ADVERTISEMENT

ದಾವಣಗೆರೆ | ಮೇವಿಲ್ಲದೇ ಸೊರಗುತ್ತಿರುವ ಕುರಿಗಳು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 7:49 IST
Last Updated 30 ಮಾರ್ಚ್ 2024, 7:49 IST
ಬಸವಾಪಟ್ಟಣದ ಬೀಳು ಬಿದ್ದಿರುವ ಹೊಲದಲ್ಲಿ ಮೇವು ಹುಡುಕುತ್ತಿರುವ ಕುರಿಗಳು
ಬಸವಾಪಟ್ಟಣದ ಬೀಳು ಬಿದ್ದಿರುವ ಹೊಲದಲ್ಲಿ ಮೇವು ಹುಡುಕುತ್ತಿರುವ ಕುರಿಗಳು   

ಬಸವಾಪಟ್ಟಣ: ಮಳೆ ಕೊರತೆಯ ಕಾರಣದಿಂದ ಆವರಿಸಿರೆಉವ ತೀವ್ರ ಬರಗಾಲದಲ್ಲಿ ಫೆಬ್ರುವರಿ ತಿಂಗಳಿನಿಂದಲೇ ರಣ ಬಿಸಿಲು ಆರಂಭವಾಗಿದ್ದು, ಪ್ರತಿದಿನ ಆಹಾರಕ್ಕಾಗಿ ಗುಡ್ಡ– ಬೆಟ್ಟ ಅಲೆಯುವ ಕುರಿಗಳಿಗೆ ಮೇವಿಲ್ಲದಂತಾಗಿದೆ. ಇದರಿಂದ ಕುರಿಗಾಹಿಗಳು ಚಿಂತೆಗೊಳಗಾಗಿದ್ದಾರೆ.

‘ದನ, ಕರುಗಳ ಪಾಲಕರು ರಾಸುಗಳ ಮೇವನ್ನು ಮುಂಚಿತವಾಗಿ ಸಂಗ್ರಹಿಸಿಕೊಂಡಿರುತ್ತಾರೆ. ಅಲ್ಲದೇ ಹೊಲ– ಗದ್ದೆಗಳ ಬದುಗಳಲ್ಲಿ ಬೆಳೆಯುವ ಹುಲ್ಲು, ಮೇವನ್ನು ಪ್ರತಿದಿನ ತಂದು ಅವುಗಳ ಹೊಟ್ಟೆ ತುಂಬಿಸುತ್ತಾರೆ. ಆದರೆ, ಕುರಿಗಳನ್ನು ಸಾಕಿರುವ ನಾವು ಬೇಸಿಗೆಯ ಬೇಗೆಯಲ್ಲಿ ಅವುಗಳನ್ನು ಹಸಿರು ಕಂಡ ಕಡೆಗೆ ಹೊಡೆದುಕೊಂಡು ಹೋಗಿ ಮೇಯಿಸಬೇಕಿದೆ. ಅಲ್ಲದೇ ಕೆರೆ– ಕಟ್ಟೆಗಳಲ್ಲಿ ನೀರು ಸಹ ಬತ್ತಿ ಹೋಗಿರುವುದರಿಂದ ಕುರಿಗಳಿಗೆ ಕುಡಿಯಲು ನೀರೂ ಇಲ್ಲದಂತಾಗಿದೆ’ ಎನ್ನುತ್ತಾರೆ ಇಲ್ಲಿನ ಕುರಿಗಾಹಿ ರಂಗಪ್ಪ.

‘ಈ ಭಾಗದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಇರುವುದರಿಂದ ಕುರಿಗಳಿಗೆ ಬೇಸಿಗೆಯಲ್ಲಿಯೂ ಅಲ್ಪಸ್ವಲ್ಪ ಮೇವು ದೊರೆಯುತ್ತಿತ್ತು. ಈ ಬಾರಿ ಜಲಾಶಯದಲ್ಲಿ ನೀರಿಲ್ಲದ್ದರಿಂದ ರೈತರು ಗದ್ದೆಗಳನ್ನು ಬೀಳುಬಿಟ್ಟಿದ್ದಾರೆ. ಮಳೆಗಾಲದ ಬೆಳೆಯ ಕೊಯಿಲಿನ ನಂತರ ಗದ್ದೆಗಳಲ್ಲಿ ಇರುತ್ತಿದ್ದ ಹಸಿರು ಸಹ ಒಣಗಿದೆ. ಅಲ್ಲದೇ ಕೆಲವು ಗ್ರಾಮಗಳಲ್ಲಿ ತಮ್ಮ ದನ–ಕರುಗಳಿಗೆ ಮೇವಿಲ್ಲದಂತಾಗುತ್ತದೆ ಎಂದು ಗುಡ್ಡ ಬೆಟ್ಟಗಳಲ್ಲಿ ನಮ್ಮಂತಹ ಅಲೆಮಾರಿ ಕುರಿಗಾಹಿಗಳಿಗೆ ಕುರಿಗಳನ್ನು ಮೇಯಿಸಲು ಬಿಡುತ್ತಿಲ್ಲ. ನೂರಾರು ಕುರಿಗಳನ್ನು ಉಳಿಸಿಕೊಳ್ಳಲು ದೂರದಿಂದ ಬಂದಿರುವ ನಮಗೆ ಕುರಿಗಳ ಮೇವಿನದೇ ಚಿಂತೆಯಾಗಿದೆ’ ಎನ್ನುತ್ತಾರೆ ಬಳ್ಳಾರಿ ಜಿಲ್ಲೆಯಿಂದ ಬಂದಿರುವ ಕುರಿಗಳ ಮಾಲೀಕ ನಾಗಪ್ಪ.

ADVERTISEMENT

‘ಕುರಿ ಮಾಂಸಕ್ಕೆ ವರ್ಷದ 12 ತಿಂಗಳೂ ಬೇಡಿಕೆ ಇರುತ್ತದೆ. ಕೆ.ಜಿ.ಗೆ ₹ 800ರವರೆಗೂ ದರವಿದೆ. ಆದರೆ ನಮ್ಮ ಕುರಿಗಳು ಮೇವಿನ ಅಭಾವದಿಂದಾಗಿ ದೈಹಿಕವಾಗಿ ಸೊರಗುತ್ತಿವೆ. ಸಂತಾನ ಅಭಿವೃದ್ಧಿ ಕುಂಠಿತವಾಗಿದೆ. ಸ್ಥಳೀಯ ಮಾಂಸದ ಅಂಗಡಿಗಳ ಮಾಲೀಕರಿಗೆ ಕುರಿಗಳನ್ನು ಮಾರಿ ಜೀವನ ನಡೆಸುತ್ತಿದ್ದೆವು. ಆದರೆ, ‘ನಿಮ್ಮ ಕುರಿಗಳು ದಷ್ಟಪುಷ್ಟವಾಗಿಲ್ಲ. ಇವುಗಳಿಂದ ನಮಗೆ ಸಾಕಷ್ಟು ಮಾಂಸ ದೊರೆಯುವುದಿಲ್ಲ’ ಎಂದು ಮಾಲೀಕರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರೈತರು ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಕುರಿಗಳ ಗೊಬ್ಬರಕ್ಕಾಗಿ ಕುರಿ ಹಿಂಡನ್ನು ಒಂದು ದಿನ ನಿಲ್ಲಿಸಿದರೆ ನಿಗದಿತ ಹಣವನ್ನು ನೀಡುತ್ತಿದ್ದರು. ಇದರಿಂದಲೂ ನಮಗೆ ಅನುಕೂಲವಿತ್ತು. ಆದರೆ, ಬರಗಾಲ ಬಂದು ರೈತರು ಕುರಿಗಳನ್ನು ನಿಲ್ಲಿಸುವುದನ್ನೇ ಕೈಬಿಟ್ಟಿದ್ದಾರೆ. ಬರದ ಛಾಯೆ ನಮಗೆ ದೊಡ್ಡ ಶಾಪವಾಗಿದೆ’ ಎನ್ನುತ್ತಾರೆ ಬೆಳಗಾವಿ ಜಿಲ್ಲೆಯ ಕುರಿ ಹಿಂಡಿನ ಮಾಲೀಕ ಪರಸಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.