ADVERTISEMENT

ಚನ್ನಗಿರಿ: ಗ್ರಾಹಕರಿಂದ ದೂರ ಈ ‘ದೂರವಾಣಿ’ ಕೇಂದ್ರ

ಎಚ್.ವಿ. ನಟರಾಜ್‌
Published 9 ಜೂನ್ 2023, 5:10 IST
Last Updated 9 ಜೂನ್ 2023, 5:10 IST
ಚನ್ನಗಿರಿ ಜೀವ ವಿಮಾ ಕಚೇರಿ ರಸ್ತೆಯಲ್ಲಿರುವ ದೂರವಾಣಿ ವಿನಿಮಯ ಕೇಂದ್ರ ಬಾಗಿಲು ಹಾಕಿರುವುದು
ಚನ್ನಗಿರಿ ಜೀವ ವಿಮಾ ಕಚೇರಿ ರಸ್ತೆಯಲ್ಲಿರುವ ದೂರವಾಣಿ ವಿನಿಮಯ ಕೇಂದ್ರ ಬಾಗಿಲು ಹಾಕಿರುವುದು   

ಚನ್ನಗಿರಿ: ಪಟ್ಟಣದಲ್ಲಿರುವ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ದೂರವಾಣಿ ವಿನಿಮಯ ಕೇಂದ್ರ ಸದಾ ಬಾಗಿಲು ಮುಚ್ಚಿದ್ದು, ಗ್ರಾಹಕರಿಂದ ದೂರವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹತ್ತು ವರ್ಷಗಳ ಹಿಂದೆ ದೂರವಾಣಿ ವಿನಿಮಯ ಕೇಂದ್ರವೆಂದರೆ ಸದಾ ಗ್ರಾಹಕರಿಂದ ಗಿಜಿಗುಡುತ್ತಿತ್ತು. ಆದರೆ, ಈಗ ದೂರವಾಣಿ ವಿನಿಮಯ ಕೇಂದ್ರ ಸದಾ ಬಾಗಿಲು ಹಾಕಿರುತ್ತದೆ. ತಾಲ್ಲೂಕಿನ ಜನರು ದೂರವಾಣಿ ವಿನಿಮಯ ಕೇಂದ್ರಕ್ಕೆ ಬಂದು ಬಾಗಿಲು ಹಾಕಿರುವುದನ್ನು ಕಂಡು ಗೊಣಗುತ್ತ ಹೋಗುವಂತಾಗಿದೆ.

‘ಸದ್ಯ ಈ ವಿನಿಮಯ ಕೇಂದ್ರದಲ್ಲಿ ಜೆಟಿಒ (ಕಿರಿಯ ತಾಂತ್ರಿಕ ಅಧಿಕಾರಿ) ಸೇರಿ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಇಬ್ಬರೂ ಕಚೇರಿಯಲ್ಲಿ ಇರುವುದಕ್ಕಿಂತ ಹೊರಗಡೆ ಇರುವುದೇ ಹೆಚ್ಚಾಗಿದೆ. ತಾಂತ್ರಿಕ ಅಧಿಕಾರಿ ದುರಸ್ತಿ ಕಾರ್ಯಗಳಿಗೆ ತೆರಳುವುದರಿಂದ ಕಚೇರಿ ಸದಾ ಬಾಗಿಲು ಹಾಕಿರುತ್ತದೆ. ಹಿಂದೆ ಈ ಕೇಂದ್ರದಲ್ಲಿ 10ಕ್ಕಿಂತ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದರು. ಖಾಲಿ ಇರುವ ಹುದ್ದೆಗಳನ್ನು ತುಂಬಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ’ ಎಂದು ಗ್ರಾಹಕರೊಬ್ಬರು ದೂರಿದರು.

ADVERTISEMENT

‘ಇಲ್ಲಿ ದೂರವಾಣಿ ವಿನಿಮಯ ಕೇಂದ್ರ ಸ್ಥಾಪನೆಯಾಗಿ 4 ದಶಕಗಳು ಕಳೆದಿವೆ. ಕಟ್ಟಡ ಸ್ವಂತದ್ದೇ ಆಗಿದ್ದರೂ ಒಮ್ಮೆಯೂ ಸುಣ್ಣ–ಬಣ್ಣದ ಭಾಗ್ಯ ಕಂಡಿಲ್ಲ. ಇನ್ನು ಕೇಂದ್ರದೊಳಗೆ ಸ್ವಚ್ಛತೆ ಮಾಡುವವರು ಇಲ್ಲದೇ ಕಸ ಅಲ್ಲಲ್ಲಿ ಬಿದ್ದಿರುತ್ತದೆ’ ಎಂದು ದೂರುತ್ತಾರೆ ಕಾಂಗ್ರೆಸ್ ಯುವ ಮುಖಂಡ ಆರ್. ಪುನೀತ್ ಕುಮಾರ್.

‘ಇತ್ತೀಚಿನ ದಿನಗಳಲ್ಲಿ ನೆಟ್‌ವರ್ಕ್ ಸೇವೆಯನ್ನು ಮಾತ್ರ ಒದಗಿಸುತ್ತಿದೆ. ಖಾಸಗಿ ಮೊಬೈಲ್ ಕಂಪನಿಗಳ ಅಬ್ಬರಕ್ಕೆ ಬಿಎಸ್‌ಎನ್ಎಲ್ ಮುಚ್ಚುವ ಸ್ಥಿತಿ ಬಂದೊದಗಿದೆ. ಯಾವಾಗ ಬಂದರೂ ಬಾಗಿಲು ಹಾಕಿರುತ್ತದೆ. ವಿನಿಮಯ ಕೇಂದ್ರದಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಪ್ಪು ಒಪ್ಪುಗಳನ್ನು ಸರಿಪಡಿಸುವ ಕಾರ್ಯ ಮಾಡಬೇಕು. ಆದರೆ, ಇಲ್ಲಿ ಇಂತಹ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರಲ್ಲಿ ಬಹುತೇಕ ನೌಕರರು ಕಡ್ಡಾಯ ನಿವೃತ್ತಿಯನ್ನು ತೆಗೆದುಕೊಂಡಿದ್ದಾರೆ. ನಾನು ತಾಂತ್ರಿಕ ಅಧಿಕಾರಿ ಆಗಿರುವುದರಿಂದ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ಹೊಣೆಗಾರಿಕೆ ಇದೆ. ಪ್ರತಿ ದಿನ ತಾಲ್ಲೂಕಿನ ವಿವಿಧ ದೂರವಾಣಿ ವಿನಿಮಯ ಕೇಂದ್ರಗಳಿಗೆ ಹೋಗಬೇಕಿರುತ್ತದೆ. ಈ ಕಾರಣದಿಂದ ಕಚೇರಿ ಸದಾ ಬಾಗಿಲು ಹಾಕುವಂತಾಗಿದೆ. ಸುಣ್ಣ ಬಣ್ಣ ಮಾಡಿಸಲು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ನೌಕರರ ಕೊರತೆಯಿಂದ ಸಮಸ್ಯೆಯಾಗಿದೆ’ ಎನ್ನುತ್ತಾರೆ ಕಿರಿಯ ತಾಂತ್ರಿಕ ಅಧಿಕಾರಿ ನಿತ್ಯಾನಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.