ADVERTISEMENT

ಬಡ್ಡಿ ಸಹಿತ ಹಣ ಮರಳಿಸಲು ಆದೇಶ

ರೈತರಿಗೆ ಕಳಪೆ ಗುಣಮಟ್ಟದ ಟಾರ್ಪಲಿನ್‌ ಪೂರೈಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:21 IST
Last Updated 15 ನವೆಂಬರ್ 2024, 16:21 IST

ದಾವಣಗೆರೆ: ಕೃಷಿ ಹೊಂಡಕ್ಕೆ ಹಾಕಲು ರೈತರೊಬ್ಬರಿಗೆ ಕಳಪೆ ಗುಣಮಟ್ಟದ ಟಾರ್ಪಲಿನ್‌ ಪೂರೈಕೆ ಮಾಡಿದ ಕಂಪನಿಯು ಶೇ 18ರ ಬಡ್ಡಿದರಲ್ಲಿ ಹಣ ಮರಳಿಸುವಂತೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ರೈತ ನಟರಾಜ್‌ ಮುಂಬೈ ಮೂಲದ ಕಂಪನಿಯೊಂದರ ಟಾರ್ಪಲಿನ್‌ ಅನ್ನು ₹ 1 ಲಕ್ಷಕ್ಕೆ 2023ರ ಮೇ 26ರಂದು ಖರೀದಿಸಿದ್ದರು. ಕೃಷಿ ಹೊಂಡಕ್ಕೆ ಹಾಕಿದ ಕೆಲವೇ ದಿನಗಳಲ್ಲಿ ಟಾರ್ಪಲಿನ್‌ ಹಾಳಾಗಿತ್ತು. ಈ ಕುರಿತು ನಟರಾಜ್‌ ಅವರು ಕಂಪನಿಯ ಡೀಲರ್‌ಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಮಾರಾಟಗಾರರು ರೈತನದೇ ತಪ್ಪು ಎಂದು ಆರೋಪಿಸಿದ್ದರು.

ಇದರಿಂದ ಬೇಸರಗೊಂಡ ನಟರಾಜ್, ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್‌ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಜರಾಜನ್‌ ಹಾಗೂ ಗೀನಾ ಬಿ.ಯು ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಕಳಪೆ ಗುಣಮಟ್ಟದ ಟಾರ್ಪಲಿನ್‌ ಪೂರೈಕೆ ಮಾಡಿ ಗ್ಯಾರಂಟಿ ಕೊಡದ ಕಂಪನಿಯು ಖರೀದಿ ದಿನಾಂಕದಿಂದ ದಂಡ ಸಹಿತ ಹಣ ಮರಳಿಸುವಂತೆ ಆದೇಶಿಸಿದೆ. ರೈತನಿಗೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ₹ 20 ಸಾವಿರ ಹಾಗೂ ನ್ಯಾಯಾಲಯದ ವೆಚ್ಚ ₹ 5 ಸಾವಿರ ಭರಿಸುವಂತೆಯೂ ಆದೇಶದಲ್ಲಿ ಸೂಚಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.