ADVERTISEMENT

ಕ್ಷಮಾಪಣೆ ಪತ್ರ ಬರೆದುಕೊಟ್ಟವರು ಸ್ವಾತಂತ್ರ್ಯ ಯೋಧರಾ: ಖಾದರ್‌ ಪ್ರಶ್ನೆ

ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 4:16 IST
Last Updated 22 ಆಗಸ್ಟ್ 2022, 4:16 IST
ಖಾದರ್‌
ಖಾದರ್‌   

ದಾವಣಗೆರೆ: ‘ಸಾವರ್ಕರ್ ಜೈಲಿನಲ್ಲಿ ಇದ್ದುದು ನಿಜವಾದರೂ 10 ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟವರು. ಅವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರಾ, ಹುತಾತ್ಮರಾ ಎಂಬ ಕುರಿತು ಸೈದ್ಧಾಂತಿಕ ಚರ್ಚೆಯಾಗಬೇಕಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾವರ್ಕರ್ ಜೊತೆಗೆ ಇನ್ನೂ 500 ಜನ ಜೈಲಲ್ಲಿ ಇದ್ದರು. ಅವರಲ್ಲಿ ಕೆಲವರನ್ನು ಬ್ರಿಟಿಷರು ಗುಂಡಿಟ್ಟು ಕೊಂದರೆ, ಇನ್ನು ಕೆಲವರನ್ನು ಲಾಠಿಯಿಂದ ಹೊಡೆದು ಸಾಯಿಸಿದರು. ಗುಂಡಿಗೆಬಲಿಯಾದವರುಸ್ವಾತಂತ್ರ್ಯಯೋಧರಾ ಅಥವಾ ಕ್ಷಮಾಪಣೆ ಪತ್ರ ಬರೆದುಕೊಟ್ಟವರಾ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ’ ಎಂದರು.

‘ಬಿಜೆಪಿಯವರು ಸಾವರ್ಕರ್ ಫೋಟೊ ಇಟ್ಟುಕೊಳ್ಳಲಿ. ತಮ್ಮ ಮನೆಗಳಿಗೆ ‘ಸಾವರ್ಕರ್ ಮನೆ’ ಎಂದು ಹೆಸರು ಇಟ್ಟುಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದ ಅವರು, ಯಾರೇ ಫ್ಲೆಕ್ಸ್ ಹರಿದು ಹಾಕಿದರೂ ಅದು ತಪ್ಪು’ ಎಂದು ಶಿವಮೊಗ್ಗದಲ್ಲಿ ಫ್ಲೆಕ್ಸ್ ಹರಿದು ತೆರವುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದರು.

‘ಬಿಜೆಪಿ ಸರ್ಕಾರ ರಾಜ್ಯವನ್ನು ಕೋಮುವಾದಿಗಳ ಕೈಗಿರಿಸಿ ಆನಂದಪಡುತ್ತಿದೆ. ಈ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬರುತ್ತೇವೆ ಎಂಬ ಭ್ರಮೆಯಲ್ಲಿ ಇದೆ’ ಎಂದು ಅವರು ಟೀಕಿಸಿದರು.

‘ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ವೈಚಾರಿಕ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ದಾಳಿ. ಆ ವೇಳೆ ಪೊಲೀಸರ ಕೈಯಲ್ಲಿ ಲಾಠಿ ಇರಲಿಲ್ಲವೇ, ಅವರನ್ನು ಓಡಿಸಬೇಕು ತಾನೇ? ಸರ್ಕಾರ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದು, ಪೊಲೀಸ್ ಅಧಿಕಾರಿಗಳು ನಿರ್ಭಯವಾಗಿ ಕೆಲಸ ಮಾಡಲು ಬಿಡುತ್ತಿಲ್ಲ’ ಎಂದು ಆರೋಪಿಸಿದರು.

‘ಮೊಟ್ಟೆ ತೂರಿದವನು ಬಿಜೆಪಿ ಕಾರ್ಯಕರ್ತನೇ ಹೊರತು ಕಾಂಗ್ರೆಸ್‌ನಲ್ಲಿ ಆಂತಹ ಮನೋಭಾವದವರು ಇಲ್ಲ. ಆ ರೀತಿ ತರಬೇತಿಯನ್ನೂ ನೀಡುವುದಿಲ್ಲ. ಅಂತಹವರಿಗೆ ನಮ್ಮಲ್ಲಿ ಜಾಗ ಕೂಡ ಇಲ್ಲ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಆರೋಪಿ ಹೇಳಿಕೆಯಿಂದ ಇದು ಸ್ಪಷ್ಟವಾಗಿದೆ’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.