಂಬುದನ್ನು ಪ್ರಶ್ನೆ ಮಾಡುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಬಿಡಬೇಕು. ಕುರುಬ ಸಮುದಾಯ ಸಿದ್ದರಾಮಯ್ಯ ಕೈಬಲಪಡಿಸಲು ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತಿದೆ. ವಿನಯ್‌ಕುಮಾರ್ ಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು. ಟಿಕೆಟ್ ಸಿಕ್ಕಿದ್ದರೆ ಸಮಾಜ ಬೆಂಬಲಿಸುತ್ತಿತ್ತು’ ಎಂದರು.

ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಸೈಯದ್ ಸೈಫುಲ್ಲಾ, ನಂದಿಗಾವಿ ಶ್ರೀನಿವಾಸ್, ಆವರಗೆರೆ ಉಮೇಶ್, ರೇವಣಸಿದ್ದಪ್ಪ, ಎಲ್.ಎಂ.ಹನುಮಂತಪ್ಪ, ಬಿ.ಎಚ್.ವೀರಭ್ರದಪ್ಪ, ಜಯಣ್ಣ, ನಂಜನಯ್ಕ, ದಿನೇಶ್ ಶೆಟ್ಟಿ, ಚಮನ್‌ಸಾಬ್, ಎಚ್.ಬಿ.ಗೋಣೆಪ್ಪ, ನಿಂಗಪ್ಪ, ಎ.ನಾಗರಾಜ್ ಇದ್ದರು.

ಶಿಸ್ತುಕ್ರಮ ತೆಗೆದುಕೊಳ್ಳಲು ನನಗೆ ಅಧಿಕಾರವಿಲ್ಲ

‘ನಾನು 7500 ಜನರಿಗೆ ಪ್ರಾಥಮಿಕ ಸದಸ್ಯತ್ವ ಕೊಡಿಸಿದ್ದೇನೆ. ಜಿ.ಬಿ. ವಿನಯ್‌ಕುಮಾರ್ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿರುವುದು ನನಗೆ ಗೊತ್ತಿಲ್ಲ. ಆದ್ದರಿಂದ ಶಿಸ್ತು ಕ್ರಮ ತೆಗೆದುಕೊಳ್ಳಲು ನನಗೆ ಅಧಿಕಾರವಿಲ್ಲ’ ಎಂದು ಎಚ್.ಬಿ. ಮಂಜಪ್ಪ ಹೇಳಿದರು. ‘ವಿನಯ್‌ ಅವರು ಔಟ್‌ರೀಚ್ ಉಪಾಧ್ಯಕ್ಷರಾಗಿರುವುದು ಜಿಲ್ಲಾ ಘಟಕದ ಅಧ್ಯಕ್ಷನಾದ ನನಗೆ ಗೊತ್ತಿಲ್ಲ. ಕೆಲವರು ಅವರೇ ವಿಸಿಟಿಂಗ್ ಕಾರ್ಡ್ ಲೆಟರ್‌ಹೆಡ್ ಮಾಡಿಸಿಕೊಂಡಿರುತ್ತಾರೆ. ದೊಡ್ಡ ಮಟ್ಟದ ನಾಯಕರಾದರೆ ಕೆಪಿಸಿಸಿಯಲ್ಲಿ ಶಿಸ್ತು ಸಮಿತಿಗೆ ಸೂಚಿಸುತ್ತೇವೆ. ಅದು ಕ್ರಮ ಕೈಗೊಳ್ಳುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.