ADVERTISEMENT

ದಾವಣಗೆರೆ: ಸ್ಮಾರ್ಟ್‌ ಆಗಲಿ ಕೊಳೆಗೇರಿ ಜನರ ಬದುಕು

ಗುಣಮಟ್ಟದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳ ನಿರೀಕ್ಷೆ

ಅನಿತಾ ಎಚ್.
Published 6 ಅಕ್ಟೋಬರ್ 2024, 6:04 IST
Last Updated 6 ಅಕ್ಟೋಬರ್ 2024, 6:04 IST
ದಾವಣಗೆರೆಯ ಎಸ್‌.ಎಸ್‌.ಮಲ್ಲಿಕಾರ್ಜುನ್‌ ನಗರದಲ್ಲಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ವಿಶಾಲ ಜಾಗವಿದ್ದರೂ ಸದ್ಬಳಕೆಯಾಗದೆ ಹುಲ್ಲು ಬೆಳೆದಿರುವುದು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌
ದಾವಣಗೆರೆಯ ಎಸ್‌.ಎಸ್‌.ಮಲ್ಲಿಕಾರ್ಜುನ್‌ ನಗರದಲ್ಲಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ವಿಶಾಲ ಜಾಗವಿದ್ದರೂ ಸದ್ಬಳಕೆಯಾಗದೆ ಹುಲ್ಲು ಬೆಳೆದಿರುವುದು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್‌   

ದಾವಣಗೆರೆ: ಕೊಳೆಗೇರಿಗಳಲ್ಲಿ ವಸತಿ, ಶುದ್ಧ ಕುಡಿಯುವ ನೀರು, ರಸ್ತೆ, ವಿದ್ಯುತ್‌, ಚರಂಡಿ, ಒಳಚರಂಡಿ, ಶೌಚಾಲಯ ಇತ್ಯಾದಿ ಮೂಲಸೌಕರ್ಯಗಳ ಕೊರತೆ ಜೊತೆಗೆ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳು ಗೌಣವಾಗಿವೆ.

ಹಮಾಲಿ, ಗುಜರಿ ಆಯುವುದು, ಬೀಡಿ ಕಟ್ಟುವುದು, ಮನೆಗೆಲಸ, ಕಟ್ಟಡ ನಿರ್ಮಾಣ, ಲಾಡ್ಜ್‌, ಹೋಟೆಲ್‌, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕೆಲಸ, ಆಟೊ–ಲಾರಿ ಓಡಿಸುವುದು ಮಂಡಕ್ಕಿ ಭಟ್ಟಿ, ಅವಲಕ್ಕಿ ಭಟ್ಟಿ ಇತ್ಯಾದಿ ಕ್ಷೇತ್ರಗಳಲ್ಲಿ ಅಂದಿನ ಅನ್ನವನ್ನು ಅಂದೇ ದುಡಿಯುವ ದಿನಗೂಲಿಗಳೇ ಇಲ್ಲಿ ಹೆಚ್ಚು ಇದ್ದಾರೆ. ಅನಕ್ಷರತೆ ಕಾರಣದಿಂದಲೂ ತಾವು ವಾಸಿಸುವ ಜಾಗದಲ್ಲಿ ಮೂಲಸೌಕರ್ಯ, ಸ್ವಚ್ಛತೆ ಕೊರತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ದಿನ ಬೆಳಗಾದರೆ ಕೂಲಿ–ನಾಲಿ ಅರಸಿ ಓಡುವ ಜತೆಗೆ ಕುಟುಂಬವನ್ನು ಪೋಷಿಸಲು ಮಕ್ಕಳನ್ನೂ ಚಿಕ್ಕಂದಿನಲ್ಲಿಯೇ ಕೆಲಸಕ್ಕೆ ದೂಡುತ್ತಿದ್ದಾರೆ.

ಪ್ರತಿ ಚುನಾವಣೆ ಸಂದರ್ಭ ಕೊಳೆಗೇರಿಗಳಲ್ಲಿನ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಮತ ಕೇಳುವ ವಿವಿಧ ಪಕ್ಷಗಳ ಮುಖಂಡರು, ನಂತರ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸುವುದಿಲ್ಲ ಎಂಬ ಆರೋಪ ಇದೆ. ಕೊಳಚೆ ತುಂಬಿದ ಪ್ರದೇಶ, ಹಾಳು ಬಿದ್ದ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಜಿಲ್ಲಾ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯೆಂಬಂತಿವೆ.

ADVERTISEMENT

‘ಸರ್ಕಾರಿ ಶಾಲೆಗಳ ಸ್ಥಿತಿ ಕೊಳೆಗೇರಿಗಳಲ್ಲಿ ಇನ್ನೂ ಹದಗೆಟ್ಟಿವೆ. ಶಿಕ್ಷಕರೂ ಶಾಲಾ ಅಭಿವೃದ್ಧಿಗೆ ಗಮನ ಹರಿಸುವುದಿಲ್ಲ. ಶಾಲಾ ಅಭಿವೃದ್ಧಿ ಸಮಿತಿಯೆಂದರೆ ಏನೆಂಬ ತಿಳಿವಳಿಕೆಯೇ ಇಲ್ಲಿನಬಹುತೇಕ ಪಾಲಕರಿಗಿಲ್ಲ. ಮಕ್ಕಳಿಗೆ ಮನೆ ಅಥವಾ ಶಾಲೆ ಎರಡೂ ಕಡೆಯ ವಾತಾವರಣದಲ್ಲಿ ಯಾವುದೇ ವ್ಯತ್ಯಾಸ ಇಲ್ಲವಾಗಿದೆ. ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಪಾಲಕರ ಮಾಡುವ ವೃತ್ತಿಯ ದಾರಿಯನ್ನೇ ಹಿಡಿಯುತ್ತಿದ್ದಾರೆ’ ಎಂದು ಆ್ಯಕ್ಷನ್‌ ಇನಿಶಿಯೇಟಿವ್‌ ಫಾರ್‌ ಡೆವಲಪ್‌ಮೆಂಟ್‌ (ಎಐಡಿ) ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಿ.ಎಸ್‌. ಬಾಬಣ್ಣ ಹೇಳಿದರು.

‘ಲಾಡ್ಜ್‌, ಹೋಟೆಲ್‌, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕೆಲಸ ಮಾಡುವವರಲ್ಲಿ ಕೆಲವರು ತಮ್ಮಂತೆ ತಮ್ಮ ಮಕ್ಕಳ ಬದುಕು ಆಗಬಾರದೆಂದು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ. ಆದರೆ, ಶುಲ್ಕ ಭರಿಸುವುದು ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳ ಖರೀದಿ ಸಾಧ್ಯವಾಗದಿದ್ದಾಗ ಅನುದಾನಿತ ಇಲ್ಲವೇ ಸರ್ಕಾರಿ ಶಾಲೆಗಳಿಗೇ ಮಕ್ಕಳನ್ನು ಕಳಿಸುತ್ತಾರೆ. ಇದರಿಂದ ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಂಡು ಶಾಲೆಯನ್ನೇ ತೊರೆದ ಉದಾಹರಣೆಗಳಿವೆ. ನಿಟುವಳ್ಳಿಯಲ್ಲಿರುವ ಎ.ಕೆ. ಕಾಲೊನಿ ನಗರದ ಮಧ್ಯಭಾಗದಲ್ಲಿದ್ದರೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿಸುವವರು ಸಿಗುವುದು ಬೆರಳೆಣಿಕೆಯಷ್ಟು’ ಎಂದು ಅವರು ವಿವರಿಸಿದರು.

‘ಕೊಳೆಗೇರಿಗಳಲ್ಲಿರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವಾಗ ತಾರತಮ್ಯ ಎಸಗಲಾಗುತ್ತಿದೆ. ವಯಸ್ಸಾದವರನ್ನು, ಅಂಗವಿಕಲ ಶಿಕ್ಷಕರನ್ನು ಇಲ್ಲಿಗೆ ಕಳುಹಿಸುವುದರಿಂದ ಶಾಲಾ ಅಭಿವೃದ್ಧಿ ಸ್ಥಗಿತಗೊಂಡಿದೆ. ಬಡವರ ಬಗ್ಗೆ ಕಾಳಜಿ ಹೊಂದಿದ ಕ್ರಿಯಾಶೀಲ ಶಿಕ್ಷಕರನ್ನು ಈ ಭಾಗಕ್ಕೆ ನೇಮಿಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಂಬಂಧಪಟ್ಟವರು ಗಮನ ಹರಿಸಬೇಕು. ಮೂಲ ಸೌಕರ್ಯ ಒದಗಿಸುವ ಮೂಲಕ ಜೀವನದ ಗುಣಮಟ್ಟ ಸುಧಾರಿಸುವ ಮೂಲಕ ಅವರ ಬದುಕನ್ನು ಸ್ಮಾರ್ಟ್‌ ಆಗಿಸಬೇಕು’ ಎಂದು ಬಾಬಣ್ಣ ಆಗ್ರಹಿಸಿದರು.

ಕೊಳೆಗೇರಿ ಬದುಕು–ಬವಣೆ ಸರಣಿ ಲೇಖನಗಳನ್ನು ಗಮನಿಸಿದ್ದು ಪಾಲಿಕೆ ಆಯುಕ್ತರು ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು.
ಗಂಗಾಧರಸ್ವಾಮಿ ಜಿಲ್ಲಾಧಿಕಾರಿ ದಾವಣಗೆರೆ

ರಾಜಕಾರಣಿಗಳು ಹಾಗೂ ಅಧಿಕಾರಿಗಳು ‘ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ’ ಎಂಬ ನೀತಿ ಅನುಸರಿಸುವ ಕಾರಣ ಹಳೇ ದಾವಣಗೆರೆ ಭಾಗದ ಕೊಳೆಗೇರಿಗಳಲ್ಲಿನ ಜನರ ಬದುಕು ಯಾತನಾಮಯವಾಗಿದೆ. ಶಿಕ್ಷಣದಿಂದ ಹೊರಗುಳಿಯುವ ಮಕ್ಕಳು ಮದ್ಯ ಡ್ರಗ್ಸ್‌ನಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಕೆಲ ಔಷಧ ಅಂಗಡಿಗಳಲ್ಲಿ ನಶೆ ತರಿಸುವ ಮಾತ್ರೆಗಳು ಸಿಗುವುದು ಅವರಿಗೆ ವರದಾನವಾಗಿದೆ. ನಶೆಯಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸುತ್ತಾರೆ. ಇತರೆ ಅಪರಾಧ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿದ್ದಾರೆ. ಇವರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಪದವಿಪೂರ್ವ ಕಾಲೇಜು ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳಲ್ಲಿನ ಶಿಕ್ಷಣ ಯುವಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸಲು ಕೌಶಲ ತರಬೇತಿ ನೀಡಬೇಕು. ಕೈಗಾರಿಕೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. -ಎಂ.ಕರಿಬಸಪ್ಪ ಜಿಲ್ಲಾ ಸಂಚಾಲಕ ಸ್ಲಂ ಜನರ ಸಂಘಟನೆ ಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.