ADVERTISEMENT

ದಾವಣಗೆರೆ: 17 ಮತಗಟ್ಟೆಗಳಲ್ಲಿ ಇಂದು ಮತದಾನ

ಮಹಾನಗರ ಪಾಲಿಕೆಯ ವಾರ್ಡ್‌ 28, 37ಕ್ಕೆ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:23 IST
Last Updated 20 ಮೇ 2022, 4:23 IST
ದಾವಣಗೆರೆಯ ಡಯಟ್‌ ಆವರಣದಲ್ಲಿನ ಮಸ್ಟರಿಂಗ್‌ ಕೇಂದ್ರದಿಂದ ಚುನಾಚಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳುತ್ತಿರುವುದು.
ದಾವಣಗೆರೆಯ ಡಯಟ್‌ ಆವರಣದಲ್ಲಿನ ಮಸ್ಟರಿಂಗ್‌ ಕೇಂದ್ರದಿಂದ ಚುನಾಚಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳುತ್ತಿರುವುದು.   

ದಾವಣಗೆರೆ: ಮಹಾನಗರ ಪಾಲಿಕೆಯ 28ನೇ ವಾರ್ಡ್‌ (ಭಗತ್‌ಸಿಂಗ್‌ ನಗರ) ಹಾಗೂ 37ನೇ ವಾರ್ಡ್‌ (ಕೆ.ಇ.ಬಿ. ಕಾಲೊನಿ)ಗಳಿಗೆ ಉಪ ಚುನಾವಣೆ ನಡೆಸಲು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಶುಕ್ರವಾರ (ಮೇ 20) ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ನಗರದ ಹೈಸ್ಕೂಲ್‌ ಮೈದಾನದಲ್ಲಿರುವ ಡಯಟ್‌ ಕಾಲೇಜಿನಲ್ಲಿ ಸ್ಥಾಪಿಸಿರುವ ಮಸ್ಟರಿಂಗ್‌ ಕೇಂದ್ರದಿಂದ ಚುನಾವಣಾ ಸಿಬ್ಬಂದಿ ಗುರುವಾರ ಮಧ್ಯಾಹ್ನ ಇವಿಎಂ ಹಾಗೂ ವಿವಿ ಪ್ಯಾಟ್‌ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು. ಬಳಿಕ ಮತಗಟ್ಟೆಯಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡರು.

ಎರಡೂ ವಾರ್ಡ್‌ಗಳಲ್ಲಿ ಒಟ್ಟು 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 28ನೇ ವಾರ್ಡ್‌ನಲ್ಲಿ ಒಟ್ಟು 8,946 ಮತದಾರರಿದ್ದು, 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 37ನೇ ವಾರ್ಡ್‌ನಲ್ಲಿ 6,630 ಮತದಾರರಿದ್ದು, 7 ಮತಗಟ್ಟೆಗಳಿವೆ. ಎರಡೂ ವಾರ್ಡ್‌ಗಳಲ್ಲಿ ಚುನಾವಣೆಯನ್ನು ಸುಗಮವಾಗಿ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ADVERTISEMENT

‘ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೊ ಚಿತ್ರೀಕರಣವನ್ನೂ ಮಾಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾಹಿತಿ ನೀಡಿದರು.

ಡಯಟ್‌ನಲ್ಲಿ ಮತೆಣಿಕೆ: ಶುಕ್ರವಾರ ಸಂಜೆ ಮತದಾನ ಪೂರ್ಣಗೊಂಡ ಬಳಿಕ ಇವಿಎಂಗಳನ್ನು ತಂದು ಡಿಮಸ್ಟರಿಂಗ್‌ ಕೇಂದ್ರವಾದ ಡಯಟ್‌ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿ ಇಡಲಾಗುತ್ತದೆ.

‘ಮೇ 22ರಂದು ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಒಂದು ಮತ ಎಣಿಕೆ ಕೊಠಡಿಯಲ್ಲಿ ಎರಡು ಟೇಬಲ್‌ಗಳನ್ನು ಹಾಕಲಾಗಿದೆ. ಮೊದಲು ವಾರ್ಡ್‌ 28ರ ಮತ ಎಣಿಕೆ ಮಾಡಲಾಗುವುದು. ಎಣಿಕೆ ಕಾರ್ಯ ಐದು ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ವಾರ್ಡ್‌ 37ರ ಮತ ಎಣಿಕೆ ನಡೆಸಲಾಗುವುದು. ನಾಲ್ಕು ಸುತ್ತುಗಳಲ್ಲಿ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ವಿಶ್ವನಾಥ ಮುದಜ್ಜಿ ಮಾಹಿತಿ ನೀಡಿದರು.

ಅದೃಷ್ಟ ಪರೀಕ್ಷೆಗಿಳಿದ 8 ಅಭ್ಯರ್ಥಿಗಳು
ಪಾಲಿಕೆಯ ಎರಡು ವಾರ್ಡ್‌ಗಳಿಗೆ ಶುಕ್ರವಾರ ನಡೆಯಲಿರುವ ಉಪ ಚುನಾವಣೆಯಲ್ಲಿ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, ಯಾರಿಗೆ ವಿಜಲಕ್ಷ್ಮಿ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

ಮತದಾನಕ್ಕೆ ಮುನ್ನಾ ದಿನವಾದ ಗುರುವಾರ ದಿನವಿಡೀ ಮಳೆ ಸುರಿದಿದ್ದರಿಂದ ಅಭ್ಯರ್ಥಿಗಳಿಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ತೊಂದರೆಯಾಯಿತು. ಮಳೆಯ ನಡುವೆಯೂ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮತ ಗಳಿಕೆಗಾಗಿ ಕೊನೆ ಕ್ಷಣದ ಕಸರತ್ತು ನಡೆಸಿದರು.

ವಾರ್ಡ್‌ 28ರಲ್ಲಿ ಕಾಂಗ್ರೆಸ್‌ನಿಂದ ಗಣೇಶ ಹುಲ್ಲುಮನೆ, ಜೆಡಿಎಸ್‌ನಿಂದ ಮೊಹಮ್ಮದ್‌ ಸಮಿವುಲ್ಲಾ, ಬಿಜೆಪಿಯಿಂದ ಜೆ.ಎನ್‌. ಶ್ರೀನಿವಾಸ್‌, ಕೆ.ಆರ್‌.ಎಸ್‌. ಪಕ್ಷದಿಂದ ಅಭಿಷೇಕ್‌ ಎನ್‌.ಎಸ್‌., ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ್‌ ಬಿ., ಸೈಯದ್‌ ಮನ್ಸೂರ್‌ ಅವರು ಕಣದಲ್ಲಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಮೊಹಮ್ಮದ್‌ ಸಮಿವುಲ್ಲಾ ಅವರು ಕೊನೆ ಕ್ಷಣದಲ್ಲಿ ಚುನಾವಣೆಯಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.

ವಾರ್ಡ್‌ 37ರಲ್ಲಿ ಕಾಂಗ್ರೆಸ್‌ನಿಂದ ರೇಖಾರಾಣಿ ಸಿದ್ಧಗಂಗಾ ಶಿವಣ್ಣ ಹಾಗೂ ಬಿಜೆಪಿಯಿಂದ ಶ್ವೇತಾ ಎಸ್‌. ಕಣದಲ್ಲಿದ್ದು, ನೇರ ಸ್ಪರ್ಧೆ ಏರ್ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.