ADVERTISEMENT

ಹೊನ್ನಾಳಿ | ಅಹಿಂದ ಒಕ್ಕೂಟದಿಂದ ಪ್ರತಿಭಟನೆ ನಾಳೆ

ಹೊನ್ನಾಳಿ: ಜಾತಿ ಜನಗಣತಿ ವರದಿ ಸ್ವೀಕರಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 7:35 IST
Last Updated 26 ಡಿಸೆಂಬರ್ 2023, 7:35 IST
ಹೊನ್ನಾಳಿಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎ.ಉಮಾಪತಿ ನೇತೃತ್ವದಲ್ಲಿ ಸಭೆ ನಡೆಯಿತು
ಹೊನ್ನಾಳಿಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎ.ಉಮಾಪತಿ ನೇತೃತ್ವದಲ್ಲಿ ಸಭೆ ನಡೆಯಿತು   

ಹೊನ್ನಾಳಿ: ‘ಸರ್ಕಾರ ಕಾಂತರಾಜ್ ವರದಿಯನ್ನು ತಕ್ಷಣ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ.ಉಮಾಪತಿ ಹೇಳಿದರು.

ಅಹಿಂದ ಒಕ್ಕೂಟದಿಂದ ಡಿ.27ರಂದು ಹಮ್ಮಿಕೊಂಡಿರುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

‘ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೂರಾರು ಕೋಟಿ ಹಣ ಖರ್ಚು ಮಾಡಿ ಕಾಂತರಾಜ ನೇತೃತ್ವದಲ್ಲಿ ಜನಗಣತಿ ವರದಿ ಪೂರ್ಣಗೊಂಡಿದ್ದು, ಸರ್ಕಾರ ಮೊದಲು ವರದಿಯನ್ನು ಸ್ವೀಕರಿಸಿ ಅದರ ಬಗ್ಗೆ ಚರ್ಚೆ ಮಾಡಲಿ’ ಎಂದು ಹೇಳಿದರು.

ADVERTISEMENT

‘ಜಾತಿ ಜನಗಣತಿ ವರದಿಯನ್ನೇ ಸರ್ಕಾರ ಇನ್ನು ಸ್ವೀಕರಿಸಿಲ್ಲ. ಆದರೆ, ಜನಗಣತಿ ಸರಿಯಾಗಿ ನಡೆದಿಲ್ಲ, ಲೋಪದಿಂದ ಕೂಡಿದೆ ಎಂದು ಆರೋಪ ಮಾಡುವುದು ಸರಿಯಲ್ಲ. ವರದಿ ಸ್ವೀಕರಿಸುವ ಮುನ್ನವೇ ವಿರೋಧಿಸುವುದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.

‘ಕಾಂತರಾಜ್ ವರದಿಯನ್ನು ಸರ್ಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ 27ರಂದು ತಾಲ್ಲೂಕಿನ ವಿವಿಧ ಜಾತಿಗಳ ಅಹಿಂದ ಮುಖಂಡರು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ನಾಗಪ್ಪ ಮಾತನಾಡಿ, ಕಾಂತರಾಜ್ ವರದಿ ಜಾತಿ ಜನಗಣತಿ ವರದಿಯಲ್ಲ. ಅದು ಆರ್ಥಿಕ ವ್ಯವಸ್ಥೆಯಲ್ಲಿ ಹಿಂದುಳಿದವರ ಸಮೀಕ್ಷೆಯ ಗಣತಿಯಾಗಿದ್ದು ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ವರದಿಯನ್ನು ಸ್ವೀಕರಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ರಮೇಶ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ, ದಿಡಗೂರು ಫಾಲಾಕ್ಷಪ್ಪ, ಹಾಲುಮತ ಸಮಾಜದ ಮುಖಂಡ ರಾಜು ಕಣಗಣ್ಣಾರ್, ದಿಡಗೂರು ಜಿ.ಎಚ್.ತಮ್ಮಣ್ಣ ಅವರು ಜಾತಿ ಜನಗಣತಿ ವರದಿ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಎಚ್.ಎ. ರಂಜಿತ್, ಪುರಸಭೆ ಸದಸ್ಯ ಬಾಬು ಓಬಳದಾರ್, ತಾಲ್ಲೂಕು ಕರವೇ ಅಧ್ಯಕ್ಷ ವಿನಯ್ ವಗ್ಗರ್, ಎಸ್. ಶ್ರೀನಿವಾಸ್, ಸಿಂಪಿಗ ಸಮಾಜದ ಮುಖಂಡ ನಟರಾಜ್, ಮಾದಿಗ ಸಮಾಜದ ಮುಖಂಡ ಮಾರಿಕೊಪ್ಪ ಮಂಜುನಾಥ್, ಮುಸ್ಲಿಂ ಸಮಾಜದ ಮುಖಂಡ ಚೀಲೂರು ವಾಜೀದ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.