ದಾವಣಗೆರೆ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಕೊರೊನಾ ವೈರಾಣುವಿನ ಜೆಎನ್.1 ಉಪತಳಿ ಪತ್ತೆಯಾಗಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಕೋವಿಡ್ ಸೋಂಕು ಪತ್ತೆ ಹಾಗೂ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸಿದ್ಧತೆಗಳನ್ನು ನಡೆಸಿವೆ.
ಕೋವಿಡ್ ಪರೀಕ್ಷೆ, ಆಮ್ಲಜನಕ ಸಿಲಿಂಡರ್, ಔಷಧಿ, ಹಾಸಿಗೆಗಳ ಸುಸ್ಥಿತಿ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದು, ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
1,038 ಜಂಬೂ ಸಿಲಿಂಡರ್
ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಒಟ್ಟು 1,038 ಜಂಬೂ ಸಿಲಿಂಡರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ. ಕೋವಿಡ್‌ನಿಂದ ಬಳಲುವ ರೋಗಿಗಳಿಗೆ ಉಸಿರಾಟ ಸಮಸ್ಯೆ ತೀವ್ರವಾದಾಗ ಜಂಬೂ ಸಿಲಿಂಡರ್‌ಗಳು ಆಮ್ಲಜನಕ ಪೂರೈಸಲು ಸಹಕಾರಿಯಾಗುತ್ತವೆ.
ಜಿಲ್ಲಾ ಆಸ್ಪತ್ರೆಯಲ್ಲಿ 2 ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 4 ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಮಾತ್ರವಲ್ಲದೇ ಜಿಲ್ಲೆಯಲ್ಲಿ 595 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಬಳಕೆಗೆ ಯೋಗ್ಯವಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕು ಆಸ್ಪತ್ರೆಗಳಲ್ಲಿರುವ 4 ಟ್ಯಾಂಕ್‌ಗಳಿಗೆ ಇನ್ನಷ್ಟೇ ಪರವಾನಗಿ ಸಿಗಬೇಕಿದೆ. ಪರವಾನಗಿ ದೊರೆತ ಕೂಡಲೇ ಅವುಗಳು ಕಾರ್ಯನಿರ್ವಹಿಸಲಿವೆ.
‘ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ತಲಾ 100 ಆಮ್ಲಜನಕ ಬೆಡ್‌ಗಳಿವೆ. ಇದರಿಂದಾಗಿ ಕೋವಿಡ್ ರೋಗಿಗಳ ಸಂಖ್ಯೆ ದಿಢೀರ್ ಏರಿಕೆಯಾದರೂ, ಹೆಚ್ಚಿನ ಸಾವು ನೋವುಗಳಾಗದಂತೆ ತಡೆಗಟ್ಟಬಹುದಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಷಣ್ಮುಖಪ್ಪ ಎಸ್. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ರ‍್ಯಾಮ್‌ಡಿಸಿವಿರ್ ಸೇರಿದಂತೆ ಕೋವಿಡ್ ರೋಗಿಗಳಿಗೆ ನೀಡಲಾಗುವಂತಹ ಎಲ್ಲ ಔಷಧಿಗಳೂ ಜಿಲ್ಲೆಗೆ ಅಗತ್ಯವಿರುವಷ್ಟು ಲಭ್ಯ ಇವೆ. ಆರ್‌ಎಟಿ (ರ‍್ಯಾಟ್) ಕಿಟ್‌ಗಳು ಅಗತ್ಯ ಪ್ರಮಾಣದಲ್ಲಿದ್ದು, ಪರೀಕ್ಷೆ ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್ ಕಿಟ್‌ಗಳಿಗೆ ಬೇಡಿಕೆ ಸಲ್ಲಿಸಿದ್ದು, 2–3 ದಿನಗಳಲ್ಲಿ ಪೂರೈಕೆಯಾಗುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.
‘ಭಯ ಆತಂಕ ಬೇಡ ಎಚ್ಚರಿಕೆ ವಹಿಸಿ’
‘ಕೇರಳ ತಮಿಳುನಾಡಿನಲ್ಲಿ ಕೋವಿಡ್‍ನ ರೂಪಾಂತರ ತಳಿ ಜೆಎನ್-1 ಪತ್ತೆಯಾಗಿದ್ದು ಸಾರ್ವಜನಿಕರು ಆತಂಕಪಡದೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ಜ್ವರ ಕೆಮ್ಮು ನೆಗಡಿ ಉಸಿರಾಟದ ಸೋಂಕಿನ ಲಕ್ಷಣಗಳಿರುವವರು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು’ ಎಂದರು.
‘ಕೋವಿಡ್ ಚಿಕಿತ್ಸೆಗೆ ಬೇಕಾದ ಔಷಧಗಳ ದಾಸ್ತಾನು ಮಾಡಲು ಮತ್ತು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್‍ಗಳನ್ನು ಸಿದ್ಧ ಮಾಡಿಟ್ಟುಕೊಂಡು ಚಿಕಿತ್ಸೆಗೆ ಬೇಕಾದ ಆಮ್ಲಜನಕ ವೆಂಟಿಲೇಟರ್‌ಗಳನ್ನು ಸಿದ್ಧಮಾಡಿಕೊಳ್ಳಿ’ ಎಂದು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಪಿ.ಎಲ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಷಣ್ಮುಖಪ್ಪ ಚಿಗಟೇರಿ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗೇಂದ್ರಪ್ಪ ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ರಾಘವನ್ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರುದ್ರಸ್ವಾಮಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಮಂಜುನಾಥ್ ಪಾಟೀಲ್ ಪಾಲಿಕೆ ಆಯುಕ್ತೆ ರೇಣುಕಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್ ಸಭೆಯಲ್ಲಿದ್ದರು.
ಜಿಲ್ಲೆಯಲ್ಲಿ ಕೋವಿಡ್‌ನ ಜೆಎನ್.1 ಉಪತಳಿಯ ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವೃದ್ಧರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಮಾಸ್ಕ್ ಧರಿಸಿ ಓಡಾಡುವುದು ಉತ್ತಮ.ಡಾ. ಷಣ್ಮುಖಪ್ಪ ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.