ದಾವಣಗೆರೆ: ‘ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ಮುಗಿಯುವವರೆಗೆ ಮಾತ್ರ ಜಾರಿಯಲ್ಲಿರಲಿವೆ. ಆ ಬಳಿಕ ಸ್ಥಗಿತಗೊಳ್ಳಲಿವೆ’ ಎಂದು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಹೇಳಿದರು.
‘ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಹಣ ದೊರಕುತ್ತಿಲ್ಲ, ಅನ್ನಭಾಗ್ಯ ಯೋಜನೆಗೆ ಅಕ್ಕಿಯೇ ಇಲ್ಲ, ಶಕ್ತಿ ಯೋಜನೆಗೆ ಬಸ್‌ಗಳಿಲ್ಲ, ಗೃಹ ಜ್ಯೋತಿ ಯೋಜನೆಯೂ ಸಮರ್ಪಕವಾಗಿ ಜಾರಿಯಾಗಿಲ್ಲ, ಯುವನಿಧಿ ಯೋಜನೆಯ ಮಾನದಂಡಗಳು ಸರಿ ಇಲ್ಲ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಯುವ ನಿಧಿ’ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಯೋಜನೆಗೆ ಅರ್ಹರಲ್ಲದ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿದೆ. ಅವರಿಗೆ ಸರಿಯಾದ ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ವಿದ್ಯಾರ್ಥಿಗಳನ್ನು ಕರೆದೊಯ್ಯುವ ಬಗ್ಗೆ ಸರ್ಕಾರದ ಆದೇಶದ ಬಗ್ಗೆ ಕೇಳಿದರೆ ಸಮರ್ಪಕ ಉತ್ತರ ಸಿಕ್ಕಿಲ್ಲ. ಜಿಲ್ಲಾಧಿಕಾರಿ ಕಾನೂನು ಪ್ರಕಾರ ಕಾರ್ಯ ನಿರ್ವಹಿಸಲಿ’ ಎಂದು ಹೇಳಿದರು.
‘ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನವರು ರಾಮನ ಜಪ ಮಾಡುತ್ತಿದ್ದಾರೆ’ ಎಂದು ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
‘ರಾಮನನ್ನು ವಿರೋಧ ಮಾಡುತ್ತಿದ್ದ ಕಾಂಗ್ರೆಸ್‌ನವರಿಗೆ ಇದೀಗ ಜ್ಞಾನೋದಯವಾಗಿದೆ. ಅಯೋಧ್ಯೆ ಕರಸೇವಕರ ಮೇಲೆ ಗುಂಡು ಹಾರಿಸಿ, ಅವರ ಮೇಲೆ ಗುಂಡಾ ಕಾಯ್ದೆ ಹಾಕಿದವರು, ರಾಮನ ಹುಟ್ಟಿನ ಬಗ್ಗೆ ದಾಖಲೆ ಕೇಳಿದವರು, ರಾಮಮಂದಿರ ಟ್ರಸ್ಟ್ ಬಗ್ಗೆ ಅನುಮಾನಪಟ್ಟವರು ಇದೀಗ ರಾಮನಾಮ ಜಪ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮುಖಂಡರಾದ ಡಾ.ರವಿಕುಮಾರ್ ಟಿ.ಜಿ., ಕೆ.ಪಿ.ಕಲ್ಲಿಂಗಪ್ಪ, ಶಿವಪ್ರಕಾಶ್, ರಾಜು ವೀರಣ್ಣ, ಶಿವನಗೌಡ ಟಿ.ಪಾಟೀಲ, ಪ್ರವೀಣ ಜಾಧವ, ದಯಾನಂದ, ಜಯರುದ್ರೇಶ, ಮೋಹನ್, ಅಣಜಿ ಬಸವರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.