ಹರಿಹರ: ಸ್ಥಳೀಯ ಸಂಸ್ಥೆಗಳ ಬೇಜವಾಬ್ದಾರಿಯುತ ನಡೆಯಿಂದಾಗಿ ಕಲುಷಿತ ನೀರು ಸೇವನೆ ಮಾಡಿ ಅಮಾಯಕರು ಮೃತಪಟ್ಟ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವಿನ ದವಡೆಯಿಂದ ಪಾರಾದ ಘಟನೆಗಳು ಸಾಕಷ್ಟು ನಡೆದಿವೆ.
ಕೆಯುಐಡಿಎಫ್‌ಸಿ, ಕೆಐಯುಡಬ್ಲ್ಯುಎಂಐಪಿ ಮತ್ತು ಆರ್‌ಪಿಎಂಯುನಿಂದ ಹರಿಹರ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ‘ಜಲಸಿರಿ’ ಯೋಜನೆ ಜಾರಿಗೊಂಡಿದ್ದು, ಈಗಲೂ ಆ ಸಂಸ್ಥೆಗಳಿಂದಲೇ ನಿರ್ವಹಣೆಯಾಗುತ್ತಿದೆ.
ಎರಡು ವರ್ಷಗಳಿಂದ ನಗರದ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಜಲಸಿರಿ ಯೋಜನೆಯಡಿ ನೀರು ಸರಬರಾಜು ಆಗುತ್ತಿದೆ. ನಗರದ ವಿವಿಧೆಡೆ ಅಳವಡಿಸಿರುವ ಪೈಪ್‌ಲೈನ್ ಬಗ್ಗೆ ಮುಂಚಿನಿಂದಲೂ ನಗರದ ನಾಗರಿಕರ ತಕರಾರು ಇದ್ದು, ಜಲಸಿರಿ ಹಾಗೂ ನಗರಸಭೆ ಅಧಿಕಾರಿಗಳು ಕೇವಲ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವತ್ತ ಗಮನ ಹರಿಸುತ್ತಿಲ್ಲ ಎಂದು ದೂರುವುದು ಸಾಮಾನ್ಯವಾಗಿದೆ.
ಚರಂಡಿಯಲ್ಲಿ ನೀರಿನ ಪೈಪ್: ನಗರದ ಗಾಂಧಿ ನಗರದ ಸಮೀಪ ಬೀರೂರು– ಸಮ್ಮಸಗಿ ಹೆದ್ದಾರಿ ಪಕ್ಕದಲ್ಲಿ ಅಳವಡಿಸಿರುವ 6 ಇಂಚಿನ ಪೈಪ್‌ಲೈನ್ ಒಂದೆಡೆ 20 ಮೀಟರ್‌ಗೂ ಹೆಚ್ಚು ಚರಂಡಿ ನೀರಲ್ಲಿ ಮುಳುಗಿದೆ. ಚರಂಡಿಯ ಕಲುಷಿತ ನೀರು ಈ ಪೈಪ್‌ನಲ್ಲಿ ನುಸುಳಿದರೆ ಜನರ ಜೀವಕ್ಕೆ ಅಪಾಯವಿದೆ.
ಈ ಭಾಗದಲ್ಲಿ ಗಾಂಧಿನಗರ, ಹೊಸಭರಂಪುರ, ಗಾಂಧಿನಗರ ಕೊಳಚೆ ಪ್ರದೇಶ ಹಾಗೂ ವಿವಿಧ ಜನವಸತಿ ಪ್ರದೇಶಗಳಿದ್ದು, ಈ ಪೈಪ್‌ಲೈನ್‌ನಲ್ಲಿ ಚರಂಡಿ ನೀರು ಅಕಸ್ಮತ್ತಾಗಿ ಮಿಶ್ರಣಗೊಂಡರೆ, ಬ್ಯಾಕ್ಟೀರಿಯಾಗಳು ಒಳಸೇರಿದರೆ ಸಾವಿರಾರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಹಿಂದೆ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಜಲಸಿರಿ ಅಧಿಕಾರಿಗಳು ಚರಂಡಿ ಕ್ರಾಸ್ ಮಾಡುವ ನೀರಿನ ಪೈಪ್‌ಗಳ ಮೇಲೆ ಮತ್ತೊಂದು ಪೈಪ್ ಕವಚ ಹಾಕಿದ್ದರು. ಆದರೆ ನಗರದಲ್ಲಿ ಇನ್ನೂ ಸಾಕಷ್ಟು ಪೈಪ್‌ಲೈನ್‌ಗಳು ಚರಂಡಿ ನೀರಿನಲ್ಲೇ ಹಾದು ಹೋಗಿದ್ದು, ಅವುಗಳನ್ನು ಸರಿಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಯುಜಿಡಿ ಲೈನ್ ಮೇಲೆ ಜಲಸಿರಿ ಪೈಪ್: ಗಾಂಧಿ ವೃತ್ತದ ಸಮೀಪ ಏಳೆಂಟು ಅಡಿ ಆಳದಲ್ಲಿ ಬೃಹತ್ ಗಾತ್ರದ ಯುಜಿಡಿ ಪೈಪ್ ಜೊತೆಗೆ ಜಲಸಿರಿಯ ಪೈಪ್ ಅಳವಡಿಸಿದ್ದು, ಇದನ್ನು ಸರಿಪಡಿಸಲು ಸಾರ್ವಜನಿಕರು ಆಗ್ರಹಿಸಿದ್ದರೂ ಈವರೆಗೆ ಆ ಸಮಸ್ಯೆ ಪರಿಹರಿಸಿಲ್ಲ.
ಚರಂಡಿಗಳು ಹಾಗೂ ಯುಜಿಡಿ ಲೈನ್‌ನಿಂದ ಕನಿಷ್ಠ 8 ಅಡಿ ಅಂತರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಬೇಕು ಎಂಬ ಸರ್ಕಾರದ ನಿಯಮಾವಳಿಯನ್ನು ಸರ್ಕಾರಿ ಸಂಸ್ಥೆಗಳೇ ಗಾಳಿಗೆ ತೂರಿ ನಾಗರಿಕರ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿವೆ ಎಂದು ಸಾರ್ಜನಿಕರು ದೂರುತ್ತಾರೆ.
ಚರಂಡಿಯಲ್ಲಿ ನೀರಿನ ಲೈನ್ ಹೋಗಿರುವ ಕುರಿತು ದೂರುಗಳು ಬಂದಿದ್ದು ಸರಿಪಡಿಸಲು ಜಲಸಿರಿ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದೇನೆ. ಈ ಕುರಿತು ಈಗ ಅವರಿಗೆ ನೋಟಿಸ್ ಜಾರಿ ಮಾಡುತ್ತೇನೆ.
-ಐಗೂರು ಬಸವರಾಜ್ ನಗರಸಭೆ ಪೌರಾಯುಕ್ತ
ಯುಜಿಡಿ ಮತ್ತು ಜಲಸಿರಿ ಲೈನ್ ಪ್ರತ್ಯೇಕಗೊಳಿಸಲು ಮನವಿ ನೀಡಿ ವರ್ಷವಾದರೂ ಈವರೆಗೂ ಈ ಸಮಸ್ಯೆ ಬಗೆಹರಿಸಿಲ್ಲ. ಇದರಿಂದ ನಗರದ ಜನರಿಗೆ ಒಂದಲ್ಲಾ ಒಂದು ದಿನ ಗಂಡಾಂತರ ಎದುರಾಗುವ ಸಾಧ್ಯತೆ ಇದೆ.
-ಪಿ.ಜೆ.ಮಹಾಂತೇಶ್ ತಾಲ್ಲೂಕು ಸಂಚಾಲಕ ದಲಿತ ಸಂಘರ್ಷ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.