ADVERTISEMENT

ದಾವಣಗೆರೆ | ಸತತ ಮಳೆ: ಕೊಳೆಯುತ್ತಿದೆ ಕಟಾವಿಗೆ ಬಂದ ಮೆಕ್ಕೆಜೋಳ

ಸತತ ಮಳೆ: ಬೆಳೆಗಳ ಮೇಲೂ ದುಷ್ಪರಿಣಾಮ; ಹೆಚ್ಚಿದ ರೈತರ ಆತಂಕ

ಸಿದ್ದಯ್ಯ ಹಿರೇಮಠ
Published 18 ಅಕ್ಟೋಬರ್ 2024, 23:45 IST
Last Updated 18 ಅಕ್ಟೋಬರ್ 2024, 23:45 IST
<div class="paragraphs"><p>ದಾವಣಗೆರೆ ಜಿಲ್ಲೆಯ ಬಿಳಿಚೋಡು ಬಳಿಯ ಮುಚ್ಚನೂರು ಗ್ರಾಮದ ಜಮೀನಿನಲ್ಲಿ ಕಟಾವು ಮಾಡಿ ರಾಶಿ ಹಾಕಿರುವ ಮೆಕ್ಕೆಜೋಳದ ಸುತ್ತ ಮಳೆ ನೀರು ನಿಂತಿದೆ </p></div>

ದಾವಣಗೆರೆ ಜಿಲ್ಲೆಯ ಬಿಳಿಚೋಡು ಬಳಿಯ ಮುಚ್ಚನೂರು ಗ್ರಾಮದ ಜಮೀನಿನಲ್ಲಿ ಕಟಾವು ಮಾಡಿ ರಾಶಿ ಹಾಕಿರುವ ಮೆಕ್ಕೆಜೋಳದ ಸುತ್ತ ಮಳೆ ನೀರು ನಿಂತಿದೆ

   

–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ವಿವಿಧ ರೀತಿಯ ಬೆಳೆಗಳಿಗೆ ಹಾನಿ ಆಗಿದ್ದು, ‘ಕಟಾವಿಗೆ ಬಂದ ಫಸಲು ಕೈಸೇರುವುದೇ’ ಎಂಬ ಪ್ರಶ್ನೆ ರೈತ ಸಮುದಾಯವನ್ನು ಕಾಡುತ್ತಿದೆ.

ADVERTISEMENT

ಕಳೆದ ವರ್ಷ ಆವರಿಸಿದ್ದ ತೀವ್ರ ಬರಗಾಲದಿಂದ ಸಂಪೂರ್ಣ ನಷ್ಟ ಅನುಭವಿಸಿದ್ದ ರೈತರು, ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆ ಸುರಿದು, ಹಚ್ಚಹಸಿರಿನಿಂದ ಕಂಗೊಳಿಸಿದ್ದ ಬೆಳೆಯನ್ನು ಕಂಡು ಸಹಜವಾಗಿಯೇ ಹರ್ಷಚಿತ್ತರಾಗಿದ್ದರು. ಆದರೆ ಬಿರುಸಿನಿಂದ ಸುರಿಯುತ್ತಿರುವ ಹಿಂಗಾರು ಮಳೆ ಆ ಹರ್ಷವನ್ನು ಕಿತ್ತುಕೊಂಡಿದೆ.

ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್‌ ಭೂಮಿಯಲ್ಲಿ ಬೆಳೆದಿರುವ ಮೆಕ್ಕೆಜೋಳ 15 ದಿನಗಳಿಂದೀಚೆಗೆ ಕಟಾವಿಗೆ ಬಂದಿದೆ. ಇನ್ನೇನು ಕಾಳು ಮನೆ ಸೇರಲಿದೆ ಎಂಬ ಸಂದರ್ಭದಲ್ಲಿ ಶುರುವಾದ ಮಳೆ, ಬಿಡುವನ್ನೇ ನೀಡದ್ದರಿಂದ ತೆನೆಯು ಜಮೀನಿನಲ್ಲೇ ಕೊಳೆಯುವ ಆತಂಕ ಎದುರಾಗಿದೆ.

ಈಗಾಗಲೇ ಕೆಲವು ರೈತರು ಮೆಕ್ಕೆಜೋಳದ ತೆನೆಯನ್ನು ಕಟಾವು ಮಾಡಿ ಜಮೀನಿನಲ್ಲೇ ರಾಶಿ ಹಾಕಿದ್ದು, ಕಾಳು ಬಿಡಿಸುವ ಯಂತ್ರಕ್ಕೆ ಕಾಯುತ್ತಿದ್ದಾರೆ. ಆದರೆ, ಮಳೆಯಿಂದಾಗಿ ಯಂತ್ರಗಳು ಜಮೀನು ತಲುಪಲು ಆಗದೇ ತೆನೆ ಇಟ್ಟಲ್ಲೇ ಕೊಳೆಯಲಾರಂಭಿಸಿವೆ. ತೇವಾಂಶ ನಿವಾರಣೆಗೆ ಕೂಡಲೇ ಬಿಸಿಲಿನ ಅಗತ್ಯವಿದೆ. ಇಲ್ಲದಿದ್ದರೆ ಫಂಗಸ್‌ ಆವರಿಸಿ, ಕಾಳು ಕಪ್ಪಗಾಗುವ ಸಾಧ್ಯತೆ ದಟ್ಟವಾಗಿದೆ‌.

‘ಹೋದ ವರ್ಷ ಬರದಿಂದ ನಷ್ಟವಾಯ್ತು. ಮುಂಗಾರಿನಲ್ಲಿ ಉತ್ತಮ ಮಳೆ ಸುರಿದು ಆ ನೋವನ್ನು ನೀಗಿಸಿತ್ತು. ಹಿಂಗಾರು ಹಂಗಾಮಿನ ಆರಂಭಕ್ಕೇ ಮಳೆ ಬಿಟ್ಟುಬಿಡದೇ ಸುರಿಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರುವ ನಂಬಿಕೆ ಇಲ್ಲ’ ಎಂದು ಜಗಳೂರು ತಾಲ್ಲೂಕಿನ ರಸ್ತೆಮಾಚಿಕೆರೆ ಗ್ರಾಮದ ರೈತ ಸಣ್ಣವೀರಪ್ಪ ‘ಪ್ರಜಾವಾಣಿ’ ಎದುರು ಶುಕ್ರವಾರ ಅಳಲು ತೋಡಿಕೊಂಡರು.

‘ಸತತ 15 ದಿನಗಳಿಂದ ದಿನ ಬಿಟ್ಟು ದಿನ ಮಳೆ ಸುರಿಯುತ್ತಲೇ ಇದೆ. ಕಟಾವು ಹಂತ ತಲುಪಿರುವ ಮೆಕ್ಕೆಜೋಳದ ತೆನೆ ಗಿಡದಲ್ಲೇ ನೀರುಂಡು ಕಾಳು ಮೊಳಕೆ ಒಡೆಯುತ್ತಿದೆ. ಕಟಾವು ಮಾಡಿ ರಾಶಿ ಹಾಕಿರುವ ತೆನೆಯನ್ನು ಯಂತ್ರಕ್ಕೆ ಹಾಕಿಸಿ ಕಾಳು ಒಣಗಿಸಬೇಕಿದೆ. ಮಳೆ ಬಿಡುತ್ತಲೇ ಇಲ್ಲ. ಟೊಮೆಟೊ, ರಾಗಿ, ಈರುಳ್ಳಿ, ಬೀನ್ಸ್‌, ಮೆಣಸಿನಕಾಯಿ, ಬದನೆ ಬೆಳೆಗೂ ಇದೇ ಸ್ಥಿತಿ ಎದುರಾಗಿದೆ’ ಎಂದು ಬಿಳಿಚೋಡು ಗ್ರಾಮದ ರೈತರಾದ ಲಿಂಗೇಶ ಗೊರವರ, ಉಮೇಶ ಗೊರವರ, ಹನುಮಂತಪ್ಪ ಮಡಿವಾಳರ ಹಾಗೂ ಮಲ್ಲಿಕಾರ್ಜುನ ಕುಂಬಾರ ಹೇಳಿದರು.

‘ಹಿಂಗಾರು ಹಂಗಾಮಿನ ಬಿತ್ತನೆ ಮಾಡಬೇಕೆಂದರೂ ಮಳೆ ಅಡ್ಡಿಯಾಗಿದೆ. ಅಕ್ಟೋಬರ್ ಎರಡನೇ ವಾರದೊಳಗೆ ಕಡಲೆ, ಬಿಳಿ ಜೋಳ, ಬೇಸಿಗೆ ಅವಧಿಯ ಶೇಂಗಾ ಬಿತ್ತನೆ ಆಗಬೇಕಿತ್ತು. ಆದರೆ, ಮಳೆ ಬಿಡುವು ನೀಡದ್ದರಿಂದ ಭೂಮಿಯಲ್ಲಿನ ತೇವಾಂಶ ಹೆಚ್ಚುತ್ತಿದೆ. ಈಗ ಮಳೆ ನಿಂತು, ಬಿಸಿಲು ಬಿದ್ದರೂ ಬಿತ್ತನೆಗೆ ಭೂಮಿ ಅನುಕೂಲವಾಗಲು ಒಂದು ವಾರ ಬೇಕು. ತಡವಾಗಿ ಬಿತ್ತನೆ ಮಾಡಿದರೆ ಹಿಂಗಾರು ಫಸಲೂ ಕೈಗೆಟುಕುವ ನಂಬಿಕೆ ಇಲ್ಲ’ ಎಂದು ಮಾದನಹಳ್ಳಿ ಗ್ರಾಮದ ರೈತ ಹಾಲೇಶ್‌ ಸಮಸ್ಯೆಯನ್ನು ಬಿಚ್ಚಿಟ್ಟರು.

‘ಚಿತ್ರದುರ್ಗ ಜಿಲ್ಲೆಯಲ್ಲಿರುವ ಭರಮಸಾಗರದ ಕೆರೆತುಂಬಿ ಕೋಡಿ ಬಿದ್ದು, ಹರಿದು ಬರುತ್ತಿರುವ ನೀರು ಹಳ್ಳದ ಅಕ್ಕಪಕ್ಕದ ಜಮೀನಿಗೆ ನುಗ್ಗಿದೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಮಳೆ ನಿಂತರೂ ಈ ಹಳ್ಳದ ನೀರು ನಿಲ್ಲುವ ಲಕ್ಷಣಗಳಿಲ್ಲ. ಬರದಿಂದ ತೀವ್ರ ನೊಂದಿರುವ ನಮ್ಮ ಗಾಯದ ಮೇಲೆ ಬರೆ ಬಿದ್ದಿದೆ. ಸರ್ಕಾರ ಸೂಕ್ತ ರೀತಿಯ ಪರಿಹಾರ ನೀಡುವ ಮೂಲಕ ಕೈಹಿಡಿಯಬೇಕು‌’ ಎಂದು ರೈತ ಶಿವಣ್ಣ ತರಳಬಾಳು ಕೋರಿದರು.

ದಾವಣಗೆರೆ ಜಿಲ್ಲೆಯ ಬಿಳಿಚೋಡು ಬಳಿಯ ಮುಚ್ಚನೂರು ಗ್ರಾಮದ ಜಮೀನಿನಲ್ಲಿ ಕಟಾವಿಗೆ ಬಂದಿರುವ ಮೆಕ್ಕೆಜೋಳ ಮಳೆಯಿಂದಾಗಿ ಹಾಳಾಗುವ ಹಂತ ತಲು‍ಪಿದೆ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ಮೆಕ್ಕೆಜೋಳ ಕಟಾವಿಗೆ ಬಂದಿದ್ದು ನೀರು ನಿಂತಿದ್ದರಿಂದ ಗಿಡಗಳು ನೆಲಕ್ಕೆ ಉರುಳುತ್ತಿವೆ. ಮಳೆ ನಿಂತರೂ ಬೆಳೆ ಕೈಗೆಟುಕುವ ಲಕ್ಷಣಗಳಿಲ್ಲ
ಲಿಂಗೇಶ ಗೊರವರ, ರೈತ ಬಿಳಿಚೋಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.