ADVERTISEMENT

ದಾವಣಗೆರೆ: ಸಿದ್ಧವಾಗಲಿದೆ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ

ಸ್ವಚ್ಛಭಾರತ್‌ ಮಿಷನ್‌ ಅಡಿಯಲ್ಲಿ ಹೆಬ್ಬಾಳ ಸಮೀಪ ₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣ

ಜಿ.ಬಿ.ನಾಗರಾಜ್
Published 2 ನವೆಂಬರ್ 2024, 7:18 IST
Last Updated 2 ನವೆಂಬರ್ 2024, 7:18 IST
   

ದಾವಣಗೆರೆ: ನಗರದಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯವನ್ನು ಸಂಸ್ಕರಿಸಿ ಮರುಬಳಕೆ ಮಾಡುವ ಘಟಕವನ್ನು ₹ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ ಕಟ್ಟಡದ ಭಗ್ನಾವಶೇಷಗಳಿಂದ ತಯಾರಿಸಿದ ಇಟ್ಟಿಗೆ, ಜಲ್ಲಿಕಲ್ಲು, ಎಂ–ಸ್ಯಾಂಡ್‌ ಮಾರುಕಟ್ಟೆಗೆ ಬರಲಿವೆ.

ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಈ ಘಟಕ ನಿರ್ಮಾಣಕ್ಕೆ ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಸಮೀಪದ ಹೊಸಹಳ್ಳಿಯಲ್ಲಿ 3 ಎಕರೆ ಗುರುತಿಸಲಾಗಿದೆ. ಪ್ರತಿ ನಿತ್ಯ 50 ಟನ್‌ ಕಟ್ಟಡ ತ್ಯಾಜ್ಯವನ್ನು ಸಂಸ್ಕರಿಸುವ ಘಟಕದ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದೆ. ಮುಂದಿನ ವರ್ಷ ಈ ಘಟಕ ಕಾರ್ಯಾರಂಭವಾಗುವ ಸಾಧ್ಯತೆ ಇದೆ. ಇದರಿಂದ ಮಹಾನಗರ ಪಾಲಿಕೆಗೆ ಹೊಸರೂಪದ ಆದಾಯ ಬರಲಿದೆ.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿತ್ಯ ಸರಾಸರಿ 30ರಿಂದ 40 ಟನ್‌ ಕಟ್ಟಡ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಳೆ ಕಟ್ಟಡ, ರಸ್ತೆಯ ಅವಶೇಷಗಳನ್ನು ಮಹಾನಗರ ಪಾಲಿಕೆ ವಿಲೇವಾರಿಯ ಹೊಣೆಯನ್ನು ಈವರೆಗೆ ನಿಭಾಯಿಸುತ್ತಿರಲಿಲ್ಲ. ಮನೆ–ಮನೆ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರು ಕಟ್ಟಡ ತ್ಯಾಜ್ಯವನ್ನು ಮುಟ್ಟುವುದಿಲ್ಲ. ಈ ಅವಶೇಷಗಳನ್ನು ಜನರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.

ADVERTISEMENT

62 ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ:

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಟ್ಟಡ ತ್ಯಾಜ್ಯ ಎಸೆಯುವ 62 ಸ್ಥಳಗಳನ್ನು ಗುರುತಿಸಲಾಗಿದೆ. ತಗ್ಗು ಪ್ರದೇಶ, ಖಾಲಿ ನಿವೇಶನ, ರಸ್ತೆ ಬದಿ, ಸರ್ಕಾರಿ ಜಾಗ ಹೀಗೆ ಹಲವು ಪ್ರದೇಶಗಳಲ್ಲಿ ಜನರು ತಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಇದು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ. ಕಟ್ಟಡದ ದೂಳು, ಅವಶೇಷಗಳು ಹೊಸ ಸಮಸ್ಯೆಯನ್ನು ಸೃಷ್ಟಿಸಿವೆ.

ಜಗಳೂರು ರಸ್ತೆಯ ಬೇತೂರು ಹಳ್ಳದಿಂದ ಮಾಗಾನಹಳ್ಳಿ ಮುಖ್ಯ ರಸ್ತೆಯ ಎರಡು ಬದಿ, ಕೊಂಡಜ್ಜಿ ರಸ್ತೆಯ ಶಿವಪುರದ ಬಳಿ, ದೇವರಬೆಳಕೆರೆ ರಸ್ತೆ, ಶಾಮನೂರು ಸಮೀಪದ ರೆಡ್ಡಿ ಪೌಲ್ಟ್ರಿ ಫಾರ್ಮ್‌ ಸಮೀಪ, ರಿಂಗ್ ರಸ್ತೆ, ಹಳೆ ಕುಂದವಾಡ ರಸ್ತೆ, ಪಂಪ್‌ಹೌಸ್‌ ಮುಂಭಾಗ, ಜೋಡಿ ಬನ್ನಿ ಮರ, ಆರ್‌ಟಿಒ ಕಚೇರಿ ಸಮೀಪದ ಮೇಲ್ಸೇತುವೆ ಸಮೀಪ ಸೇರಿ ಹಲವು ಸ್ಥಳ ತ್ಯಾಜ್ಯ ವಿಲೇವಾರಿಗೆ ಬಳಕೆಯಾಗುತ್ತಿವೆ.

ಕಟ್ಟಡ ತ್ಯಾಜ್ಯ ಮರುಬಳಕೆ:

ಕಬ್ಬಿಣದಂತಹ ಬೆಲೆಬಾಳುವ ವಸ್ತುಗಳು ಕಟ್ಟಡ ಅವಶೇಷಗಳಲ್ಲಿ ಇರುವುದಿಲ್ಲ. ಇಟ್ಟಿಗೆ, ಕಲ್ಲು ಸೇರಿ ಇತರ ವಸ್ತುಗಳು ಮಾತ್ರ ಇರುತ್ತವೆ. ಇವುಗಳನ್ನು ಮರುಬಳಕೆ ಮಾಡಲು ಸಂಸ್ಕರಣೆಯ ಅಗತ್ಯವಿದೆ. ಇದಕ್ಕೆ ಸುಮಾರು ₹ 2 ಕೋಟಿ ಮೌಲ್ಯದ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ₹ 5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ.

‘ಕಟ್ಟಡ ತ್ಯಾಜ್ಯವನ್ನು ಸಂಸ್ಕರಿಸಿದ ಬಳಿಕ ಇಟ್ಟಿಗೆ, ಎಂ–ಸ್ಯಾಂಡ್‌, ಮಣ್ಣು, ಜಲ್ಲಿಕಲ್ಲು ಸೇರಿ ಹಲವು ಉಪಯುಕ್ತ ವಸ್ತುಗಳು ಸಿಗುತ್ತವೆ. ಘಟಕಕ್ಕೆ ತಾಜ್ಯ ರವಾನೆ, ಸಂಸ್ಕರಣೆ ಹಾಗೂ ಮಾರಾಟ ಪ್ರತ್ಯೇಕವಾಗಿ ನಡೆಯಲಿದೆ. ಕಸವನ್ನು ರಸ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ಘಟಕ ಸ್ಥಾಪಿಸಲಾಗುತ್ತಿದೆ’ ಎಂದು ಪರಿಸರ ಅಧಿಕಾರಿ ಬಸವಣ್ಣ ಜಿ.ಆರ್‌. ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.