ದಾವಣಗೆರೆ: ‘ದೂಳು ನಿರಂತರವಾಗಿ ಕಣ್ಣನ್ನು ಸೇರಿದ್ದರಿಂದ ತಂದೆಗೆ ದೃಷ್ಟಿ ದೋಷ ಉಂಟಾಗಿದೆ. ಒಮ್ಮೆ ₹ 22,000 ಖರ್ಚು ಮಾಡಿ ಆಪರೇಷನ್ ಮಾಡಿಸಿದೆ. ಬಳಿಕ ಮತ್ತೊಂದು ಕಣ್ಣಿನಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮತ್ತೆ ₹ 25,000 ಖರ್ಚು ಮಾಡಿ ಆಪರೇಷನ್ ಮಾಡಿಸಿದೆ. ಕೂಲಿ ಮಾಡಿ ಬದುಕು ಸಾಗಿಸುವ ನಮಗೆ ದೊಡ್ಡ ಪೆಟ್ಟು ನೀಡಿತು. ದಿನವಿಡೀ ಬೆವರು ಸುರಿಸಿ ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ಖರ್ಚು ಮಾಡುವುದರಲ್ಲೇ ಸಾಕಾಗಿ ಹೋಗಿದೆ’..
ವಾರ್ಡ್ ಸಂಖ್ಯೆ– 9ರ ವ್ಯಾಪ್ತಿಯ ಬಾಷಾ ನಗರದ 2ನೇ ಮುಖ್ಯ ರಸ್ತೆ, 2ನೇ ಕ್ರಾಸ್‌ನ ನಿವಾಸಿ ನಸರುಲ್ಲಾ ಅವರ ನೋವಿನ ಮಾತುಗಳಿವು.
ಬಾಷಾ ನಗರದಲ್ಲಿ ಸಣ್ಣ ಸಣ್ಣ ಗುಡಿಸಲುಗಳಂತಹ ಮನೆಗಳಿಗೆ ಹೊಂದಿಕೊಂಡೇ ಇರುವ ಮಂಡಕ್ಕಿ ಬಟ್ಟಿ ಹಾಗೂ ಅವಲಕ್ಕಿ ಮಿಲ್‌ಗಳಿಂದ ಸ್ಥಳೀಯ ನಿವಾಸಿಗಳು ಕಂಗೆಟ್ಟು ಹೋಗಿದ್ದಾರೆ. ಸದಾ ಹೊಗೆ, ಬೂದಿ ಹಾಗೂ ದೂಳು ಉಗುಳುವ ಮಂಡಕ್ಕಿ ಬಟ್ಟಿ, ಅವಲಕ್ಕಿ ಮಿಲ್‌ಗಳನ್ನು ಜನವಸತಿ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಿ ಆರೋಗ್ಯಯುತ ಬದುಕು ಸಾಗಿಸಲು ಅವಕಾಶ ನೀಡಿ ಎಂದು ಅವರು ಗೋಗರೆಯುತ್ತಿದ್ದಾರೆ.
ಈ ಸಮಸ್ಯೆ ಬಾಷಾ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಮಂಡಕ್ಕಿ ಬಟ್ಟಿ ಹಾಗೂ ಅವಲಕ್ಕಿ ಮಿಲ್‌ಗಳಿಂದ ಸುತ್ತುವರಿದಿರುವ ಚೌಡೇಶ್ವರಿ ನಗರ, ಮಂಡಕ್ಕಿ ಬಟ್ಟಿ ಲೇಔಟ್, ಪಾರ್ವತಮ್ಮ ಕಾಲೊನಿ, ಸಿದ್ದರಾಮೇಶ್ವರ ಬಡಾವಣೆ ಸೇರಿದಂತೆ ಕೊಳೆಗೇರಿ ಪ್ರದೇಶಗಳೆಂದು ಗುರುತಿಸಿಕೊಂಡಿರುವ ಹಲವು ಬಡಾವಣೆಗಳಲ್ಲಿ ಹೊಗೆ, ದೂಳಿನ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯರು ಆರೋಗ್ಯಯುತ ಬದುಕು ಸಾಗಿಸುವುದೇ ದುಸ್ತರವಾಗಿದೆ.
ಕಾರ್ಮಿಕರೇ ನೆಲೆಸಿರುವ ಈ ಬಡಾವಣೆಗಳಲ್ಲಿ ದಿನದ 24 ಗಂಟೆಯೂ ದೂಳುಮಯ ವಾತಾವರಣ ಇರುತ್ತದೆ. ದೂಳು, ಹೊಗೆಯಿಂದ ಚಿಕ್ಕಮಕ್ಕಳು, ವೃದ್ಧರು, ಅಸ್ತಮಾ ರೋಗಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜೋರು ಗಾಳಿ ಬೀಸಿದರೆ ದೂಳು, ಬೂದಿ ಮನೆಯೊಳಗೆ ನುಗ್ಗುತ್ತದೆ. ಬೂದಿ ಹಾಗೂ ಹೊಗೆಯ ವಾತಾವರಣದಿಂದ ಸ್ಥಳೀಯರು ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
‘ನಿತ್ಯ ಸ್ನಾನ ಮಾಡಿದರೂ, ದೂಳಿನಿಂದಾಗಿ ಮೈಯಲ್ಲಿ ಕೆರೆತ ಉಂಟಾಗುತ್ತಿದೆ. ತಿಂಗಳಲ್ಲಿ 2–3 ಬಾರಿ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ನೆನೆದರೆ ಆತಂಕವಾಗುತ್ತದೆ’ ಎಂದು ಚೌಡೇಶ್ವರಿ ನಗರದ ನಿವಾಸಿ ದಿಲ್‌ಶಾದ್ ಕಳವಳ ವ್ಯಕ್ತಪಡಿಸಿದರು.
‘ಮಂಡಕ್ಕಿ ಬಟ್ಟಿ, ಅವಲಕ್ಕಿ ಮಿಲ್‌ಗಳನ್ನು ಸ್ಥಳಾಂತರ ಮಾಡುತ್ತೇವೆ ಎಂಬ ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆ ಈಡೇರಿಲ್ಲ. ಇಲ್ಲಿ ಉಸಿರು ಕಟ್ಟುವಂತಹ ವಾತಾವರಣ ಇದೆ. ಈ ಬಗ್ಗೆ ಮಿಲ್‌ನವರಿಗೆ ಪ್ರಶ್ನಿಸಿದರೆ, ಮನೆಯ ಬಾಗಿಲು ಹಾಕಿಕೊಳ್ಳಿ ಇಲ್ಲವೇ, ಬೇರೆ ಬಡಾವಣೆಗೆ ಹೋಗಿ ಎಂದು ಗದರಿಸುತ್ತಾರೆ’ ಎಂದು ಮಂಡಕ್ಕಿ ಬಟ್ಟಿ ಲೇಔಟ್ ನಿವಾಸಿಗಳಾದ ರಜಾ ಬೀ, ಲತೀಫ್ ಸಾಬ್ ಸಂಕಷ್ಟ ತೋಡಿಕೊಂಡರು.
ಗಾಂಜಾ ಅಮಲಿನಲ್ಲಿ ಸ್ಥಳೀಯರಿಗೆ ತೊಂದರೆ
‘ರಾತ್ರಿ 8–9 ಗಂಟೆಯಾಗುತ್ತಲೇ ಎಲ್ಲಿಂದಲೋ ಬರುವ ಪುಂಡರು ಮಂಡಕ್ಕಿ ಬಟ್ಟಿ ಹಾಗೂ ಅವಲಕ್ಕಿ ಮಿಲ್‌ಗಳ ಬಳಿ ಇರುವ ಖಾಲಿ ಜಾಗಗಳ ಬಳಿ ಗಾಂಜಾ ಎಣ್ಣೆ ಹೊಡೆಯುತ್ತಾರೆ. ಅದೇ ನಶೆಯಲ್ಲಿ ಓಣಿಗಳಲ್ಲಿ ವೇಗವಾಗಿ ಬೈಕ್ ಓಡಿಸುತ್ತಾರೆ. ರಸ್ತೆಯಲ್ಲಿನ ನಾಯಿಗಳನ್ನು ಹಿಡಿದು ಬಡಿಯುತ್ತಾರೆ. ಪುಂಡರ ಹಾವಳಿ ಮಿತಿಮೀರಿದ್ದು ಮಕ್ಕಳು ಮಹಿಳೆಯರು ರಾತ್ರಿ ಮನೆಯಿಂದ ಹೊರಬರಲೂ ಹೆದರುವಂತಹ ಸ್ಥಿತಿ ಇದೆ’ ಎಂದು ಬಾಷಾ ನಗರ ಚೌಡೇಶ್ವರಿ ನಗರದ ನಿವಾಸಿಗಳು ಸಂಕಷ್ಟ ತೋಡಿಕೊಂಡರು. ‘ಬೇರೆ ಬಡಾವಣೆಗಳಿಂದ ಬಂದು ಇಲ್ಲಿ ಇಸ್ಪೀಟ್ ಆಡುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಪ್ರಶ್ನಿಸಿದರೆ ಜಗಳಕ್ಕೆ ಬರುತ್ತಾರೆ. ಆಗಾಗ ಇಲ್ಲಿ ಜಗಳ ನಡೆಯುತ್ತಲೇ ಇರುತ್ತವೆ. ಕೊಳೆಗೇರಿ ಎಂಬ ಅಸಡ್ಡೆಯಿಂದ ಪೊಲೀಸರು ಇತ್ತ ಸುಳಿಯುವುದಿಲ್ಲ’ ಎಂದು ಬಾಷಾ ನಗರದ ನಿವಾಸಿಗಳು ದೂರಿದರು.
‘ಬಟ್ಟಿಗಳ ಸ್ಥಳಾಂತರಕ್ಕೆ ಕೋರಿ ಸರ್ಕಾರಕ್ಕೆ ಪತ್ರ’
‘ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 2ರಲ್ಲಿ 300 ಮಂಡಕ್ಕಿ ಬಟ್ಟಿ ಹಾಗೂ ವಾರ್ಡ್ ಸಂಖ್ಯೆ 9ರಲ್ಲಿ 150 ಬಟ್ಟಿಗಳಿವೆ. ಇವುಗಳಿಂದ ಸ್ಥಳೀಯರಿಗೆ ಮಾತ್ರವಲ್ಲದೆ ಇಡೀ ನಗರದ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಮಂಡಕ್ಕಿ ಬಟ್ಟಿ ಬೂದಿಯಿಂದ ಅಲ್ಲಿನ ನಿವಾಸಿಗಳಿಗೆ ಅನಾರೋಗ್ಯ ಉಂಟಾಗುತ್ತಿದ್ದು ಸ್ಥಳಾಂತರದ ಬಗ್ಗೆ 2–3 ಬಾರಿ ಮನವಿ ಸಲ್ಲಿಸಿದ್ದಾರೆ’ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ದೂಳು ಬೂದಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮಂಡಕ್ಕಿ ಬಟ್ಟಿಗಳನ್ನು ಸ್ಥಳಾಂತರಿಸುವ ಬಗ್ಗೆ ಕ್ರಮ ವಹಿಸಲು ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಕೂಡ ಸೂಚನೆ ನೀಡಿದೆ. ಮಂಡಕ್ಕಿ ಬಟ್ಟಿ ಅವಲಕ್ಕಿ ಮಿಲ್ ಸ್ಥಳಾಂತರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸರ್ಕಾರ ಸ್ಪಷ್ಟೀಕರಣ ಕೇಳಿದ್ದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದ ಬಳಿಕ ಸ್ಪಷ್ಟನೆ ನೀಡಲಾಗುವುದು. ಬಟ್ಟಿಗಳ ಸ್ಥಳಾಂತರಕ್ಕೆ ಅನುದಾನ ನೀಡುವಂತೆಯೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.