ಚನ್ನಗಿರಿ: ಚನ್ನಗಿರಿ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿಯೇ ಗಮನ ಸೆಳೆದಿತ್ತು. ಬಿಜೆಪಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿ ಬೀಳುವ ಮೂಲಕ ಗಮನಸೆಳೆಯುವಂತಾಗಿತ್ತು.
ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಬಯಸಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದ್ದರಿಂದ ಅಂತಿಮವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನ ಬಸವರಾಜು ವಿ. ಶಿವಗಂಗಾ ಪ್ರಬಲ ಪೈಪೋಟಿ ನೀಡಲು ಬಯಸಿ ಬಿರುಸಿನ ಪ್ರಚಾರ ನಡೆಸಿದರು. ಅಂತಿಮ ಕ್ಷಣದವರೆಗೂ ಕೂಡ ಇವರಿಬ್ಬರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ಅಭ್ಯರ್ಥಿ ಬಸವರಾಜು ವಿ. ಶಿವಗಂಗಾ ಅವರಿಗೆ 77,414 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಸ್ವತಂತ್ರ ಅಭ್ಯರ್ಥಿಗಿಂತ 16,224 ಹೆಚ್ಚು ಮತಗಳನ್ನು ಪಡೆದು ಜಯದ ನಗೆ ಬೀರಿದರು.
ಬಸವರಾಜು ವಿ. ಶಿವಗಂಗಾ (42) ತಾಲ್ಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ಜನಿಸಿದವರು. ಪ್ರಸ್ತುತ ದಾವಣಗೆರೆ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ಸ್ವಂತ ಮನೆಯನ್ನು ನಿರ್ಮಿಸಿದ್ದಾರೆ.
ಬಿಜೆಪಿ ಎಚ್.ಎಸ್. ಶಿವಕುಮಾರ್ 21,229, ಆಮ್ ಆದ್ಮಿ ಪಾರ್ಟಿಯ ಆದಿಲ್ ಖಾನ್ 241, ಜೆಡಿಎಸ್ ಟಿ.ವಿ. ಪಟೇಲ್ 1204, ಬಿಎಸ್‌ಪಿಯ ಎಚ್. ಪ್ರವೀಣ್ 518, ಉತ್ತಮ ಪ್ರಜಾಕೀಯ ಪಕ್ಷ ಎಚ್. ಚಂದ್ರಶೇಖರ್ 1002, ಕೆಆರ್‌ಎಸ್ ಜಿ.ಎಂ. ಮಂಜುನಾಥ್ 197, ಕೆಆರ್‌ಪಿಪಿ ಎಂ. ರೂಪಾ 182, ಪಕ್ಷೇತರ ಟಿ. ಕುಬೇಂದ್ರ ಸ್ವಾಮಿ 433, ಪಕ್ಷೇತರ ಹರೀಶ್ ಹಳ್ಳಿ 468, ನೋಟಾ 550 ಮತಗಳು ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.