ADVERTISEMENT

ದುಗ್ಗಮ್ಮ ಜಾತ್ರೆ; ಉಧೋ ಉಧೋ..

ನಗರದ ಅಧಿದೇವತೆಗೆ ವಿಶೇಷ ಪೂಜೆ; ಇಂದು, ನಾಳೆ ಲಕ್ಷಾಂತರ ಭಕ್ತರಿಂದ ದೇವಿ ದರ್ಶನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 16:06 IST
Last Updated 18 ಮಾರ್ಚ್ 2024, 16:06 IST

ದಾವಣಗೆರೆ: ನಗರದ ಅಧಿದೇವತೆ ದುಗ್ಗಮ್ಮ ಜಾತ್ರೆಯ ಪ್ರಯುಕ್ತ ಸೋಮವಾರ ದುರ್ಗಾಂಬಿಕಾ ದೇವಿ ಮೂರ್ತಿಗೆ ಮಹಿಷಾಷುರ ಮರ್ದಿನಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಹಣ್ಣು ಕಾಯಿ ಮಾರಾಟ ಜೋರು:

ADVERTISEMENT

ಜಾತ್ರೆ ಅಂಗವಾಗಿ ದೇವಸ್ಥಾನದ ಬೀದಿ ಹಾಗೂ ದೇವಸ್ಥಾನದ ಮುಂಭಾಗದ ಆವರಣದಲ್ಲಿ ತೆಂಗಿನಕಾಯಿ, ಬಾಳೆಹಣ್ಣು, ಹಸಿರು ಬಳೆ, ಸೀರೆ, ಕುಪ್ಪಸ, ಹೂವು, ದೇವಿಯ ಫೋಟೊ, ಅರಿಶಿನ, ಕುಂಕುಮ, ವಿಭೂತಿ ಹಾಗೂ ಇನ್ನಿತರ ವಸ್ತುಗಳ ಮಾರಾಟದ ಭರಾಟೆಯೂ ಜೋರಾಗಿದೆ. ಮಹಿಳೆಯರು, ಯುವತಿಯರು ಬಳೆ ಹಾಕಿಸಿಕೊಂಡು ಸಂಭ್ರಮಿಸಿದರು. ಜಾತ್ರೆ ಅಂಗವಾಗಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲೂ ಅಂಗಡಿಗಳನ್ನು ತೆರೆದು ಹಣ್ಣು ಕಾಯಿಗಳನ್ನು ಮಾರಾಟ ಮಾಡಲಾಗುತ್ತಿದೆ. 

ಸೂಕ್ತ ವ್ಯವಸ್ಥೆ:

ಜಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನದ ಸುತ್ತ ದೀಡ್‌ ನಮಸ್ಕಾರ ಹಾಕುತ್ತಾರೆ. ಅವರಿಗೆ ಅನುಕೂಲ ಆಗಲೆಂದು ದೇವಸ್ಥಾನದ ಸುತ್ತ ಮರಳು ಹಾಕಲಾಗಿದೆ. ದೀಡ್‌ ನಮಸ್ಕಾರ ಹಾಕುವ ಭಕ್ತರಿಗೆ ಸ್ನಾನ ಮಾಡಲು ಅನುಕೂಲವಾಗಲೆಂದು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕವಾಗಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಹಾಗೂ ಅವಘಡ ನಡೆಯದಂತೆ ತಡೆಯಲು ಬೆಸ್ಕಾಂ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿರುವುದು ಕಂಡುಬಂತು.

ದರ್ಶನಕ್ಕೆ ವ್ಯವಸ್ಥೆ:

ದುರ್ಗಾಂಬಿಕಾ ದೇವಿಯ ದರ್ಶನಕ್ಕಾಗಿ 3 ರೀತಿಯ ವ್ಯವಸ್ಥೆ ಮಾಡಲಾಗಿದೆ. ‘ಧರ್ಮದರ್ಶನ’ ವ್ಯವಸ್ಥೆಯಲ್ಲಿ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ದೇವಿದರ್ಶನ ಪಡೆಯಬಹುದು. ₹ 50 ನೀಡಿ ಟಿಕೆಟ್‌ ಖರೀದಿಸುವುದು ಹಾಗೂ ದೇವಸ್ಥಾನದ ಟ್ರಸ್ಟ್‌ ನೀಡುವ ಪಾಸ್‌ ತೋರಿಸುವ ಮೂಲಕ ನೇರವಾಗಿ ಸಾಗಿ ದೇವಿ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಐಸ್‌ಕ್ರೀಂ, ಕಬ್ಬಿನಹಾಲು:

ಸುಡುಬಿಸಿಲಿನ ಕಾರಣಕ್ಕೆ ದೇವಸ್ಥಾನದ ಬಳಿ ಐಸ್ ಕ್ರೀಂ, ಕಬ್ಬಿನ ಹಾಲು ಹಾಗೂ ಇತರೆ ತಂಪುಪಾನೀಯಗಳ ಮಾರಾಟವೂ ಜೋರಾಗಿದೆ. ಬಿಸಿಲಿನಲ್ಲಿ ಸಾಗಿ ಬರುವ ಭಕ್ತರು ಐಸ್‌ಕ್ರೀಂ, ಕಬ್ಬಿನ ಹಾಲು ಕುಡಿಯುತ್ತಿರುವುದು ಹೆಚ್ಚಾಗಿದ್ದು, ವ್ಯಾಪಾರಿಗಳಿಗೂ ಉತ್ತಮ ಲಾಭವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.