ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಾಂತ 15 ದಿನಗಳಿಂದ ಚಳಿಗಾಲದ ಸೊಗಡಿನ ಅವರೆಕಾಯಿ ವ್ಯಾಪಾರ ಭರದಿಂದ ನಡೆಯುತ್ತಿದೆ. ಅದರಲ್ಲೂ ‘ಚಿಟ್’ ಅಥವಾ ‘ಮಣಿ’ ತಳಿಯ ಅವರೆಕಾಯಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.
ಚಳಿಗಾಲ ಪ್ರಾರಂಭವಾದರೆ ಸಾಕು ಅವರೆಕಾಯಿ ಸುಗ್ಗಿ ಪ್ರತಿ ವರ್ಷ ಆರಂಭವಾಗುತ್ತದೆ. ತಾಲ್ಲೂಕಿನಲ್ಲಿ ಈ ಬಾರಿ 100 ಹೆಕ್ಟೇರ್
ಪ್ರದೇಶದಲ್ಲಿ ಅವರಕಾಯಿ ಬೆಳೆದಿದ್ದು, ತಾಲ್ಲೂಕಿನಲ್ಲಿ ಬೆಳೆದ ಅವರೆ ಇಲ್ಲಿನ ಜನರ ಬೇಡಿಕೆಯನ್ನು ಪೂರೈಸಲು ಸಾಲದೇ ನೆರೆಯ ಚಿತ್ರದುರ್ಗ ಜಿಲ್ಲೆಯಿಂದಲೂ ವ್ಯಾಪಾರಿಗಳು ಖರೀದಿಸಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ.
ಸಾಂಬಾರು, ಉಪ್ಪಿಟ್ಟು, ಮಂಡಕ್ಕಿ, ಪಲ್ಯ, ಚಿತ್ರಾನ್ನ ಎಲ್ಲಾ ಅಡುಗೆಗೂ ಅವರಕಾಳು ಬಳಕೆಯಾಗುತ್ತಿದ್ದು, ಈ ಚಳಿಗಾಲದಲ್ಲಿ ಯಾರ ಮನೆಗೆ ಹೋದರೂ ಅವರೆಕಾಳಿನ ತಿಂಡಿ, ಭೋಜನ ಸಿದ್ಧವಾಗಿರುತ್ತದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಅವರೆಕಾಯಿಯನ್ನು ಉಪ್ಪು ಹಾಕಿ ನೀರಿನಲ್ಲಿ ಬೇಯಿಸಿಕೊಂಡು ಕಾಳನ್ನು ಸವಿಯುತ್ತಾರೆ. ತಾಲ್ಲೂಕಿನ ದೊಡ್ಡ ಗ್ರಾಮಗಳಾದ ನಲ್ಲೂರು, ಸಂತೇಬೆನ್ನೂರು, ತ್ಯಾವಣಿಗೆ, ತಾವರಕೆರೆ, ಪಾಂಡೋಮಟ್ಟಿ, ಹೊದಿಗೆರೆ, ದೇವರಹಳ್ಳಿ, ಹಿರೇಕೋಗಲೂರು, ಮಾವಿನಕಟ್ಟೆ ಮುಂತಾದ ಗ್ರಾಮಗಳಲ್ಲಿ ವ್ಯಾಪಾರಿಗಳು ಅವರೆಕಾಯಿಯನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಾರೆ.
‘ಚಿಟ್’ ತಳಿಯ ಅವರೆಕಾಯಿಗೆ ಹೆಚ್ಚಿನ ಬೇಡಿಕೆ ಇದ್ದು, ಇದರ ಜತೆಗೆ ಹೈಬ್ರಿಡ್ ಅವರೆಕಾಯಿ ಕೂಡಾ ಮಾರಾಟವಾಗುತ್ತಿದೆ. ಚಿಟ್ ಅವರೆಕಾಯಿ 1 ಕೆಜಿಗೆ ₹70 ರಿಂದ ₹80ಕ್ಕೆ ಮಾರಾಟ ಮಾಡುತ್ತಿದ್ದು, ಹೈಬ್ರಿಡ್ ಅವರೆಕಾಯಿ 1 ಕೆಜಿಗೆ ₹40ರಿಂದ ₹50ಕ್ಕೆ ಮಾರಾಟವಾಗುತ್ತಿದೆ. 1 ಕ್ವಿಂಟಲ್ ಅವರೆಕಾಯಿ ಒಂದೆರಡು ಗಂಟೆಗಳಲ್ಲಿ ಮಾರಾಟವಾಗುತ್ತದೆ. ಹಾಗಾಗಿ ಅವರೆಕಾಯಿಗೆ ತುಂಬಾ ಬೇಡಿಕೆ ಬಂದಿದೆ.
‘ತಾಲ್ಲೂಕಿನಲ್ಲಿ ಇನ್ನೂ ಅವರೆಕಾಯಿ ಅಗತ್ಯ ಪ್ರಮಾಣದಲ್ಲಿ ಫಸಲಿಗೆ ಬಂದಿಲ್ಲ ಎಂಬ ಕಾರಣದಿಂದ ಚಿತ್ರದುರ್ಗ ಹಾಗೂ ಸಿರಿಗೆರೆ ಭಾಗದ ಜಮೀನುಗಳಿಗೆ ನಾವೇ ಹೋಗಿ ಕ್ವಿಂಟಲ್‌ಗೆ ₹ 5,000ದಿಂದ ₹ 6,000ಕ್ಕೆ ಖರೀದಿಸಿಕೊಂಡು ಬರುತ್ತೇವೆ. ಸಾರಿಗೆ ವೆಚ್ಚ ಹಾಗೂ ನಮ್ಮ ಕೂಲಿಯನ್ನು ಸೇರಿಸಿ, ಅವರೆಕಾಯಿಯನ್ನು ಪ್ರತಿ ಕೆ.ಜಿ.ಗೆ ₹70ರಿಂದ ₹80ಕ್ಕೆ ಮಾರಾಟ ಮಾಡುತ್ತೇವೆ’. ಲಾಭವಾಗಲಿ, ನಷ್ಟವಾಗಲಿ ಬಹಳ ಹಿಂದಿನಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ ನಲ್ಲೂರು ಗ್ರಾಮದ ವ್ಯಾಪಾರಿ ಇಬ್ರಾಹಿಂ.
‘2 ಎಕರೆ ಜಮೀನಿನಲ್ಲಿ ಅವರೆಕಾಯಿ ಬಿತ್ತನೆ ಮಾಡಿದ್ದು, ಸಂಪೂರ್ಣವಾಗಿ ಫಸಲಿಗೆ ಬರಲು 15 ದಿನಗಳು ಬೇಕಾಗುತ್ತದೆ. ವ್ಯಾಪಾರಿಗಳು ನಮ್ಮ ಜಮೀನಿಗೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಕಮಿಷನ್, ಸಾಗಣೆ ವೆಚ್ಚ ಇಲ್ಲದೇ ಇರುವುದರಿಂದ ರೈತರಿಗೆ ಹೆಚ್ಚಿನ ಆದಾಯ ಲಭ್ಯವಾಗಲಿದೆ’ ಎಂದು ತಾಲ್ಲೂಕಿನ ಹಲಕನಾಳ್ ಗ್ರಾಮದ ರೈತ ಸಿದ್ದಪ್ಪ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.