ADVERTISEMENT

ದಾವಣಗೆರೆ | ₹5 ಲಕ್ಷಕ್ಕೆ ಶಿಶು ಮಾರಾಟ: ವೈದ್ಯೆ ಸೇರಿ 8 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:35 IST
Last Updated 9 ಅಕ್ಟೋಬರ್ 2024, 15:35 IST
<div class="paragraphs"><p>ನವಜಾತ ಶಿಶು(ಸಾಂದರ್ಭಿಕ ಚಿತ್ರ)</p></div>

ನವಜಾತ ಶಿಶು(ಸಾಂದರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ದಾವಣಗೆರೆ: ಜನನ ಪ್ರಮಾಣ ಪತ್ರ ಸೇರಿ ನಕಲಿ ದಾಖಲೆ ಸೃಷ್ಟಿಸಿ ಶಿಶುವೊಂದನ್ನು ₹ 5 ಲಕ್ಷಕ್ಕೆ ಮಾರಾಟ ಮಾಡಿದ ಜಾಲವನ್ನು ಭೇದಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಠಾಣೆಯ ಪೊಲೀಸರು, ವೈದ್ಯೆ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಇಲ್ಲಿನ ಎಂ.ಕೆ.ಮೆಮೋರಿಯಲ್‌ ಆಸ್ಪತ್ರೆಯ ವೈದ್ಯೆ ಡಾ.ಭಾರತಿ, ಶಿಶುವಿನ ತಾಯಿ ಕಾವ್ಯ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್‌ ಕುಮಾರ್‌ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್‌, ಮಂಜಮ್ಮ, ಸುರೇಶ್‌ ಮತ್ತು ರಮೇಶ್‌ ಬಂಧಿತರು. ವಿಚಾರಣೆ ನಡೆಸಿದ ಪೊಲೀಸರು ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರಾಟವಾಗಿದ್ದ ಎರಡೂವರೆ ತಿಂಗಳ ಗಂಡು ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಮಕ್ಕಳ ಸಹಾಯವಾಣಿಗೆ ಬಂದ ಕರೆಯೊಂದು ದಂಪತಿ ಶಿಶುವನ್ನು ಅನಧಿಕೃತವಾಗಿ ಪೋಷಣೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದೆ. ಕರೆಯ ಜಾಡು ಹಿಡಿದು ಸಾಗಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್‌.ಕವಿತಾ ನೇತೃತ್ವದ ತಂಡ ವಿನೋಬನಗರದ ಜಯಾ ಪ್ರಶಾಂತ್ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ದಂಪತಿ ಒದಗಿಸಿದ ಶಿಶು ಜನನ ಪ್ರಮಾಣ ಪತ್ರವನ್ನು ಆಧರಿಸಿ ಎಂ.ಕೆ.ಮೆಮೋರಿಯಲ್‌ ಆಸ್ಪತ್ರೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ವಿಚ್ಛೇದಿತ ಮಹಿಳೆ ಕಾವ್ಯಾ ಎರಡೂವರೆ ತಿಂಗಳ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಶಿಶುವಿಗೆ ಜನ್ಮ ನೀಡಿದ್ದಳು. ದಾವಣಗೆರೆಗೆ ಮರಳಿದ ಮಹಿಳೆ ಶಿಶು ಮಾರಾಟ ಮಾಡಲು ನಿರ್ಧರಿಸಿದ್ದಳು. ಎಂಟು ವರ್ಷಗಳಿಂದ ಮಕ್ಕಳಾಗದ ಕೊರಗಿನಲ್ಲಿದ್ದ ದಂಪತಿಯನ್ನು ಮಧ್ಯವರ್ತಿ ವಾದಿರಾಜ್‌ ಸಂಪರ್ಕಿಸಿದ್ದನು. ₹ 5 ಲಕ್ಷಕ್ಕೆ ಶಿಶು ಖರೀದಿಸಲು ದಂಪತಿ ಒಪ್ಪಿಗೆ ಸೂಚಿಸಿದ್ದರು. ಎಂ.ಕೆ.ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಡಾ.ಭಾರತಿ ಹಾಗೂ ಸಿಬ್ಬಂದಿ ಮಂಜುಳಾ ನಕಲಿ ಜನನ ಪ್ರಮಾಣ ಪತ್ರಕ್ಕೆ ಸಹಕಾರ ನೀಡಿದ್ದರು’ ಎಂದು ಪೊಲೀಸ್‌ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

‘ಜಯಾ ಹಾಗೂ ಪ್ರಶಾಂತ್‌ ದಂಪತಿಗೆ ಆ.26ರಂದು ಶಿಶು ಜನನವಾಗಿದೆ ಎಂಬುದಾಗಿ ಡಾ.ಭಾರತಿ ದಾಖಲೆ ಸೃಷ್ಟಿಸಿದ್ದರು. ಆಸ್ಪತ್ರೆಯ ದಾಖಲೆಗಳನ್ನು ಆಧರಿಸಿ ಮಹಾನಗರ ಪಾಲಿಕೆಯಲ್ಲಿ ಶಿಶುವಿನ ಜನನ ಪ್ರಮಾಣ ಪತ್ರವನ್ನು ಪಡೆಯಲಾಗಿತ್ತು. ಆರೋಪಿಗಳ ವಿರುದ್ಧ ಬಾಲ ನ್ಯಾಯ ಕಾಯ್ದೆ 2015, ಮಕ್ಕಳ ರಕ್ಷಣಾ ಕಾಯ್ದೆ 2004 ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.