ADVERTISEMENT

ಐಟಿಐ ಪ್ರಾಯೋಗಿಕ ಪರೀಕ್ಷೆಯಲ್ಲಿ ನಕಲು

ತನಿಖೆ ನಡೆಸಲು ಐಟಿಐ ನಿರ್ದೇಶಕರಿಂದ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 4:57 IST
Last Updated 8 ಆಗಸ್ಟ್ 2022, 4:57 IST
ಮಾಯಕೊಂಡದಲ್ಲಿ ಐಟಿಐ ಕಾಲೇಜಿನಲ್ಲಿ ನಕಲು ಮಾಡಲಾಗಿದೆ ಎಂದು ಹರಿದಾಡಿರುವ ವಿಡಿಯೊದ ಒಂದು ತುಣುಕು
ಮಾಯಕೊಂಡದಲ್ಲಿ ಐಟಿಐ ಕಾಲೇಜಿನಲ್ಲಿ ನಕಲು ಮಾಡಲಾಗಿದೆ ಎಂದು ಹರಿದಾಡಿರುವ ವಿಡಿಯೊದ ಒಂದು ತುಣುಕು   

ದಾವಣಗೆರೆ: ಮಾಯಕೊಂಡದ ಐಟಿಐ ಕಾಲೇಜಿನಲ್ಲಿ ಲಿಖಿತ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡುತ್ತಿರುವ, ಪ್ರಾಯೋಗಿಕ ಪರೀಕ್ಷೆಯಲ್ಲಿ ಹೊರಗಿನಿಂದ ಜೋಡಿಸಿ ಯಂತ್ರ ತಂದಿರುವ ವಿಡಿಯೊ ಹರಿದಾಡಿದೆ.

ಈ ಬಗ್ಗೆ ಹೊರಗಿನವರಿಗೆ ಮಾಹಿತಿ ನೀಡಿರುವುದೇ ಈ ವಿಡಿಯೊ ಮಾಡಲು ಕಾರಣ ಎಂದು ಕಾಲೇಜಿನ ಗೌರವ ಉಪನ್ಯಾಸಕಿಗೆ ಜೀವ ಬೆದರಿಕೆ ಕರೆಗಳೂ ಬರತೊಡಗಿವೆ. ಈ ಬಗ್ಗೆ ಅವರು ಹರಿಹರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣದ ವಿವರ: ಐಟಿಐ ಫಿಟ್ಟರ್‌ ವಿಭಾಗದ ಎರಡನೇ ವರ್ಷದ ವೃತ್ತಿ ಪ್ರಾಯೋಗಿಕ ಪರೀಕ್ಷೆ ಆಗಸ್ಟ್‌ 3 ಮತ್ತು 4ರಂದು ನಡೆದಿತ್ತು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಚೀಟಿ ಇಟ್ಟುಕೊಂಡು ನಕಲು ಮಾಡುತ್ತಿರುವ ವಿಡಿಯೊ ಹರಿದಾಡಿತ್ತು. ಯಂತ್ರ ದುರಸ್ತಿ, ಜೋಡಣೆಯನ್ನು ಪರೀಕ್ಷೆ ಮೇಲ್ವಿಚಾರಕರ ಎದುರು ಮಾಡುವ ಬದಲು ಹೊರಗೆ ಜೋಡಿಸಿ ತಂದಿರುವ ಆರೋಪವೂ ಎದುರಾಗಿತ್ತು.

ADVERTISEMENT

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮತ್ತು ಹೊರಗಿನ ವ್ಯಕ್ತಿ ಸೇರಿಕೊಂಡು ಹಣಕ್ಕಾಗಿ ಪರೀಕ್ಷಾ ಅಕ್ರಮ ನಡೆಸಲು ಅವಕಾಶ ನೀಡಿದ್ದಾರೆ ಎಂದು ವಿನಯಕುಮಾರ್ ಎಂಬವರು ಆರೋಪಿಸಿದ್ದರು.

ಈ ವಿಡಿಯೊ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಬೆಂಗಳೂರಿನಲ್ಲಿರುವ ಐಟಿಐ ನಿರ್ದೇಶಕಿ ಜ್ಯೋತಿ ಕೆ. ಅವರು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ.

‘ತಕ್ಷಣ ಭೇಟಿ ನೀಡಿ ಪರಿಶೀಲಿಸಬೇಕು. ಆಗಸ್ಟ್‌ 10ರ ಒಳಗೆ ವರದಿ ನೀಡಬೇಕು ಎಂದು ಜಂಟಿ ನಿರ್ದೇಶಕರಿಗೆ ತಿಳಿಸಿದ್ದೇನೆ’ ಎಂದು ಜ್ಯೋತಿ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

ಬೆದರಿಕೆ ಕರೆ: ದೂರು

ಮಾಯಕೊಂಡ ಐಟಿಐ ಕಾಲೇಜಿನಲ್ಲಿ ಗೌರವ ಉಪನ್ಯಾಸಕಿಯಾಗಿ ರೇಖಾ ಕುಮಾರಿ ಕೆ.ಎಂ. ಕೆಲಸ ಮಾಡುತ್ತಿದ್ದಾರೆ. ಅವರೇ ಈ ನಕಲು ಬಗ್ಗೆ ಹೊರಗೆ ಮಾಹಿತಿ ನೀಡಿದ್ದರಿಂದ ಹೊರಗಿನವರು ವಿಡಿಯೊ ಮಾಡಿದ್ದಾರೆ ಎಂಬ ಅನುಮಾನದಿಂದ ರೇಖಾ ಕುಮಾರಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಈ ವಿಡಿಯೊ ಪ್ರಕರಣಕ್ಕೆ ನಾನು ಕಾರಣಕರ್ತಳೆಂದು ತಪ್ಪಾಗಿ ಭಾವಿಸಿ ಮಾರುತಿ, ಭರತ್‌, ಮಂಜು ಅವರ ಮೊಬೈಲ್‌ಗಳಿಂದ ಬೆದರಿಕೆ ಕರೆಗಳು ಬಂದಿವೆ. ಈ ಹಗರಣ ಬಹಿರಂಗವಾಗುವುದರಲ್ಲಿ ನನ್ನ ಕೈವಾಡವಿಲ್ಲ. ಹಾಗಾಗಿ ಬೆದರಿಕೆ ಒಡ್ಡಿರುವ ಮೂವರು ಮತ್ತು ಅದಕ್ಕೆ ಕಾರಣರಾಗಿರುವ ಪ್ರಭಾರ ಪ್ರಾಂಶುಪಾಲ ಕಾಳಾಚಾರ್‌, ಸಿದ್ದೇಶ್‌ ಮೇಲೆ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.