ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸರ್ಕಾರಿ ಎಂಜಿನಿಯರಿಂಗ್ ಘಟಕ ಕಾಲೇಜುಗಳಲ್ಲಿ ಪೇಮೆಂಟ್ ಕೋಟಾ ವ್ಯವಸ್ಥೆ ಜಾರಿಗೊಳಿಸಿರುವುದನ್ನು ವಿರೋಧಿಸಿ ‘ಯುಬಿಡಿಟಿ ಕಾಲೇಜು ಉಳಿಸಿ ಹೋರಾಟ ಸಮಿತಿ’ ಬುಧವಾರ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಕೆಲವೆಡೆ ಅಂಗಡಿಗಳು ಬಾಗಿಲು ಮುಚ್ಚಿದ್ದು ಹೊರತುಪಡಿಸಿ ಜನಜೀವನ ಸಹಜವಾಗಿತ್ತು.
ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿರುವ ಇಲ್ಲಿನ ಯುಬಿಡಿಟಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶೇ 50ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾದಡಿ ಭರ್ತಿ ಮಾಡಿಕೊಳ್ಳಲು ಕೈಗೊಂಡಿರುವ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಹೋರಾಟ ಕೈಗೆತ್ತಿಕೊಂಡಿದೆ. ಚಳವಳಿಯನ್ನು ತೀವ್ರಗೊಳಿಸಲು ನಗರ ಬಂದ್‌ಗೆ ನೀಡಿದ್ದ ಕರೆಗೆ ಕನ್ನಡಪರ, ರೈತ, ಕಾರ್ಮಿಕ ಹಾಗೂ ದಲಿತ ಸಂಘಟನೆಗಳು ಬೆಂಬಲ ನೀಡಿದ್ದವು.
ಹೋರಾಟ ಸಮಿತಿಯ ಕಾರ್ಯಕರ್ತರು ಜಮಾಯಿಸಿದ್ದ ಪ್ರಮುಖ ರಸ್ತೆಯಲ್ಲಿದ್ದ ಅಂಗಡಿಗಳು ಬಂದ್ ಆಗಿದ್ದವು. ಅರ್ಧ ದಿನ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು. ನಗರ ಸಾರಿಗೆ ಬಸ್ ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಪದವಿ ಕಾಲೇಜು ವಿದ್ಯಾರ್ಥಿಗಳು ತರಗತಿಯಿಂದ ಹೊರಗುಳಿದು ಹೋರಾಟಕ್ಕೆ ಕೈಜೋಡಿಸಿದರು.
ಬಸ್ ಸಂಚಾರ ತಡೆಯಲು ಯತ್ನಿಸಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ಇದರಿಂದ ಆಕ್ರೋಶಕೊಂಡ ಹೋರಾಟ ಸಮಿತಿ ಸದಸ್ಯರು ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬಿಡುಗಡೆಗೆ ಪಟ್ಟುಹಿಡಿದರು. ಪ್ರತಿಭಟನೆಗೆ ಮಣಿದ ಪೊಲೀಸರು ಬಂಧಿತರನ್ನು ಬಿಡುಗಡೆಗೊಳಿಸಿದರು. ಅಶೋಕ ರಸ್ತೆ, ಪಿ.ಬಿ. ರಸ್ತೆಯಲ್ಲಿ ಮೆರವಣಿಗೆ ನಡೆಸಿ ಪೇಮೆಂಟ್ ಕೋಟಾ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.