ADVERTISEMENT

ಕಣವಿಗೂ ದಾವಣಗೆರೆಗೂ ನಿರಂತರ ನಂಟು

ಸಾಹಿತ್ಯ-ಸಾಂಸ್ಕೃತಿಕ ಭೋಜನ ಉಣಬಡಿಸುತ್ತಿದ್ದ ಸಮನ್ವಯದ ಕವಿ

ಪ್ರಜಾವಾಣಿ ವಿಶೇಷ
Published 17 ಫೆಬ್ರುವರಿ 2022, 7:32 IST
Last Updated 17 ಫೆಬ್ರುವರಿ 2022, 7:32 IST
ಚನ್ನವೀರ ಕಣವಿ ಅವರಿಗೆ ದಾವಣಗೆರೆ ವಿರಕ್ತಮಠದಿಂದ ಶಿವಯೋಗಾಶ್ರಮದಲ್ಲಿ 2016ರಲ್ಲಿ ಜಯದೇವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು
ಚನ್ನವೀರ ಕಣವಿ ಅವರಿಗೆ ದಾವಣಗೆರೆ ವಿರಕ್ತಮಠದಿಂದ ಶಿವಯೋಗಾಶ್ರಮದಲ್ಲಿ 2016ರಲ್ಲಿ ಜಯದೇವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು   

ದಾವಣಗೆರೆ: ನಾಡೋಜ ಡಾ. ಚನ್ನವೀರ ಕಣವಿ ಅವರಿಗೂ ದಾವಣಗೆರೆಗೂ ಅವಿನಾಭಾವ ಸಂಬಂಧ. ಒಂದುಕಡೆ ರಕ್ತಸಂಬಂಧವಾದರೆ, ಇದನ್ನು ಮೀರಿ ಎಪ್ಪತ್ತರ ದಶಕದಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರಂತರ ನಂಟು ಇತ್ತು.

ಖ್ಯಾತ ಕಲಾವಿದ, ದೃಶ್ಯಕಲಾ ಮಹಾವಿದ್ಯಾಲಯ ಪ್ರಾಧ್ಯಾಪಕರಾಗಿದ್ದ ಡಾ. ಶಂಕರ ಪಾಟೀಲ ಚೆನ್ನವೀರ ಕಣವಿ ಅವರ ಸೋದರ ಅಳಿಯ. ಅವಿಭಾಜ್ಯ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಪ್ರತಿಮಾ ಸಭಾದ ಕಾರ್ಯಕ್ರಮಗಳಿಗೆ ಉಪನ್ಯಾಸಕರಾಗಿ, ಪ್ರಬಂಧ ಮಂಡನೆಗಾಗಿ ಹಲವು ಬಾರಿ ಬಂದಿದ್ದರು.

ಅಳಿಯ ಶಂಕರ ಪಾಟೀಲ ಅವರು ದೃಶ್ಯ ಕಲಾ ಮಹಾವಿದ್ಯಾಲಯಕ್ಕೆ ಅಧ್ಯಾಪಕರಾಗಿ ಬಂದನಂತರ ಕಣವಿ ಮತ್ತು ದಾವಣಗೆರೆಯ ನಂಟು ನಿರಂತವಾಯಿತು. ಸರಳತೆಯ ಪ್ರತಿರೂಪವಾಗಿದ್ದ ಆವರು ದಾವಣಗೆರೆಗೆ ಬಂದಾಗ ಎಲ್ಲರೊಡನೆ ಮುಕ್ತವಾಗಿ ಬೆರೆಯುತ್ತಿದ್ದರು. ಆಗಾಗ್ಗೆ ಶಂಕರ ಪಾಟೀಲರ ಕಲಾ ಗ್ಯಾಲರಿಯಲ್ಲಿ, ಕೆಲವೊಮ್ಮೆ ದಿ. ಪ್ರೊ. ಎಸ್. ಎಚ್. ಪಟೇಲರ ಮನೆಯಲ್ಲಿ ಸಾಹಿತ್ಯ-ಸಾಂಸ್ಕೃತಿಕ ಸಂವಾದ ಗೋಷ್ಠಿ ನಡೆಯುತ್ತಿದ್ದವು.

ADVERTISEMENT

ಕಲಾವಿದ ಶಂಕರ ಪಾಟೀಲರು ದಿವಂಗತರಾದ ನಂತರ ಅವರ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬ ಹೆಸರಾಂತ ಕಲಾವಿದರಿಗೆ ಶಂಕರ ಪಾಟೀಲರ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತಿತ್ತು. ಆ ಪ್ರಶಸ್ತಿ ಸಮಿತಿಯ ಗೌರವ ಅಧ್ಯಕ್ಷರಾಗಿದ್ದ ಕಣವಿ ಅವರು ಪ್ರತಿ ವರ್ಷ ದಾವಣಗೆರೆಗೆ ಬಂದು ಕಾರ್ಯಕ್ರಮ ನಡೆಸಿ, ಪ್ರಶಸ್ತಿ ಪ್ರದಾನ ಮಾಡಿ, ಸಾಹಿತ್ಯ-ಸಾಂಸ್ಕೃತಿಕ ಭೋಜನ ನೀಡಿ ಹೋಗುತ್ತಿದ್ದರು ಎಂದು ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಸ್ಮರಿಸಿದ್ದಾರೆ.

ಶಿಕ್ಷಣ ಉಳಿಸಿ ಸಮಿತಿಯ ಸಲಹೆಗಾರ: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಸಲಹೆಗಾರರಾಗಿ ಕಣವಿಯವರು ಕೆಲಸ ಮಾಡಿದ್ದರು. ವೈಜ್ಞಾನಿಕ ಮತ್ತು ಪ್ರಜಾತಾಂತ್ರಿಕ ಶಿಕ್ಷಣದ ಪರವಾಗಿದ್ದರು. ಬಡ ಮತ್ತು ಜನ ಸಾಮಾನ್ಯರಿಗೆ ಶಿಕ್ಷಣ ಕೈಗೆಟುಕುವಂತಿರಬೇಕು ಎಂದು ಪ್ರತಿಪಾದಿಸುತ್ತಿದ್ದರು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಸಂಚಾಲಕಿ ನಾಗಜ್ಯೋತಿ ನೆನಪು ಮಾಡಿಕೊಂಡಿದ್ದಾರೆ.

ಸಮನ್ವಯದ ಕವಿ ಚನ್ನವೀರ ಕಣವಿ ಅವರ ಸಾಹಿತ್ಯ ಸೇವೆಯನ್ನು, ಸಾಧನೆಯನ್ನು ಗುರುತಿಸಿ ದಾವಣಗೆರೆ ವಿರಕ್ತಮಠದಿಂದ ಶಿವಯೋಗಾಶ್ರಮದಲ್ಲಿ 2016ರಲ್ಲಿ ಜಯದೇವಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ನೆನಪಿಸಿಕೊಂಡರು.

ಕಂಬನಿ ಮಿಡಿದ ಹಲವರು

ನಾಡಿನ ಹೆಸರಾಂತ ಕವಿ, ಸಾಹಿತಿ, ಸಹೃದಯಿ ಡಾ. ಚನ್ನವೀರ ಕಣವಿ ಅವರ ನಿಧನದಿಂದಾಗಿ ಹಿರಿಯ ತಲೆಮಾರಿನ ಸಾಹಿತ್ಯ ಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕವನ, ವಿಮರ್ಶೆ, ಪ್ರಬಂಧಗಳನ್ನು ಬರೆದು ತಮ್ಮದೇ ಶೈಲಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಚನ್ನವೀರ ಕಣವಿ ಅವರು ಭಾವನಾಜೀವಿ. ಪ್ರಕೃತಿ, ಪ್ರೀತಿ, ಸ್ನೇಹ ಸಂಬಂಧಗಳಿಗೆ ಆದ್ಯತೆ ನೀಡುತ್ತಿದ್ದ ಕಣವಿ ಅವರ ಸರಳ ಜೀವನ ಶೈಲಿ ಎಲ್ಲರಿಗೂ ಮಾದರಿ. ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ, ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳಿಗೆ ಸೀಮಿತವಾಗಿದ್ದರು. ಕಣವಿ ಅವರನ್ನು ದಾವಣಗೆರೆ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲಾಗಿತ್ತು. ಅವರೂ ಸಹ ಒಪ್ಪಿಕೊಂಡಿದ್ದರು. ಆದರೆ ಅನಾರೋಗ್ಯ, ನಂತರ ಕೊರೊನಾ ಕಾರಣದಿಂದ ಅವರು ಬರಲಾಗಲಿಲ್ಲ. ಅವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂಬ ನೋವು ಉಳಿದಿದೆ ಎಂದು ಕುಲಪತಿ ನೆನಪಿಸಿಕೊಂಡಿದ್ದಾರೆ.

ಸಾಹಿತ್ಯ ಲೋಕದ ಆದರ್ಶ ವ್ಯಕ್ತಿಯಾಗಿದ್ದ ಕಣವಿ ಅವರು ಸಾಧನೆಯ ಉತ್ತುಂಗಕ್ಕೇರಿದ್ದರೂ ಸರಳತೆ ಮತ್ತು ಮೇರು ವ್ಯಕ್ತಿತ್ವದ ಮೂಲಕ ಇತರರಿಗೆ ಮಾದರಿಯಾಗಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಲೋಕ ಬಡವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಸಂತಾಪ ಸೂಚಿಸಿದ್ದಾರೆ.

ಚನ್ನವೀರ ಕಣವಿ ಅವರು ಸಾಮಾಜಿಕ ಬದಲಾವಣೆಗೆ ತುಡಿಯುತ್ತಿದ್ದವರು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ, ಪ್ರಗತಿಪರ ವಿಚಾರಗಳಿಗೆ ಬೆಂಬಲಿಸುತ್ತಿದ್ದರು ಎಂದು ಎಐಡಿಎಸ್‍ಒ, ಎಐಡಿವೈಒ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳು ಶ್ರದ್ಧಾಂಜಲಿ ಸೂಚಿಸಿವೆ ಎಂದು ಮೂರು ಸಂಘಟನೆಗಳ ಜಿಲ್ಲಾ ಮುಖಂಡರಾದ ಪೂಜಾ ನಂದಿಹಳ್ಳಿ, ಪರಶುರಾಮ್, ಭಾರತಿ ಕೆ. ತಿಳಿಸಿದ್ದಾರೆ.

ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.