ದಾವಣಗೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜಲ ಸಂಜೀವಿನಿ ಕಾರ್ಯಕ್ರಮ ಮತ್ತು ಜಲಶಕ್ತಿ ಅಭಿಯಾನದಡಿ ಅಂತರರಾಷ್ಟ್ರೀಯ ಜೀವ ವೈವಿಧ್ಯತಾ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ‘ಪಂಚ ಅಭಿಯಾನ’ ಯೋಜನೆ ಅನುಷ್ಠಾನಗೊಳಿಸಲು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಇವುಗಳನ್ನು ಅನುಷ್ಠಾನಗೊಳಿಸುತ್ತಿದ್ದು ಅಂತರರಾಷ್ಟ್ರೀಯ ಜೀವ ವೈವಿಧ್ಯತಾ ದಿನದಂದು ಈ ಪಂಚ ಅಭಿಯಾನಗಳಿಗೆ ಚಾಲನೆ ನೀಡಲಾಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ‘ಮಿಷನ್ ಲೈಫ್’ ಅಡಿ ನರೇಗಾ ಯೋಜನೆಯನ್ನು ಪುನರ್‌ರೂಪಿಸಿ ಜಲಸಂಜೀವಿನಿ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.
ವಿಪತ್ತು ನಿರ್ವಹಣೆ ಹಾಗೂ ಗೋಮಾಳ ಅಭಿವೃದ್ಧಿ ಅಭಿಯಾನ, ಜೈವಿಕ ಅನಿಲ ಅಭಿಯಾನ, ನಿಷ್ಕ್ರಿಯ ಕೊಳವೆ ಬಾವಿ ಪುನಶ್ಚೇತನ ಅಭಿಯಾನ, ಹಸಿರು ಸರೋವರ ಅಭಿಯಾನ, ಕೋಟಿ ವೃಕ್ಷ ಅಭಿಯಾನ(ಹಸಿರೀಕರಣ),ಇವು ಪಂಚ ಅಭಿಯಾನಗಳಾಗಿವೆ.
ಗೋಮಾಳ ಅಭಿವೃದ್ಧಿ:
ಜಿಲ್ಲೆಯಲ್ಲಿ 194 ಗೋಮಾಳ ಅಭಿವೃದ್ಧಿಪಡಿಸಲು ಗುರಿ ನೀಡಿದ್ದು, ಅಷ್ಟೊಂದು ಗೋಮಾಳ ಸಿಕ್ಕಿಲ್ಲ. ಚನ್ನಗಿರಿ ತಾಲ್ಲೂಕಿನಲ್ಲಿ 3, ದಾವಣಗೆರೆ ತಾಲ್ಲೂಕಿನಲ್ಲಿ 7, ಹರಿಹರ, ನ್ಯಾಮತಿ ಹಾಗೂ ಹೊನ್ನಾಳಿಯಲ್ಲಿ ತಲಾ 2, ಜಗಳೂರಿನಲ್ಲಿ 9 ಸೇರಿ 25 ಕಡೆ ಈಗಾಗಲೇ ಜಾಗ ಗುರುತಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಪ್ರಜಾವಾಣಿಗೆ ತಿಳಿಸಿದರು.
ಜೈವಿಕ ಅನಿಲ ಪ್ಲ್ಯಾಂಟ್:
‘ಒಂದು ಪಂಚಾಯಿತಿಗೆ ಕನಿಷ್ಠ 2ರಂತೆ ಬಯೊಗ್ಯಾಸ್ ಪ್ಲ್ಯಾಂಟ್‌ಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದ್ದು, ಈ ಕಾಮಗಾರಿಗೆ ತಗುಲುವ ಶೇ 50 ರಷ್ಟು ಮೊತ್ತವನ್ನು ನರೇಗಾ ಯೋಜನೆಯಡಿ ನೀಡಲಿದ್ದು,ಶೇ 50ರಷ್ಟು ಮೊತ್ತವನ್ನು ರೈತರೇ ಭರಿಸಬೇಕಾಗುತ್ತದೆ. ಬೇಡಿಕೆ ಇರುವ ಕಡೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಒಟ್ಟು 388 ಜೈವಿಕ ಅನಿಲ ಪ್ಲಾಂಟ್‌ಗಳನ್ನು ನಿರ್ಮಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.
ವೈಯಕ್ತಿಕ ಕಾಮಗಾರಿಗಳನ್ನು ಜಾನುವಾರು ಕೊಟ್ಟಿಗೆಗಳ ಪ್ಯಾಕೇಜ್ ಜೊತೆಯಲ್ಲಿ ಅನುಷ್ಠಾನಗೊಳಿಸಿ ಅಡುಗೆ ಅನಿಲದಲ್ಲಿ ಸ್ವಾವಲಂಬನೆಗೊಳಿಸುವುದು ಇದರ ಉದ್ದೇಶ. ಆಗಸ್ಟ್ 10ರೊಳಗೆ ಪೂರ್ಣಗೊಳಿಸಲು ಸರ್ಕಾರ ಗಡುವು ನೀಡಿದೆ.
ನಿಷ್ಕ್ರಿಯ ಕೊಳವೆಬಾವಿಗಳ ಪುನಶ್ಚೇತನ
‘ಒಂದು ಪಂಚಾಯಿತಿಗೆ 5ರಂತೆ ನಿಷ್ಕ್ರಿಯ ಕೊಳವೆ ಬಾವಿ ಪುನಶ್ಚೇತನಗೊಳಿಸಲು ನಿರ್ಧರಿಸಿದ್ದು, ಅಂತರ್ಜಲ ಹೆಚ್ಚಾಗಿ ಕುಸಿದಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 970 ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸುವ ಗುರಿ ಇದ್ದು, ಅಷ್ಟನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಸುರೇಶ್ ಇಟ್ನಾಳ್ ತಿಳಿಸಿದರು.
ಹಸಿರು ಸರೋವರ:
‘ತಾಲ್ಲೂಕಿಗೆ ಒಂದರಂತೆ ಹಸಿರು ಸರೋವರ ನಿರ್ಮಿಸುವ ಗುರಿ ಇದ್ದು, ಹರಿಹರ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಹಸಿರು ಸರೋವರ ನಿರ್ಮಿಸುವ ಗುರಿ ಹೊಂದಲಾಗಿದೆ.ಈಗಾಗಲೇ ಅಮೃತ ಸರೋವರಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಹೊಸ ಪರಿಕಲ್ಪನೆಯೊಂದಿಗೆ ಮಣ್ಣು, ಕಲ್ಲು ಹಾಗೂ ಸಸಿಗಳನ್ನು ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.
ಕೋಟಿ ವೃಕ್ಷ ಅಭಿಯಾನ:
‘ಕೋಟಿ ವೃಕ್ಷ ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 1700 ಸಸಿಗಳನ್ನು ನೆಡಲು ಚಿಂತಿಸಿದ್ದು, 4,33,806 ಗಿಡಗಳನ್ನು ನೆಡುವ ಗುರಿ ಇದ್ದು, ಕನಿಷ್ಠ 3,29,800 ಗಿಡಗಳನ್ನು ನೆಡುವ ಉದ್ದೇಶವಿದೆ. ಗಿಡಗಳನ್ನು ನೆಡುವುದು ಹೆಚ್ಚು ಕಷ್ಟವಲ್ಲ’ ಎಂದು ಮಾಹಿತಿ ನೀಡಿದರು.
ವಿಪತ್ತು ನಿರ್ವಹಣೆ ಹಾಗೂ ಗೋಮಾಳ ಅಭಿವೃದ್ಧಿ ಅಭಿಯಾನlಕೋಟಿ ವೃಕ್ಷ ಅಭಿಯಾನ (ಹಸಿರೀಕರಣ)lನಿಷ್ಕ್ರಿಯ ಕೊಳವೆ ಬಾವಿ ಪುನಶ್ಚೇತನ ಅಭಿಯಾನlಹಸಿರು ಸರೋವರ ಅಭಿಯಾನlಜೈವಿಕ ಅನಿಲ ಅಭಿಯಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.