ADVERTISEMENT

ಆಮಿಷದ ನೆಪದಲ್ಲಿ ಗ್ರಾಹಕರಿಗೆ ವಂಚನೆ

ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಮಹಾಂತೇಶ್ ಈರಪ್ಪ ಶಿಗ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 4:54 IST
Last Updated 27 ಡಿಸೆಂಬರ್ 2022, 4:54 IST
ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್ ಈರಪ್ಪ ಶಿಗ್ಲಿ ಉದ್ಘಾಟಿಸಿದರು.     –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್ ಈರಪ್ಪ ಶಿಗ್ಲಿ ಉದ್ಘಾಟಿಸಿದರು.     –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಕ್ಕೆ ಭಾರತ ತೆರೆದುಕೊಂಡ ಮೇಲೆ ಗ್ರಾಹಕರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಆಮಿಷದ ನೆಪದಲ್ಲಿ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಗ್ರಾಹಕ ಜಾಗೃತನಾಗಬೇಕು’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್‌ ಈರಪ್ಪ ಶಿಗ್ಲಿ ಸಲಹೆ ನೀಡಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದಿಂದ ಸೋಮವಾರ ಇಲ್ಲಿನ ಜನತಾ ಬಜಾರ್‌ನಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮನುಷ್ಯ ತೊಟ್ಟಿಲಿನಿಂದ ಸಮಾಧಿಯವರೆಗೆ ಗ್ರಾಹಕನಾಗುತ್ತಾನೆ. ಜಗತ್ತು ಬದಲಾದಂತೆ ಆರ್ಥಿಕ, ಸಾಮಾಜಿಕ ಚಟುವಟಿಕೆ ಬದಲಾಗುತ್ತಾ ಹೋಗುತ್ತವೆ. ಇವುಗಳಿಗೆ ತಕ್ಕಂತೆ ಕಾನೂನುಗಳೂ ಬದಲಾಗುತ್ತವೆ. ವ್ಯಾಪಾರಿಗಳಿಗೆ ಲಾಭದ ಮನೋಭಾವ ಅತಿರೇಖಕ್ಕೆ ಹೋಗಿ ಗ್ರಾಹಕರಿಗೆ ಮೋಸ ಮಾಡುವ ಪ್ರವೃತ್ತಿ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಗ್ರಾಹಕ ಎಚ್ಚರದಿಂದ ಇರಬೇಕು’ ಎಂದರು.

ADVERTISEMENT

‘ಇಂದಿನ ದಿನಗಳಲ್ಲಿ ಆನ್‌ಲೈನ್ ಮಾರುಕಟ್ಟೆ ಹೆಚ್ಚಾಗುತ್ತಿದೆ. ಈ ಹಿಂದಿನಂತೆ ಜನರು ಕಿರಾಣಿ ಅಂಗಡಿಗಳಿಗೆ ಹೋಗುತ್ತಿಲ್ಲ. ವಿವಿಧ ಆಫರ್‌ಗಳು, ಡಿಸ್ಕೌಂಟ್ ಸೇಲ್ ಹೆಸರಿನಲ್ಲಿ ವಂಚನೆ ನಡೆಯುತ್ತಿರುತ್ತವೆ. ಆದರೆ ಗ್ರಾಹಕರು ಯಾರೂ ಬಿಲ್ ಚೆಕ್ ಮಾಡುವುದಿಲ್ಲ. ವಸ್ತುಗಳ ಗುಣಮಟ್ಟ, ಅವಧಿಯನ್ನು ಪರಿಶೀಲಿಸುವುದಿಲ್ಲ. ಗ್ರಾಹಕರು ಇವೆಲ್ಲವನ್ನೂ ಪರಿಶೀಲಿಸಬೇಕು’ ಎಂದು ಹೇಳಿದರು.

‘ಮಾಲ್‌ನಲ್ಲಿ ಕ್ಯಾರಿ ಬ್ಯಾಗ್‌ಗಳಿಗೂ ಬಿಲ್ ಹಾಕುವ ಸಂಸ್ಕೃತಿ ಇದೆ. ಆದರೆ ಹೀಗೆ ಮಾಡುವ ಹಾಗಿಲ್ಲ. ಕ್ರೆಡಿಟ್‌ ಕಾರ್ಡ್‌ಗಳ ಹೆಸರಿನಲ್ಲಿ ಹೆಚ್ಚಿನ ಹಣ ಕಡಿತವಾಗುತ್ತಿದ್ದು, ಬಳಕೆದಾರರು ಜಾಗೃತಿ ವಹಿಸಬೇಕು’ ಎಂದು ಸಲಹೆ ನೀಡಿದರು.

‘ತೂಕ ಮತ್ತು ಮಾಪನಗಳಲ್ಲೂ ಹೆಚ್ಚಿನ ಮೋಸವಾಗುತ್ತಿದ್ದು, ಈ ಕುರಿತು ನ್ಯಾಯಾಲಯದಲ್ಲಿ ಹೆಚ್ಚಿನ ಪ್ರಕರಣ ಗಳು ದಾಖಲಾಗುತ್ತಿಲ್ಲ’ ಎಂದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಜೆ. ನಜ್ಮಾ ಮಾತನಾಡಿ, ‘ಪ್ರತಿಯೊಬ್ಬರಿಗೂ ವಸ್ತುಗಳ ಅವಶ್ಯಕತೆ ಇರುವುದರಿಂದ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಗ್ರಾಹಕರಾಗುತ್ತಾರೆ. ಗ್ರಾಹಕ ಕಾನೂನುಗಳ ಬಗ್ಗೆ ಜನರಿಗೆ ಅರಿವು ಬಂದರೆ ಅವರು ಜಾಗೃತರಾಗುತ್ತಾರೆ. ಡಿಸ್ಕೌಂಟ್ ಸೇಲ್ ಹೆಸರಿನಲ್ಲಿ ಮಹಿಳೆಯರು ಮೋಸ ಹೋಗುತ್ತಿದ್ದು, ಈ ಬಗ್ಗೆ ನಿಮ್ಮ ಮನೆಯವರಿಗೆ ಅಲ್ಲದೇ ನೆರೆಹೊರೆಯವರಿಗೂ ಜಾಗೃತಿ ಮೂಡಿಸಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಸಿ.ಎಸ್‌.ತ್ಯಾಗರಾಜನ್, ಎಚ್. ಅನಿತಾ, ಸಂಚಾಲಕ ಬಿ.ಟಿ. ಪ್ರಕಾಶ್, ಎಚ್.ಎಸ್. ರಾಜು, ಆಹಾರ, ವಿಶ್ವನಾಥ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.