ದಾವಣಗೆರೆ: ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‌ಗಳಿಗೆ ಶುಕ್ರವಾರ ನಡೆದ ಉಪ ಚುನಾವಣೆಗೆ ಮಳೆಯ ಕಾರಣ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
28ನೇ ವಾರ್ಡ್‌ನಲ್ಲಿ ಶೇ 51.93ರಷ್ಟು ಹಾಗೂ 37ನೇ ವಾರ್ಡ್‌ನಲ್ಲಿ ಶೇ 51.63ರಷ್ಟು ಸೇರಿ ಎರಡೂ ವಾರ್ಡ್‌ಗಳಲ್ಲಿ ಒಟ್ಟು ಶೇ 51.80ರಷ್ಟು ಮತ ಚಲಾವಣೆಯಾಗಿದೆ.
ಗುರುವಾರ ರಾತ್ರಿಯ ವೇಳೆಯೂ ಮಳೆ ಸುರಿದಿದ್ದು, ಶುಕ್ರವಾರ ಮುಂಜಾನೆಯೂ ಮಳೆಯ ಸಿಂಚನವಾಗಿದ್ದರಿಂದ ಹೆಚ್ಚಿನ ಜನರು ಮತ ಕೇಂದ್ರಗಳತ್ತ ಸುಳಿಯಲಿಲ್ಲ. ಬೆಳಿಗ್ಗೆ 9ರ ವೇಳೆಗೆ ಮಂದಗತಿಯಲ್ಲಿ ಸಾಗಿದ್ದು, ಶೇ 14ರಷ್ಟು ಮತದಾನವಾಯಿತು. ಬೆ 11ರ ನಂತರ ಸ್ವಲ್ಪ ವೇಗ ಪಡೆದು ಶೇ 28ರಷ್ಟು ಮತದಾನವಾಯಿತು. ಮಧ್ಯಾಹ್ನ 3ರ ವೇಳೆಗೆ ಶೇ 38ರಷ್ಟು ಮತದಾನವಾಯಿತು. ಸಂಜೆ 4ರ ವೇಳೆಗೆ ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ಸ್ವಲ್ಪ ವೇಗ ಪಡೆಯಿತು.
37ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ, ಅವರ ಪತಿ ಡಿ.ಎಸ್. ಹೇಮಂತ್ ಶಿವಣ್ಣ, ಸಿದ್ಧಗಂಗಾ ಶಾಲೆಯ ಅಧ್ಯಕ್ಷರಾದ ಜಸ್ಟಿನ್ ಡಿಸೋಜ ಹಾಗೂ ನಿರ್ದೇಶಕ ಡಿ.ಎಸ್. ಜಯಂತ್ ಅವರು ಡಾಂಗೆ ಪಾರ್ಕ್ ಬಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಮತದಾನ ಮಾಡಿದರು.
ಮತಗಟ್ಟೆ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರು ಮಳೆ ನಡುವೆಯೂ ಕೊಡೆ ಹಿಡಿದುಕೊಂಡೇ ಮತದಾರಲ್ಲಿ ಮತ ಯಾಚಿಸಿದರು. ಮತದಾರರು ಮಳೆ ಇದ್ದರೂ ಕೊಡೆಯ ಆಶ್ರಯದಲ್ಲಿ ಮತದಾನ ಮಾಡಿದರು.
‘22ರಂದು ಹೈಸ್ಕೂಲ್ ಮೈದಾನದ ಡಯಟ್ ಕಾಲೇಜಿನಲ್ಲಿ ಮತಗಳ ಎಣಿಕೆ ನಡೆಯಲಿದ್ದು, ಅಂದು ಬೆಳಿಗ್ಗೆ 11ಕ್ಕೆ ಫಲಿತಾಂಶ ಹೊರಬೀಳಲಿದೆ’ ಎಂದು ಚುನಾವಣಾಧಿಕಾರಿ ಭಾವನಾ ಬಸವರಾಜ್ ತಿಳಿಸಿದರು.
ಕಾಡಜ್ಜಿ, ಕುಕ್ಕವಾಡಗಳಲ್ಲಿ ಶೇ 69ರಷ್ಟು ಮತದಾನ: ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಹಾಗೂ ಕುಕ್ಕವಾಡ ಗ್ರಾಮ ಪಂಚಾಯಿತಿಗಳ ಎರಡು ವಾರ್ಡ್ ನಡೆದ ಉಪಚುನಾವಣೆಗೆ ಸೂಕ್ತ ಸ್ಪಂದನೆ ದೊರಕಿದ್ದು, ಶೇ 69.92ರಷ್ಟು ಮತದಾನವಾಗಿದೆ.
ಈ ಎರಡು ವಾರ್ಡ್‌ಗಳಲ್ಲಿ ಒಟ್ಟು 1,269 ಮಂದಿ ಮತ ಚಲಾಯಿಸಿದ್ದು, ಅವರಲ್ಲಿ 637 ಮಂದಿ ಪುರುಷರು ಮತ ಚಲಾಯಿಸಿದ್ದರೆ, 632 ಮಂದಿ ಮಹಿಳೆಯರು ಮತದಾನ ಮಾಡಿದರು.
ಕಾಡಜ್ಜಿಯ ವಾರ್ಡ್ ಸಂಖ್ಯೆ ಎರಡರಲ್ಲಿ 905 ಮಂದಿ ಮತ ಚಲಾಯಿಸಿದ್ದು, ಶೇ 68.66ರಷ್ಟು ಮತದಾನವಾದರೆ ಕುಕ್ಕವಾಡದಲ್ಲಿ 364 ಮಂದಿ ಮತ ಚಲಾಯಿಸಿದ್ದು, ಶೇ 73.24ರಷ್ಟು ಚಲಾವಣೆಯಾಗಿದೆ.
ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದ ಹೊಸಕೆರೆ ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ 756 ಮತದಾರರಲ್ಲಿ 546 ಮಂದಿ ಮತ ಚಲಾಯಿಸಿದ್ದು, ಶೇ 72.22 ಮತದಾನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.