ದಾವಣಗೆರೆ: ಚಲಿಸುತ್ತಿದ್ದ ರೈಲು ಏರಲು ಪ್ರಯತ್ನಿಸಿ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ರಕ್ಷಣಾ ದಳ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಬೆಂಗಳೂರಿನ ಬಿಟಿಎಂ ಬಡಾವಣೆಯ ನಿವಾಸಿ ರಾಧಾಕೃಷ್ಣ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಜನಶತಾಬ್ಧಿ ಎಕ್ಸ್‌ಪ್ರೆಸ್‌ನಲ್ಲಿ ಶುಕ್ರವಾರ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಈ ಘಟನೆ ನಡೆದಿದೆ.
ರಾಷ್ಟ್ರೀಕೃತ ಬ್ಯಾಂಕ್ ನಿವೃತ್ತ ಉದ್ಯೋಗಿ ರಾಮಕೃಷ್ಣ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ರೈಲು ಶುಕ್ರವಾರ ಬೆಳಿಗ್ಗೆ 11ಕ್ಕೆ ದಾವಣಗೆರೆ ರೈಲ್ವೆ ನಿಲ್ದಾಣದ 1ನೇ ಪ್ಲಾಟ್‌ಫಾರ್ಮ್‌ಗೆ ಬಂದಿತ್ತು. ತಿನಿಸು ಖರೀದಿಸಲು ಅವರು ಕೆಳಗೆ ಇಳಿದಾಗ ರೈಲು ಹೊರಟಿತ್ತು. ಗಡಿಬಿಡಿಯಲ್ಲಿ ರೈಲು ಏರಲು ಮುಂದಾದಾಗ ಈ ಅವಘಡ ಸಂಭವಿಸಿತ್ತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಚಲಿಸುತ್ತಿದ್ದ ರೈಲನ್ನು ಗಡಿಬಿಡಿಯಲ್ಲಿ ಹತ್ತಲು ರಾಧಾಕೃಷ್ಣ ಮುಂದಾಗಿದ್ದರು. ಆಯತಪ್ಪಿ ರೈಲು ಹಳಿಗೆ ಬೀಳುತ್ತಿರುವುದನ್ನು ಗಮನಿಸಿದ ಹೋಮ್ ಗಾರ್ಡ್ ಎನ್.ಲಕ್ಷ್ಮಣ್ ನಾಯ್ಕ ತಕ್ಷಣ ಕೈಹಿಡಿದು ಎಳೆದಿದ್ದಾರೆ. ಸಮೀಪದಲ್ಲೇ ಇದ್ದ ಆರ್‌ಪಿಎಫ್ ಹೆಡ್‌ಕಾನ್‌ಸ್ಟೆಬಲ್ ಅಶೋಕ್ ನೆರವು ನೀಡಿದ್ದಾರೆ. ಚಿಕ್ಕ ಗಾಯಗಳಿಂದ ಗಾಬರಿಗೊಂಡಿದ್ದ ಪ್ರಯಾಣಿಕರನ್ನು ಸಂತೈಸಿದ್ದಾರೆ. ಬಳಿಕ ರಾಧಾಕೃಷ್ಣ ಅದೇ ರೈಲಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.