ADVERTISEMENT

ಪತ್ನಿ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:13 IST
Last Updated 30 ಮೇ 2024, 7:13 IST

ದಾವಣಗೆರೆ: ಬಂಗಾರದ ಆಭರಣ ಬಿಡಿಸಿಕೊಡು, ಮದ್ಯಪಾನದ ಚಟವನ್ನು ಬಿಡು ಎಂದು ಬುದ್ಧಿವಾದ ಹೇಳಿದ ಪತ್ನಿಯನ್ನು ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೊನ್ನಾಳಿ ತಾಲ್ಲೂಕು ಸೊರಟೂರು ಗ್ರಾಮದಲ್ಲಿ ವಾಸವಿದ್ದ ಗುಡ್ಡೇಹಳ್ಳಿ ಗ್ರಾಮದ ಗಿರೀಶ (32) ಶಿಕ್ಷೆಗೆ ಗುರಿಯಾದ ಅಪರಾಧಿ. ಈತನ ಪತ್ನಿ ಶಿಲ್ಪಾ ಕೊಲೆಯಾದವರು.

2021ರ ಆಗಸ್ಟ್ 28ರಂದು ಮದ್ಯಪಾನದ ಚಟ ಬಿಡು, ಗಿರವಿ ಇಟ್ಟಿರುವ ಬಂಗಾರದ ಆಭರಣಗಳನ್ನು ತಂದುಕೊಡು ಎಂದು ಶಿಲ್ಪಾ ಅವರು ಗಿರೀಶನಿಗೆ ಬುದ್ಧಿವಾದ ಹೇಳಿದರು. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದು ಹಗ್ಗದಿಂದ ಬೆಡ್‌ ರೂಮ್‌ನ ಚಾವಣಿಯ ಮರದ ತೊಲೆಗೆ ಹಗ್ಗ ಹಾಕಿದ ಗಿರೀಶ ಒಂದು ತುದಿಯನ್ನು ಶಿಲ್ಪಾ ಅವರ ಕುತ್ತಿಗೆಗೆ ಕಟ್ಟಿ ಎಳೆದು ಕೊಲೆ ಮಾಡಿದ್ದ.

ADVERTISEMENT

ಈ ಕುರಿತು ಶಿಲ್ಪಾ ಅವರ ತಂದೆ ದೂರು ದಾಖಲಿಸಿದ್ದರು. ಹೊನ್ನಾಳಿ ಠಾಣೆಯ ಅಂದಿನ ತನಿಖಾಧಿಕಾರಿ ಸಿಪಿಐ ದೇವರಾಜ್ ಟಿ.ವಿ., ಗಿರೀಶನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಾದವಿವಾದ ಆಲಿಸಿದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್., ಅವರು ಮೇ 28ರಂದು ಶಿಕ್ಷೆ ಪ್ರಕಟಿಸಿದರು.

ಪಿರ್ಯಾದುದಾರರ ಪರವಾಗಿ ಸರ್ಕಾರಿ ಅಭಿಯೋಜಕ ಜಯ್ಯಪ್ಪ ಅವರು ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.