‘ಅರೇ...ನೆಲ, ನೀರೆಲ್ಲಾ ಮಂಜುಗಡ್ಡೆಯಾಗುತ್ತಿದೆ. ಅಂದರೆ ಇನ್ನೇನು ಚಳಿಗಾಲ ಸಮೀಪಿಸುತ್ತಿದೆ ಎಂದರ್ಥ. ಎಲ್ಲರೂ ಸಿದ್ಧರಾಗಿ. ನಾವೀಗ ಇಲ್ಲಿಂದ ಹೊರಡಬೇಕು. ಮತ್ತೆ ನಾವಿಲ್ಲಿಗೆ ಹಿಂತಿರುಗಿ ಬರಲು ಆರು ತಿಂಗಳೇ ಆಗಬಹುದು..’ ಎಂಬ ಧಾಟಿಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿರುವ ಹಕ್ಕಿಗಳು.. ದೂರದೂರಿನ ಪಯಣಕ್ಕೆ ಅಣಿಯಾಗುವ ತವಕ.. ಯಾರ್ಯಾರು ಯಾವ ಗುಂಪಿನಲ್ಲಿ ಹಾರಬೇಕು ಎಂಬ ಗಹನ ಲೆಕ್ಕಾಚಾರ..
ಉತ್ತರ ಅಮೆರಿಕ, ಯುರೋಪ್ ಹಾಗೂ ರಷ್ಯಾ ಭಾಗದಲ್ಲಿ ಚಳಿಗಾಲ ಶುರುವಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಪಕ್ಷಿಗಳಲ್ಲಿ ಧಾವಂತ ಶುರುವಾಗುತ್ತದೆ. ಅವು ತಕ್ಷಣ ತಮ್ಮ ವಾಸಸ್ಥಾನ ಬದಲಿಸಲೇಬೇಕು. ಸರಿ, ಹೋಗುವುದಾದರೂ ಎಲ್ಲಿಗೆ? ಶೀತದಿಂದ ಪಾರಾಗಲು ದಕ್ಷಿಣ ಧ್ರುವದ ಕಡೆಗೆ ಅವು ರೆಕ್ಕೆ ಬೀಸುತ್ತವೆ. ಹಿಂಡು ಹಿಂಡಾಗಿ ಗುಳೆ ಹೊರಡುವ ಅವು, ಸಾವಿರಾರು ಕಿಲೋಮೀಟರ್ ದೂರಕ್ಕೆ ವಲಸೆ ಹೋಗುತ್ತವೆ. ಇಂತಹ ವಲಸಿಗ ಪಕ್ಷಿಗಳ ನೆಚ್ಚಿನ ತಾಣ ನಮ್ಮ ದಾವಣಗೆರೆ. ಜಿಲ್ಲೆಯನ್ನು ನಾಲ್ಕೈದು ತಿಂಗಳ ತಾತ್ಕಾಲಿಕ ವಾಸಕ್ಕೆ ಅವು ಆಯ್ಕೆ ಮಾಡಿಕೊಳ್ಳುತ್ತವೆ ಎಂಬುದೇ ಸೋಜಿಗ. ಹೀಗಾಗಿ ದಾವಣಗೆರೆಗೆ ‘ಮಧ್ಯ ಕರ್ನಾಟಕದ ಪಕ್ಷಿಕಾಶಿ’ ಎಂಬ ಖ್ಯಾತಿ ಅನಾಯಾಸವಾಗಿ ದಕ್ಕಿದೆ.
ನಿತ್ಯದ ಬದುಕಿನ ಗದ್ದಲದಲ್ಲಿ ಜಿಲ್ಲೆಯ ಜನರು ಮುಳುಗಿದ್ದಾಗಲೇ, ಇಲ್ಲಿಗೆ ಬಂದು ನಾಲ್ಕೈದು ತಿಂಗಳು ಇದ್ದು ಹೋಗುವ ಹಕ್ಕಿಗಳದ್ದು ಮಾತ್ರ ಸದ್ದಿಲ್ಲದ ಬದುಕು. ಅತ್ತ ಮಲೆನಾಡಿನ ಸೆರಗು, ಇತ್ತ ಬಳ್ಳಾರಿಯ ಬಿಸಿಲು–ಈ ಎರಡೂ ಪ್ರದೇಶಗಳ ಜಂಕ್ಷನ್ ಎನಿಸಿರುವ ದಾವಣಗೆರೆ ಜಿಲ್ಲೆಯು ಜೀವವೈವಿಧ್ಯದ ತಾಣವಾಗಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಇಂತಹದ್ದೊಂದು ಶ್ರೇಯ ತಂದಿತ್ತಿರುವುದು ಪಕ್ಷಿಗಳ ಲೋಕ.
ಕಣ್ಣು ಹಾಯಿಸಿದಷ್ಟು ದೂರಕ್ಕೆ ನಿಲುಕದಷ್ಟು ಜಲರಾಶಿಯನ್ನು ತುಂಬಿಕೊಂಡಿರುವ ನದಿ ಹಾಗೂ ನೂರಾರು ಕೆರೆಗಳು.. ಹಸಿರು ಮುಕ್ಕಳಿಸುವ ಗದ್ದೆ, ತೋಟ, ಹೊಲಗಳಲ್ಲಿ ಯಥೇಚ್ಛವಾಗಿ ಸಿಗುವ ಕಾಳು.. ಬೇಟೆಗೆ ಭರಪೂರ ಕೀಟಗಳು.. ಅತಿಯೆನಿಸದ ಉಷ್ಣ ಹವೆಯ ತಾಪಮಾನ– ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಗಳು ಹಬ್ಬ ಮಾಡಲು ಇನ್ನೇನು ಬೇಕು. ಅವುಗಳಿಗೆ ಸುಗ್ಗಿಯೋ ಸುಗ್ಗಿ.
ವಲಸಿಗ ಹಾಗೂ ಸ್ಥಳೀಯ ಹಕ್ಕಿಗಳು ಸೇರಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 272 ಪಕ್ಷಿಗಳನ್ನು ಸ್ಥಳೀಯ ಹವ್ಯಾಸಿ ಪಕ್ಷಿ ವೀಕ್ಷಕರು ಗುರುತಿಸಿದ್ದಾರೆ. ಈ ಪೈಕಿ ಸರಿಸುಮಾರು 70 ಪಕ್ಷಿಗಳು ವಲಸೆ ಹಕ್ಕಿಗಳು ಎಂಬುದು ವಿಶೇಷ. ಗಿಳಿ, ಪಾರಿವಾಳ, ಗೀಜಗ, ಕೊಕ್ಕರೆ, ಬೆಳ್ಳಕ್ಕಿ, ಗುಬ್ಬಿಗಳು ಮೊದಲಾದ ಸ್ಥಳೀಯ ಪ್ರಬೇಧದ 200ಕ್ಕೂ ಹೆಚ್ಚು ಹಕ್ಕಿಗಳ ಜತೆಜತೆಗೆ ವಿದೇಶಗಳಿಂದ ಬರುವ ಹಕ್ಕಿಗಳು ಜಿಲ್ಲೆಯ ವಿವಿಧ ಕೆರೆಗಳ ತಟಾಕಗಳಲ್ಲಿ ಸಹಜೀವನ ಸಾಗಿಸುತ್ತವೆ.
ಜಿಲ್ಲೆಯ ಪ್ರಮುಖ ಕೆರೆಗಳಾದ ಕೊಂಡಜ್ಜಿ ಕೆರೆ, ಕುಂದುವಾಡ ಕೆರೆ, ದೇವರ ಬೆಳಕೆರೆ, ಆವರಗೆರೆ, ನಾಗನೂರು ಕೆರೆ, ಸಿಂಗ್ರಿಹಳ್ಳಿ ಕೆರೆ, ನಾಲಾಪುರ ಕೆರೆ, ಹದಡಿ ಕೆರೆ, ಅಣಜಿ ಕೆರೆ ಮೊದಲಾದ ಜಲರಾಶಿಗಳು ಹಕ್ಕಿಗಳೂ ಸೇರಿದಂತೆ ತರಹೇವಾರಿ ಜೀವವೈವಿಧ್ಯವನ್ನು ಪೋಷಿಸುವ ಮಹತ್ವದ ಕೇಂದ್ರಗಳಾಗಿವೆ. ಈ ಕೆರೆಗಳ ಆಸುಪಾಸಿನಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆಯುವ ವಿವಿಧ ಧಾನ್ಯಗಳು, ಗದ್ದೆಯಲ್ಲಿ ಸಿಗುವ ಕೀಟಗಳು ಪಕ್ಷಿಗಳಿಗೆ ಸುಗ್ರಾಸ ಭೋಜನ ಉಣಬಡಿಸುತ್ತಿವೆ. ಹೀಗಾಗಿ ಹಕ್ಕಿಗಳ ಲೋಕವೇ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಈ ಕೌತುಕ ಬಹುತೇಕರ ಅರಿವಿಗೆ ಬಂದಿಲ್ಲ.
ಮಂಗೋಲಿಯಾದ ಪಟ್ಟೆ ಹೆಬ್ಬಾತು, ಯೂರೋಪಿನ ಉಲಿಯಕ್ಕಿಗಳು, ಕಂದು ಬಾತು, ಕಪ್ಪುಬಾಲದ ಗೊರವ, ರಷ್ಯಾದ ಉಲ್ಲಕ್ಕಿಗಳು, ಸೈಬೀರಿಯಾದ ಕಲ್ಲುಚಟಕ ಹಕ್ಕಿಗಳು ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಪ್ರತೀ ವರ್ಷಕ್ಕೊಮ್ಮೆ ಕಾಯಂ ಆಗಿ ಟೆಂಟ್ ಹಾಕುತ್ತವೆ. ಕಾಶ್ಮೀರವೂ ಸೇರಿದಂತೆ ಉತ್ತರ ಭಾರತದಿಂದ ಬರುವ ನವರಂಗ, ಹೆಜ್ಜಾರ್ಲೆಗಳಿಗೂ ದಾವಣಗೆರೆಯೇ ನೆಚ್ಚಿನ ತಾಣ. ಈ ಪೈಕಿ ಕೊಂಡಜ್ಜಿ ಕೆರೆಯನ್ನು ಪಕ್ಷಿಗಳ ‘ಹಾಟ್‌ಸ್ಪಾಟ್’ ಎಂದೇ ಗುರುತಿಸಲಾಗಿದೆ. ಈ ಜಲರಾಶಿಯ ತಟದಲ್ಲಿ ಪಟ್ಟೆತಲೆ ಹೆಬ್ಬಾತು, ನವರಂಗ ಸೇರಿದಂತೆ 72 ಪ್ರಬೇಧದ ಹಕ್ಕಿಗಳು ಕಾಣಸಿಗುತ್ತವೆ. ಐರೋಪ್ಯ ದೇಶಗಳು ಹಾಗೂ ಮಂಗೋಲಿಯಾದ ಪಕ್ಷಿಗಳು ಗೌಜು ಗದ್ದಲ ಮುಕ್ತ ವಾತಾವರಣದ ಕಾರಣಕ್ಕೆ ಕೊಂಡಜ್ಜಿ ಕೆರೆಯಲ್ಲಿ ಇಳಿದು ಸ್ವಚ್ಛಂದವಾಗಿ ವಿಹರಿಸುತ್ತವೆ. ಮಂಗೋಲಿಯಾ ಭಾಗದಿಂದ ಹಾರಿಬರುವ ಪಟ್ಟೆ ತಲೆಯ ಹೆಬ್ಬಾತುಗಳಂತೂ (Bar headed geese) ಕೊಂಡಜ್ಜಿ ಕೆರೆಯನ್ನೇ ಬಿಡಾರ ಮಾಡಿಕೊಳ್ಳುತ್ತವೆ. ದೂರದ ಮಂಗೋಲಿಯಾಕ್ಕೂ ಕೊಂಡಜ್ಜಿಗೂ ಬಾಂಧವ್ಯ ಬೆಸೆದಿವೆ.
ಈ ವಲಸೆ ಹಕ್ಕಿಗಳು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲೆಯತ್ತ ಹಾರಿಬರುತ್ತವೆ. ಮಾರ್ಚ್ ತಿಂಗಳವರೆಗೂ ಇಲ್ಲೇ ವಾಸಿಸಿ, ತಮ್ಮ ತವರಿಗೆ ವಾಪಸಾಗುತ್ತವೆ. ವಿಶೇಷ ಎಂದರೆ, ಯಾವ ವಲಸೆ ಹಕ್ಕಿಯೂ ಇಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗುವುದಿಲ್ಲ. ಅವು ಸಂತಾನೋತ್ಪತ್ತಿಗೆ ತಮ್ಮ ತವರಿಗೇ ವಾಪಸಾಗುತ್ತವೆ. ಚಳಿಯಿಂದ ತಪ್ಪಿಸಿಕೊಳ್ಳಲು ಸುಮಾರು 5,000 ಕಿಲೋಮೀಟರ್ ದೂರದ ಗಮ್ಯಸ್ಥಾನವನ್ನು ಎಂಟ್ಹತ್ತು ದಿನಗಳಲ್ಲಿ ತಲುಪುವಲ್ಲಿ ಅವು ನಿಷ್ಣಾತವಾಗಿವೆ. ಸಾವಿರಾರು ಕಿಲೋಮೀಟರ್ ದೂರದ ಪಯಣದ ಆಯಾಸವನ್ನು ಕಳೆದು, ಭರ್ಜರಿಯಾಗಿ ತಿಂದುಂಡು ಹಾಗೆಯೇ ಮಧುಚಂದ್ರ ಮುಗಿಸಿ ಇಲ್ಲಿಂದ ಹೊರಡುತ್ತವೆ. ಹೆರಿಗೆ, ಬಾಣಂತನಕ್ಕೆ ತಮ್ಮೂರನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಆದರೆ ಪಟ್ಟೆ ತಲೆಯ ಹೆಬ್ಬಾತುಗಳು ಮಂಗೋಲಿಯಾಕ್ಕೆ ಹಾರುವ ಮಾರ್ಗಮಧ್ಯೆ ಸಿಗುವ ಟಿಬೆಟ್‌ನಲ್ಲಿ ಕೆಲ ಸಮಯ ಇಳಿದು, ಅಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಎಳೆಯ ಮರಿಹಕ್ಕಿಯ ರೆಕ್ಕೆ ಒಂದಿಷ್ಟು ಬಲಿಯುತ್ತಿದ್ದಂತೆಯೇ ಅದರ ಜೊತೆ ಗಗನಕ್ಕೆ ಹಾರುತ್ತವೆ. ತವರು ತಲುಪುವುದರೊಂದಿಗೆ ವಲಸೆ ಪ್ರಕ್ರಿಯೆಯ ಒಂದು ಚಕ್ರ ಪೂರ್ಣಗೊಳ್ಳುತ್ತದೆ.
ಬಾತುಕೋಳಿ ಪ್ರಬೇಧದ ಪೈಕಿ ವರಟೆ, ಜಿಲ್ಲೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿವೆ. ಬೆಂಗಾಲ್ ವೀವರ್, (ಗೀಜಗ) ಕಿಂಗ್‌ಫಿಷರ್‌ನಂತಹ ನೂರಾರು ಸ್ಥಳೀಯ ಹಕ್ಕಿಗಳು ಇಲ್ಲಿ ಮರಿಮಾಡುತ್ತವೆ. ದೇಶದಲ್ಲಿ ಮಂಗಟ್ಟೆಯ ನಾಲ್ಕು ಪ್ರಬೇಧಗಳಿದ್ದು, ಈ ಪೈಕಿ ಎರಡು ಪ್ರಬೇಧಗಳು ಜಿಲ್ಲೆಯಲ್ಲಿರುವುದು ಹೆಮ್ಮೆ. ಉಣ್ಣೆದ ಕತ್ತಿನ ಕೊಕ್ಕರೆ (ದೇವನಹಕ್ಕಿ) ಸಂತತಿ ಕಡಿಮೆಯಾಗುತ್ತಿದ್ದು, ಅದು ಅಳಿವಿನಂಚಿನಲ್ಲಿದೆ.
ಗದ್ದಲದ ನಡುವೆ ‘ಗಿಳಿವಿಂಡು’
‘ಅರ್ಬನ್ ವೈಲ್ಡ್ ಲೈಫ್’ ಎಂಬ ಪರಿಕಲ್ಪನೆಗೆ ಪೂರಕವಾಗಿ ದಾವಣಗೆರೆ ನಗರದಲ್ಲೂ ಒಂದು ಪಕ್ಷಿಲೋಕ ಸೃಷ್ಟಿಯಾಗಿದೆ. ನಗರದ ರೈಲು ನಿಲ್ದಾಣದ ಸುತ್ತಮುತ್ತ ಇರುವ ನೂರಾರು ಮರಗಳಲ್ಲಿ ಗಿಳಿಗಳ ಕಲರವ ಕಾಣಬಹುದು. ಗುಲಾಬಿ ಕೊರಳಿನ ಗಿಳಿಗಳ ಸಂಖ್ಯೆ 30 ಸಾವಿರದ ಆಸುಪಾಸಿನಲ್ಲಿದೆ. ರಾಣೆಬೆನ್ನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಹೇರಳವಾಗಿ ಸಿಗುವ ಮೆಕ್ಕೆಜೋಳ, ಜೋಳ, ಹಣ್ಣುಗಳನ್ನು ಅರಸಿಕೊಂಡು ಬೆಳ್ಳಂಬೆಳಗ್ಗೆಯೇ ಹೊರಟು, 150 ಕಿಲೋಮೀಟರ್ ದೂರದವರೆಗೂ ಹಾರುತ್ತವೆ. ಸಂಜೆಯಾಗುತ್ತಲೇ ನಗರಕ್ಕೆ ವಾಪಸಾಗಿ, ಇಲ್ಲಿನ ಆಲದ ಮರಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಸ್ವಯಂಸೇವಾ ಸಂಸ್ಥೆಗಳು ಹಾಗೂ ಹವ್ಯಾಸಿ ಪಕ್ಷಿ ವೀಕ್ಷಕರು ರಚಿಸಿಕೊಂಡಿರುವ ‘ಗಿಳಿವಿಂಡು’ ತಂಡಗಳು ಗಿಳಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿವೆ.
–––––
ಮಧ್ಯ ಕರ್ನಾಟಕದ ಸಮೃದ್ಧಿಗೆ ಸಾಕ್ಷಿ ಈ ಪಕ್ಷಿಕಾಶಿ
ಪಕ್ಷಿಗಳು ಸೂಕ್ಷ್ಮಗ್ರಾಹಿಗಳು. ಗದ್ದಲದ ಜಾಗದಲ್ಲಿ ಅವು ಎಂದೂ ಜೀವಿಸುವುದಿಲ್ಲ. ಆದರೆ ಜಿಲ್ಲೆಯ ಕೆರೆಗಳು, ಕೃಷಿ ಭೂಮಿ, ಸಮೋಷ್ಣ ವಾತಾವರಣವನ್ನು ಅರಸಿ ಬರುತ್ತಿವೆ ಎಂದರೆ, ಈ ಇಡೀ ಪ್ರದೇಶ ವಾಸಯೋಗ್ಯ ಎಂಬುದರ ಸೂಚಕ. ಪಕ್ಷಿಗಳಿಗೆ ಇಂತಹ ಸಮೃದ್ಧ ನೆಲೆ ಕಲ್ಪಿಸಿರುವ ಜಿಲ್ಲೆಯ ನೀರು, ಭೂಮಿ, ವಾತಾವರಣವನ್ನು ಹಾಳುಗೆಡವದೆ ಜತನ ಮಾಡಬೇಕಿರುವುದು ಜಿಲ್ಲೆಯ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಹೇಳುತ್ತಾರೆ ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಹವ್ಯಾಸಿ ಪಕ್ಷಿವೀಕ್ಷಕ ಪ್ರೊ.ಎಸ್.ಶಿಶುಪಾಲ.
ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಜೀವವೈವಿಧ್ಯಕ್ಕೆ ಕುತ್ತು ತರುವ ಯತ್ನಗಳನ್ನು ನಿಲ್ಲಿಸಬೇಕು, ಕೆರೆಗಳಲ್ಲಿ ಮೀನುಗಾರಿಕೆ ನಿಷೇಧಿಸಬೇಕು, ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಡೆಯಬೇಕು ಎಂಬ ಸಲಹೆಗಳನ್ನು ಅವರು ನೀಡುತ್ತಾರೆ. ಕೆರೆಗೆ ತ್ಯಾಜ್ಯ ಹರಿಸಿದ ಪರಿಣಾಮ, ನಗರದ ಹದಡಿ ಕೆರೆಯಲ್ಲಿ ವಿಪರೀತ ಕಳೆ ಬೆಳೆದಿದ್ದು, ಪ್ರತೀ ವರ್ಷ ಅಲ್ಲಿ ತಂಗುತ್ತಿದ್ದ ಪಕ್ಷಿಗಳು ಮತ್ತೊಂದು ಜಾಗಕ್ಕೆ ವಲಸೆ ಹೋಗಿರುವುದು, ಎಚ್ಚರಿಕೆಯ ಸಂದೇಶ. ಕೋಳಿ ತ್ಯಾಜ್ಯ ಹಾಗೂ ಕಟ್ಟಡದ ತ್ಯಾಜ್ಯವನ್ನು ಕೆರೆಗಳಿಗೆ ಸುರಿಯುವ ಅತಿರೇಕಗಳು ನಿಲ್ಲದಿದ್ದಲ್ಲಿ ದಾವಣಗೆರೆಗೆ ಅನಾಯಾಸವಾಗಿ ದಕ್ಕಿರುವ ಮಧ್ಯಕರ್ನಾಟಕದ ಪಕ್ಷಿಕಾಶಿ ಎಂಬ ಖ್ಯಾತಿ ಅಳಿಸಿಹೋಗಲಿದೆ ಎನ್ನುತ್ತಾರೆ ಹವ್ಯಾಸಿ ಪಕ್ಷಿ ವೀಕ್ಷಕರು.
ದಾವಣಗೆರೆ ಜಿಲ್ಲೆ ಸಮೃದ್ಧಿಯಾಗಿ ಇರುವ ಕಾರಣಕ್ಕೇ ಪಕ್ಷಿಗಳು ತಮ್ಮ ಆವಾಸಸ್ಥಾನ ಮಾಡಿಕೊಂಡಿವೆ. ಪಕ್ಷಿಗಳ ಅಧ್ಯಯನಕ್ಕೆ ಪೂರಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬೇಕಿದೆ. ದಾವಣಗೆರೆ ಎಂದರೆ ಕೇವಲ ಉದ್ಯಮ, ಆಸ್ಪತ್ರೆ, ಶಿಕ್ಷಣಕ್ಕಷ್ಟೇ ಸೀಮಿತವಲ್ಲ. ಬದಲಾಗಿ ಇಲ್ಲೊಂದು ಪಕ್ಷಿಕಾಶಿಯೇ ಮೈದಳೆದಿದೆ ಎಂಬ ಅರಿವನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಯಲ್ಲಿ ತುಂಬಬೇಕಿದೆ ಎಂಬುದು ಪಕ್ಷಿ ತಜ್ಞರ ಕಳಕಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.