ಕಡರನಾಯ್ಕನಹಳ್ಳಿ: ಸಮೀಪದ ಕೊಕ್ಕನೂರು ಗ್ರಾಮದಲ್ಲಿರುವ ಪುಷ್ಕರಿಣಿ ನೋಡುಗರ ಮನಸ್ಸಿಗೆ ಮುದ ನೀಡುವಂತಿದೆ. ಇದರಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದರಿಂದ ಅದರ ಸೊಬಗು ಮಸುಕಾಗುವ ಅಪಾಯ ಎದುರಾಗಿತ್ತು. ಇದನ್ನು ಮನಗಂಡ ಗ್ರಾಮಸ್ಥರು, ದೇವಸ್ಥಾನ ಸಮಿತಿ ನೇತೃತ್ವದಲ್ಲಿ ಹೂಳು ತೆಗೆಯುವ ಕಾರ್ಯ ಕೈಗೊಂಡಿದ್ದಾರೆ. ಆ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಗ್ರಾಮದ ಆಂಜನೇಯ ಸ್ವಾಮಿಯ ಜಲಾಭಿಷೇಕಕ್ಕೆ ಈ ಪುಷ್ಕರಿಣಿಯ ನೀರನ್ನೇ ಬಳಸಲಾಗುತ್ತದೆ. ಆದ್ದರಿಂದ ಇದರ ಸುತ್ತಮುತ್ತ ಗಲೀಜು ಮಾಡುವುದು ನಿಷಿದ್ಧ. ಭಕ್ತರು ಒಂದೊಮ್ಮೆ ಸ್ನಾನ ಮಾಡಿದರೂ ಸಾಬೂನು ಬಳಸುವಂತಿಲ್ಲ. ಈ ನಿಯಮಗಳ ಪಾಲನೆ ಕಡ್ಡಾಯ.
ಬರದ ಕಾರಣ ಈಗ ಪುಷ್ಕರಿಣಿಯೂ ಬತ್ತಿ ಹೋಗಿದೆ. ಇದೇ ಸೂಕ್ತ ಸಮಯ ಎಂದು ಅರಿತ ದೇವಸ್ಥಾನ ಸಮಿತಿಯವರು ಗ್ರಾಮಸ್ಥರ ಸಹಕಾರದೊಂದಿಗೆ ₹ 50,000 ವೆಚ್ಚದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. 90 ಅಡಿ ಆಳದ ಪುಷ್ಕರಿಣಿಯಲ್ಲಿ ತುಂಬಿದ್ದ ಹೂಳನ್ನು ಕ್ರೇನ್ ಬಳಸಿ ಹೊರತೆಗೆದಿದ್ದಾರೆ. ಆದ್ದರಿಂದ ಈಗ ಪುಷ್ಕರಿಣಿಗೆ ಜೀವಕಳೆಯೇ ಬಂದಂತಾಗಿದೆ.
‘ಈ ಪುಷ್ಕರಿಣಿ ವರ್ಷಪೂರ್ತಿ ತುಂಬಿರುತ್ತದೆ. ಆದ್ದರಿಂದ ಹೂಳು ತೆಗೆಯುವುದು ತ್ರಾಸದಾಯಕ ಕೆಲಸವಾಗಿತ್ತು. ಕೆಲ ವರ್ಷಗಳ ಹಿಂದೆ ಮಳೆ ಕೊರತೆ ಎದುರಾದಾಗ ಗ್ರಾಮಸ್ಥರೇ ಮನೆಗೊಬ್ಬರಂತೆ ಮುಂದೆ ಬಂದು ಸ್ವಚ್ಛಗೊಳಿಸಿದ್ದರು. ಅದರಿಂದ ನೀರಿನ ಸಂಗ್ರಹಕ್ಕೆ ಅನುಕೂಲವಾಗಿತ್ತು. ಬಳಿಕ ಬಂದ ಮಳೆಯ ವೇಳೆ ಒಂದೇ ವಾರದಲ್ಲಿ ಇದು ತುಂಬಿ ಹೋಗಿತ್ತು’ ಎಂದು ದೇವಸ್ಥಾನದ ಅರ್ಚಕ ಕೆ.ಆರ್. ಹನುಮಂತರಾಯ ತಿಳಿಸಿದರು.
‘ಪುಷ್ಕರಿಣಿ ಸುತ್ತಲೂ ಕಾಂಪೌಂಡ್ ಕಟ್ಟಲಾಗಿದೆ. ಹಲವು ತೆಂಗಿನ ಮರಗಳೂ ಇವೆ. ಈ ಮರಗಳಿಗೆ ನೀರುಣಿಸಲು ಪ್ರತ್ಯೇಕ ಪಂಪ್‌ಹೌಸ್ ವ್ಯವಸ್ಥೆ ಮಾಡಲಾಗಿದೆ. ತೇರು ರೂಪದಲ್ಲಿ ಪುಷ್ಕರಿಣಿ ರಚನೆಯಾಗಿದ್ದು, ಎರಡೂ ಬದಿಯಲ್ಲಿ ಮೆಟ್ಟಿಲುಗಳು ಇವೆ. ಇದರಲ್ಲಿ ಹಲವು ಜಾತಿಯ ಮೀನುಗಳು ಇದ್ದವು. ನೀರಿಲ್ಲದ್ದರಿಂದ ಈಗ ಅವೂ ಸತ್ತಿವೆ’ ಎಂದರು.
ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಅಲ್ಲಲ್ಲಿ ಕಲ್ಲಿನ ಆಸನಗಳನ್ನು ನಿರ್ಮಿಸಲಾಗಿದೆ. ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊಲ, ಗದ್ದೆ, ತೋಟಗಳು ಇದ್ದು, ಅವು ಪುಷ್ಕರಿಣಿಯ ಅಂದ ಹೆಚ್ಚಿಸಿವೆ.
‘ಬಿ.ಎಲ್.ರೈಸ್ ಅವರ 12ನೇ ಶತಮಾನದ ಒಂದು ಶಿಲಾಶಾಸನದಲ್ಲಿ ‘ಕೊಕ್ಕಲೂರು’ ಎಂಬ ಪದ ಕಂಡುಬರುತ್ತದೆ. ಗ್ರಾಮವು 12ನೇ ಶತಮಾನಕ್ಕಿಂತಲೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಅದು ಪುಷ್ಠಿ ನೀಡುವಂತಿದೆ’ ಎಂದು ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ ಅವರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸಿದ್ಧ ಕವಯತ್ರಿ ಹೆಳವನಕಟ್ಟೆ ಗಿರಿಯಮ್ಮ ರಚಿಸಿದ ಒಂದು ಕೀರ್ತನೆಯಲ್ಲಿ ಕೊಕ್ಕನೂರಿನ ಪ್ರಸ್ತಾಪ ಬರುತ್ತದೆ. ಸಾಂಸಾರಿಕ ಜೀವನದಿಂದ ಬೇಸತ್ತು, ಭಗವಂತನ ಸ್ಮರಣೆಯಲ್ಲಿ ತೊಡಗಿದ್ದ ಗಿರಿಯಮ್ಮ, ಕೊಕ್ಕನೂರಿಗೆ ಭೇಟಿ ನೀಡುತ್ತಾರೆ. ಆಂಜನೇಯ ಸ್ವಾಮಿಯೇ ತನ್ನ ಆರಾಧ್ಯದೈವ ಎಂಬುದನ್ನು ಮನಗಂಡು, ಗುಡಿಯಲ್ಲಿ ತಾನೇ ರಚಿಸಿದ ಕೀರ್ತನೆಯನ್ನು ಹಾಡಿ, ಭಕ್ತಿ ಸಮರ್ಪಿಸಿದಳೆಂದೂ ಹೇಳಲಾಗುತ್ತದೆ. ಗಿರಿಯಮ್ಮನ ಕಾಲದಲ್ಲೇ ಕೊಕ್ಕನೂರು ಅಸ್ತಿತ್ವದಲ್ಲಿ ಇತ್ತು ಎಂಬುದನ್ನೂ ದಾಖಲೆಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.