ADVERTISEMENT

ದಾವಣಗೆರೆ | ದಸರಾ: ಕಾಟಾಚಾರದ ಜಿಲ್ಲಾ ಮಟ್ಟದ ಕ್ರೀಡಾಕೂಟ

ಜಿಲ್ಲಾ ಕ್ರೀಡಾಂಗಣದಲ್ಲಿ ಕಂಡುಬಂದ ಅದ್ವಾನ

ಸಿದ್ದಯ್ಯ ಹಿರೇಮಠ
Published 27 ಸೆಪ್ಟೆಂಬರ್ 2024, 6:06 IST
Last Updated 27 ಸೆಪ್ಟೆಂಬರ್ 2024, 6:06 IST
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟದ ವಾಲಿಬಾಲ್‌ ನೆಟ್‌ ಅನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿರುವುದು
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟದ ವಾಲಿಬಾಲ್‌ ನೆಟ್‌ ಅನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿರುವುದು   

ದಾವಣಗೆರೆ: ಅಂದಾಜು ಒಂದು ಕಿಲೋ ಮೀಟರ್‌ ಸುತ್ತಳತೆಯ ಕ್ರೀಡಾಂಗಣದಲ್ಲಿ ಒಂದು ಕಡೆ ಮಾತ್ರ ಕುಡಿಯುವ ನೀರು ಇಡಲಾಗಿತ್ತು. ನೆತ್ತಿ ಸುಡುವ ಉರಿಬಿಸಿಲು. ಒಂದು ಮೂಲೆಯಲ್ಲಿ ಆಟವಾಡುವವರು ಬಾಯಾರಿಕೆಯಾಗಿ ನೀರು ಕುಡಿಯಬೇಕೆಂದರೆ ಏದುಸಿರು ಬಿಡುತ್ತ ನೀರಿರುವ ಇನ್ನೊಂದು ಮೂಲೆಗೇ ಹೋಗಬೇಕು.

ಇದು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆಯುತ್ತಿದ್ದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕಂಡುಬಂದ ದೃಶ್ಯ.

ಬುಧವಾರವಷ್ಟೇ ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಿ ಮಾರನೇ ದಿನವೇ ಜಿಲ್ಲಾ ಮಟ್ಟದ ಕೂಟ ನಡೆಸಿರುವುದರಿಂದ, ಇಲ್ಲಿ ಭಾಗವಹಿಸಿರುವ ಬಹುತೇಕ ಕ್ರೀಡಾಪಟುಗಳು ವಿಶ್ರಾಂತಿ ಇಲ್ಲದೇ ಬಳಲಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕೂಟಕ್ಕೆ ಕಡೆ ಪಕ್ಷ ಎರಡರಿಂದ ಮೂರು ದಿನಗಳ ಅಂತರವಾದರೂ ಇದ್ದರೆ ವಿಶ್ರಾಂತಿಯೂ ಸಿಗುತ್ತದೆ, ಮುಂದಿನ ಹಂತಕ್ಕೆ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ADVERTISEMENT

ಅಲ್ಲಿ ನಡೆದಿದ್ದು ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಅಡೆತಡೆ ಓಟ ಸೇರಿದಂತೆ ಅಥ್ಲೆಟಿಕ್ಸ್‌, ವಾಲಿಬಾಲ್‌, ಕಬಡ್ಡಿ, ಕೊಕ್ಕೊ, ಬಾಲ್‌ ಬ್ಯಾಡ್ಮಿಂಟನ್‌ ಮತ್ತಿತರ ವಿಭಾಗದ ಸ್ಪರ್ಧೆಗಳು.

ಜಿಲ್ಲೆಯ ಹರಿಹರ, ಜಗಳೂರು, ನ್ಯಾಮತಿ, ಹೊನ್ನಾಳಿ, ಚನ್ನಗಿರಿ ಮತ್ತು ದಾವಣಗೆರೆ ತಾಲ್ಲೂಕುಗಳ ತಂಡಗಳ ಸಾವಿರಾರು ಜನ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳು ರಾಜ್ಯಮಟ್ಟದ ಆಯ್ಕೆಗಾಗಿ ಭಾಗವಹಿಸಿದ್ದರು. ಇಲ್ಲಿ ಪಾಲ್ಗೊಳ್ಳುವಿಕೆ ಮುಕ್ತ ಎಂಬ ಕಾರಣದಿಂದ ಆಯಾ ತಾಲ್ಲೂಕುಗಳಲ್ಲಿನ ಕ್ರೀಡಾ ಕ್ಲಬ್‌ಗಳು, ಶಾಲೆ– ಕಾಲೇಜು ತಂಡಗಳು, ಸ್ನೇಹಿತರ ತಂಡಗಳು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಇಲ್ಲಿ ಸ್ಪರ್ಧಿಸಿದ್ದವು.

‌ನೀರೂ ಇರಲಿಲ್ಲ:

‘ಕ್ರೀಡೆಯನ್ನು ಪೋಷಿಸಲೂ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲೂ ಇರುವ ಈ ಕೂಟಕ್ಕೆ ಬಂದ ಯುವ ಕ್ರೀಡಾಪಟುಗಳಿಗೆ ಕುಡಿಯುವ ನೀರು ಬಿಟ್ಟರೆ ಬೇರೆ ಯಾವುದೇ ಸೌಲಭ್ಯವಿರಲಿಲ್ಲ. ಹೀಗೆ ಇಟ್ಟ ನೀರು ಖಾಲಿ ಆದಾಗ ಮತ್ತೆ ನೀರನ್ನು ತಂದಿಡುವ ವ್ಯವಸ್ಥೆಯೂ ಅಲ್ಲಿರಲಿಲ್ಲ. ಕಡೆ ಪಕ್ಷ ಬೆಳಿಗ್ಗೆ ತಿಂಡಿಯನ್ನೂ ನೀಡಲಿಲ್ಲ. ಮಧ್ಯಾಹ್ನ ಒಂದೊಂದು ಚಮಚ ಚಿತ್ರನ್ನ ಮತ್ತು ಮೊಸರನ್ನವನ್ನಾದರೂ ನೀಡಬಹುದಿತ್ತು. ಅದನ್ನೂ ನೀಡಲಿಲ್ಲ. ಮಧ್ಯಾಹ್ನ ಹೊಟ್ಟೆ ಹಸಿದಾಗ ಕ್ರೀಡಾಂಗಣದ ಹೊರಹೋಗಿ ದುಬಾರಿ ದರದ ಊಟ, ತಿಂಡಿ ಸೇವಿಸಿ ಬಂದೆವು. ಕೆಲವರು ದೂರ ಎಂಬ ಕಾರಣಕ್ಕೆ ಹೊರಗೇ ಹೋಗದೇ ಐದೈದ್‌ ರೂಪಾಯಿ ಕೊಟ್ಟು ಶೇಂಗಾ, ಐಸ್‌ ಕ್ರೀಂ ತಿಂದರು’ ಎಂದು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ನ್ಯಾಮತಿಯ ಆಟಗಾರ್ತಿಯರು ಹೇಳಿದರು.

‘ಈ ರೀತಿಯ ವ್ಯವಸ್ಥೆ ಇದ್ದರೆ ಯುವಜನರು ಕ್ರೀಡೆಯತ್ತ ಆಕರ್ಷಿತರಾಗುವುದಾದರೂ ಹೇಗೆ? ಕ್ರೀಡೆ ಸಬಲಗೊಳ್ಳುವಾದರೂ ಹೇಗೆ?, ಈ ಬಗ್ಗೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಆಲೋಚಿಸಬೇಕು’ ಎಂದು ನಿರ್ಣಾಯಕರಾಗಿ ಬಂದವರೊಬ್ಬರು ಹೇಳಿದರು.

ಶೌಚಾಲಯದಲ್ಲೂ ನೀರಿಲ್ಲ:

ಜಿಲ್ಲೆಯ ಯುವತಿಯರೇ ಅಧಿಕ ಸಂಖ್ಯೆಯಲ್ಲಿದ್ದ ಕ್ರೀಡಾಂಗಣದಲ್ಲಿ ಸಮರ್ಪಕವಾದ ಶೌಚಾಲಯ ವ್ಯವಸ್ಥೆಯೂ ಇರಲಿಲ್ಲ. ಅಲ್ಲಿದ್ದ ಶೌಚಾಲಯದಲ್ಲಿ ನೀರಿನ ಸೌಲಭ್ಯ ಇರಲಿಲ್ಲ. ಗಬ್ಬು ನಾರುವ ಶೌಚಾಲಯವನ್ನು ಬಳಸಿದ ಕೆಲವು ಆಟಗಾರ್ತಿಯರಿಗೆ ತಲೆ ಸುತ್ತು ಬಂದಿದೆ. ಪೋಷಾಕು ಬದಲಾವಣೆಗೆ ಅನಿವಾರ್ಯವಾಗಿ ಅಲ್ಲಿಗೆ ಹೋಗಿದ್ದ ಇನ್ನು ಕೆಲವರು ವಾಂತಿ ಮಾಡಿಕೊಂಡರು ಎಂದು ಕ್ರೀಡಾಪಟುಗಳನ್ನು ಕರೆತಂದಿದ್ದ ಉಪನ್ಯಾಸಕಿಯೊಬ್ಬರು ವಿವರಿಸಿದರು.

‘25 ವರ್ಷಗಳ ಹಿಂದೆ ನಾವು ಆಡುವಾಗಲೂ ದರಸಾ ಕ್ರೀಡಾಕೂಟದ ಗುಣಮಟ್ಟ ಹೀಗೇ ಇತ್ತು. ಈಗಲೂ ದೇ ಸ್ಥಿತಿ ಮುಮದುವರಿದಿರುವುದು ಕ್ರೀಡೆಯ ಗುಣಮಟ್ಟವನ್ನು ಎತ್ತಿ ತೋರುತ್ತದೆ ಎಂದು ಜಗಳೂರಿನಿಂದ ಆಟಗಾರರನ್ನು ಕರೆತಂದಿದ್ದ ಯುವ ಪ್ರಶಸ್ತಿ ಪುರಸ್ಕೃತ ಹಿರಿಯ ಕ್ರೀಡಾಪಟು ಬುಡ್ಡಣ್ಣ ನೋವು ತೋಡಿಕೊಂಡರು.

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟದ ಓಟದ ಸ್ಪರ್ಧೆ ವೇಳೆ ಸ್ಪರ್ಧಿ ಎದುರು ಓಡಾಡುತ್ತಿರುವ ಜನ
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟದ ಕಬಡ್ಡಿಯ ನೋಟ
ಸರ್ವರಾಜು

ಕ್ರೀಡಾಕೂಟದ ಸ್ವಾರಸ್ಯಗಳು:

* 110 ಮೀಟರ್‌ ಹರ್ಡಲ್ಸ್‌ನಲ್ಲಿ ಪಾಲ್ಗೊಂಡಿದ್ದ ಕೆಲವರು ಮರಳಿನ ಟ್ರ್ಯಾಕ್‌ ಇದ್ದುದರಿಂದ ಜಾರಿ ಬಿದ್ದು ಕೈಕಾಲು ಕೆತ್ತಿಕೊಂಡರು.

* 110 ಮೀಟರ್‌ ಹರ್ಡಲ್ಸ್‌ ಸ್ಪರ್ಧೆ ನಡೆದಾಗ ಅನೇಕರು ಅಡ್ಡ ಬಂದಿದ್ದರಿಂದ ಕ್ರೀಡಾಪಟುಗಳಿಗೆ ಕಿರಿಕಿರಿಯಾಯಿತು.

* ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಹುತೇಕರು ಅಡ್ಡ ಬರುತ್ತಿದ್ದ ಜನರನ್ನು ಪಕ್ಕಕ್ಕೆ ಹೋಗುವಂತೆ ಹೇಳಿ ಓಟ ಮುಂದುವರಿಸಬೇಕಾಗಿತ್ತು.

* ವಾಲಿಬಾಲ್‌ ಪಂದ್ಯಕ್ಕಾಗಿ ನೆಟ್‌ ಅನ್ನು ವಿದ್ಯುತ್‌ ದೀಪದ ಕಂಭಕ್ಕೆ ಕಟ್ಟಲಾಗಿತ್ತು. * ಎತ್ತರ ಜಿಗಿತದ ಪೋಲ್‌ ಸಹ ಸರಿ ಇರಲಿಲ್ಲ.

* ವಾಲಿಬಾಲ್‌ನಲ್ಲಿ ಭಾಗವಹಿಸಿದ್ದ ಆಟಗಾರ್ತಿಯರು ಲೈನ್‌ನಿಂದ ಹೊರಹೋಗುತ್ತಿದ್ದ ಚಂಡನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹೊರಗೆ ಓಡಿ ಹೋಗುವ ಭರದಲ್ಲಿ ಮರಳಿನಲ್ಲಿ ಜಾರಿ ಬಿದ್ದು ಕೈ–ಕಾಲು ಕೆತ್ತಿಕೊಂಡರು. ಕನ್ನಡಕ ಧರಿಸಿದ್ದ ಒಬ್ಬ ಆಟಗಾರ್ತಿ ಹೀಗೆ ಬಿದ್ದಾಗ ಕನ್ನಡಕ ಮೂರು ಮೀಟರ್‌ ದೂರ ಹೋಗಿ ಬಿತ್ತು.

* ತಾಲ್ಲೂಕು ಮಟ್ಟದಲ್ಲಿ ಗೆದ್ದು ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಭಾಗವಹಿಸಿದ್ದ ದಾವಣಗೆರೆ ಮತ್ತು ಜಗಳೂರು ಮಹಿಳಾ ತಂಡಗಳ ಗುಣಮಟ್ಟ ಸರಿಯಾಗಿ ಇರಲಿಲ್ಲ. ರ‍್ಯಾಕೆಟ್‌ ಬೀಸಲೂ, ಬಾಲ್‌ ಹಿಂದಿರುಗಿಸುವುದಕ್ಕೂ ಪರದಾಡುತ್ತಿದ್ದರು. ‘ಜಿಲ್ಲಾ ಮಟ್ಟಕ್ಕೆ ಬಂದಿದ್ದಾರೆ ಇವರಿಗೆ ಆಡುವುದಕ್ಕೇ ಬರುತ್ತಿಲ್ಲವಲ್ಲ?’ ಎಂದು ಕೇಳಿದರೆ, ನಿನ್ನೆ ನಡೆದ ತಾಲ್ಲೂಕು ಮಟ್ಟದ ಕೂಟದಲ್ಲಿ ಇದೊಂದೇ ತಂಡವಿತ್ತು. ಅವರನ್ನೇ ಜಯಶಾಲಿ ಎಂದು ತಿಳಿಸಿ ಜಿಲ್ಲಾ ಮಟ್ಟಕ್ಕೆ ಬಡ್ತಿ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದರು. ‘ಜಗಳೂರು ತಂಡದ ಆಟಗಾರ್ತಿಯರ ಗುಣಮಟ್ಟವೂ ಅದೇ ರೀತಿ ಇದೆಯಲ್ಲ?’ ಎಂಬ ಪ್ರಶ್ನೆಗೆ ಇವರು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ಅವರ ಶಿಕ್ಷಕಿ ತಿಳಿಸಿದರು.

* ಕ್ರೀಡಾಕೂಟದಲ್ಲಿ ನಡೆದ ಪ್ರತಿ ಪಂದ್ಯಗಳಿಗೂ ಬೆಂಬಲ ನೀಡುವವರ ದಂಡೇ ನೆರೆದಿತ್ತು. ತಮ್ಮ ನೆಚ್ಚಿನ ತಂಡ ಮೇಲುಗೈ ಸಾಧಿಸಿದಾಗ ’ಜಾಲಿ ಜಾಲಿ..’ ಎಂದು ಹುರಿದುಂಬಿಸುತ್ತಾ, ವಿರೋಧಿ ತಂಡದ ವೈಫಲ್ಯ ಕಂಡು ‘ಖಾಲಿ ಖಾಲಿ...’ ಎಂದೂ ಕಿಚಾಯಿಸುತ್ತಿದ್ದರು.

* ‘ಸಂಭಾವನೆ ಕೊಡುವವರೆಗೂ ನಾನು ರಿಸಲ್ಟ್‌ ಕೊಡುವುದಿಲ್ಲ’ ಎಂದು ಸೀಟಿ ಹೊಡೆಯುತ್ತ ಓಡಾಡುತ್ತಿದ್ದ ನಿರ್ಣಾಯಕರೊಬ್ಬರು ಸಹ ನಿರ್ಣಾಯಕರಿಗೆ ಹೇಳುತ್ತಿದ್ದುದು ಕೇಳಿಬಂತು. * ಕ್ರೀಡಾಕೂಟದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಯಾವುದೇ ವ್ಯವಸ್ಥೆ ಕಂಡುಬರಲಿಲ್ಲ. 

ತಾಲ್ಲೂಕು ಮಟ್ಟ ಸೇರಿದಂತೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ₹ 9 ಲಕ್ಷ ಅನುದಾನ ಬಂದಿದೆ. ₹ 150 ಟಿ.ಎ ಡಿ.ಎ ಕೊಡುತ್ತೇವೆ. ಮಳೆ ಬಂದಿದ್ದರಿಂದ ಕ್ರೀಡಾಂಗಣದಲ್ಲಿ ಗುಂಡಿ ಬಿದ್ದಿದ್ದು ಅಭಿವೃದ್ಧಿ ಕಾಮಗಾರಿಯಿಂದ ಅವ್ಯವಸ್ಥೆಯಾಗಿದೆ. ಪೈಪ್‌ಲೈನ್ ಒಡೆದಿದ್ದರಿಂದ ನೀರಿನ ಸಮಸ್ಯೆಯಾಗಿತ್ತು. ತಾಂತ್ರಿಕ ದೋಷದ ಕಾರಣ ವಿದ್ಯುತ್‌ ಇಲ್ಲ. ಎಲ್ಲ ಸಮಸ್ಯೆ ಪರಿಹರಿಸಲಾಗುವುದು. ಕಳೆದ ವರ್ಷದ ಟಿ.ಎ ಡಿ.ಎ ಶೀಘ್ರ ನೀಡಲಾಗುವುದು.
ಕೆ.ಆರ್‌. ಜಯಲಕ್ಷ್ಮಿ ಬಾಯಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ
ಹೈಜಂಪ್‌ ಪೋಲ್‌ ಸರಿ ಇರಲಿಲ್ಲ. ಒಟ್ಟಾರೆ ಇಲ್ಲಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಆರಂಭಿಕ ಹಂತದಲ್ಲೇ ಹೀಗಿದ್ದರೆ ಒಲಿಂಪಿಕ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಹೇಗೆ ಬರುತ್ತದೆ?
ಸರ್ವರಾಜು ಹೈಜಂಪ್‌ ಕ್ರೀಡಾಪಟು

ಕಳೆದ ವರ್ಷದ ಟಿ.ಎ ಡಿ.ಎ ನೀಡಿಲ್ಲ

ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯುತ್‌ ಸಂಪರ್ಕ ಇಲ್ಲ. 15 ದಿನಗಳಿಂದ ಶೌಚಾಲಯದಲ್ಲಿ ನೀರು ಬರುತ್ತಿಲ್ಲ. ಕುಳಿತುಕೊಳ್ಳಲು ಸಮರ್ಪಕ ಆಸನಗಳಿಲ್ಲ. ಕೆಲವು ದಿನಗಳ ಹಿಂದೆ ಶಾಲಾ ಮಟ್ಟದ ಕ್ರೀಡಾಕೂಟ ನಡೆದಾಗಲೂ ಕುಡಿಯುವ ನೀರಿನ ಸಮಸ್ಯೆ ಇತ್ತು. ದಸರಾ ಕ್ರೀಡಾಕೂಟದಲ್ಲೂ ಅದೇ ಅವ್ಯವಸ್ಥೆ ಮುಂದುವರಿದಿದೆ. ಶಿಕ್ಷಣ ಇಲಾಖೆ ಕ್ರೀಡಾಂಗಣಕ್ಕೆ ಶುಲ್ಕ ನೀಡಿ ಕ್ರೀಡಾಕೂಟ ಆಯೋಜಿಸುತ್ತದೆ. ಆದರೂ ಇಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ. ಆಟಗಾರ್ತಿಯರಿಗೆ ಬಟ್ಟೆ ಬದಲಾಯಿಸಲು ಸ್ಥಳ ಇಲ್ಲ. ಥ್ರೋಬಾಲ್‌ ವಾಲಿಬಾಲ್‌ ಕಬಡ್ಡಿ ಕೋರ್ಟ್‌ ಹಾಗೂ  ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಮರಳು ಹಾಕಿದ್ದರಿಂದ ಆಡಲು ಕಷ್ಟವಾಯಿತು ಎಂದು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶ್ರೀನಿವಾಸ್ ‘ಫ್ರಜಾವಾಣಿ’ಗೆ ತಿಳಿಸಿದರು. ಕಳೆದ ವರ್ಷದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು ನಿರ್ಣಾಯಕರು ಮತ್ತು ನೆರವು ಸಿಬ್ಬಂದಿಗೆ ಈವರೆಗೂ ಟಿ.ಎ ಡಿ.ಎ. ನೀಡಿಲ್ಲ. 1000 ಆಟಗಾರರು ದಸರಾ ಕ್ರೀಡಾಕೂಟಕ್ಕೆ ಬಂದಿದ್ದಾರೆ. ಚನ್ನಗಿರಿ ಹೊನ್ನಾಳಿ ಗಡಿ ಭಾಗದಿಂದ ಬಂದವರಿಗೂ ಊಟದ ಸಮಸ್ಯೆ ಆಯಿತು. ಜಿಲ್ಲಾ ಮಟ್ಟದ ಕ್ರೀಡಾಕೂಟವೇ ಹೀಗಾದರೇ ಹೇಗೆ? ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.