ADVERTISEMENT

ದಾವಣಗೆರೆ: ಬದಲಾವಣೆ ಕಾಣಿಸುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 23:00 IST
Last Updated 26 ಸೆಪ್ಟೆಂಬರ್ 2020, 23:00 IST
ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆಯ ಕಾಸಲ್‌ ಶೆಟ್ಟಿ ಪಾರ್ಕ್‌ನಲ್ಲಿ ನಿರ್ಮಿಸಿರುವ ಇ–ಶೌಚಾಲಯ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಸ್ಮಾರ್ಟ್‌ ಸಿಟಿ ಯೋಜನೆಯಡಿ ದಾವಣಗೆರೆಯ ಕಾಸಲ್‌ ಶೆಟ್ಟಿ ಪಾರ್ಕ್‌ನಲ್ಲಿ ನಿರ್ಮಿಸಿರುವ ಇ–ಶೌಚಾಲಯ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ದಾವಣಗೆರೆಯು ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದರೂ ಜನರ ಜೀವನ ಮಟ್ಟ ಸುಧಾರಿಸುವಂತಹ ಬದಲಾವಣೆಗಳು ಕಂಡುಬರುತ್ತಿಲ್ಲ. ಒಟ್ಟು ₹ 1,000 ಕೋಟಿ ಮೊತ್ತದ ಕ್ರಿಯಾಯೋಜನೆ ಪೈಕಿ ₹ 396 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 207.37 ಕೋಟಿ ಮಾತ್ರ ಖರ್ಚಾಗಿದೆ. ಆಮೆಗತಿಯಲ್ಲಿ ಕಾಮಗಾರಿಗಳು ಸಾಗುತ್ತಿವೆ ಎಂಬುದಕ್ಕೆ ಬ್ಯಾಂಕ್‌ನಲ್ಲಿಟ್ಟಿದ್ದ ಠೇವಣಿ ಹಣಕ್ಕೆ ₹ 79.03 ಕೋಟಿ ಬಡ್ಡಿ ಬಂದಿರುವುದೇ ಸಾಕ್ಷಿಯಾಗಿದೆ.

ಕೈಗೆತ್ತಿಕೊಂಡಿರುವ ಒಟ್ಟು 90 ಕಾಮಗಾರಿಗಳ ಪೈಕಿ 20 ಮಾತ್ರ ಪೂರ್ಣ ಗೊಂಡಿವೆ. 55 ಕಾಮಗಾರಿಗಳು ಪ್ರಗತಿಯಲ್ಲಿವೆ. 7 ಕಾಮಗಾರಿಗಳು ಟೆಂಡರ್‌ ಹಂತದಲ್ಲಿದ್ದರೆ, 8 ಕಾಮಗಾರಿಗಳ ಡಿಪಿಆರ್‌ಗೆ ಇನ್ನೂ ಅನುಮೋದನೆ ಪಡೆದುಕೊಳ್ಳಬೇಕಾಗಿದೆ.

ನಗರದಲ್ಲಿ ಮಾಲಿನ್ಯ ಕಡಿಮೆ ಮಾಡಲು 300ಕ್ಕೂ ಹೆಚ್ಚು ಮಂಡಕ್ಕಿಭಟ್ಟಿಗಳಿಗೆ ಗ್ಯಾಸಿಫೈರ್‌ ಕೂರಿಸುವ ಮಹತ್ವಾಕಾಂಕ್ಷಿ ಯೋಜನೆ ಪ್ರಾಯೋಗಿಕ ಹಂತದಲ್ಲೇ ವಿಫಲಗೊಂಡಿದೆ. ಮಂಡಕ್ಕಿಯ ಇಳುವರಿ ಕಡಿಮೆ ಬರಲಿದೆ ಎಂಬ ಕಾರಣಕ್ಕೆ ಗ್ಯಾಸಿಫೈರ್‌ ಕೂರಿಸಲು ಮಾಲೀಕರು ಅವಕಾಶ ನೀಡದಿರುವುದರಿಂದ ಈ ಕಾಮಗಾರಿಯು ಮಂಡಕ್ಕಿಭಟ್ಟಿ ಬಡಾವಣೆಯ ರಸ್ತೆ, ಚರಂಡಿ ಅಭಿವೃದ್ಧಿಗಷ್ಟೆ ಸೀಮಿತವಾಗಿದೆ.

ADVERTISEMENT

‘ನಗರ ವ್ಯಾಪ್ತಿಯಲ್ಲಿ ಹಗಲಿನಲ್ಲಿ ಕೆಲಸ ಮಾಡುವುದರಿಂದ ವ್ಯಾಪಾರ–ವಹಿವಾಟಿಗೆ ತೊಂದರೆಯಾಗುವುದರ ಜೊತೆಗೆ ಕೆಲಸವೂ ವಿಳಂಬವಾಗುತ್ತದೆ. ವಿದೇಶಗಳಲ್ಲಿರುವಂತೆ ರಾತ್ರಿಯಿಡೀ ಕೆಲಸ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಮೂರ್ನಾಲ್ಕು ತಿಂಗಳಲ್ಲಿ ಆಗುವ ಕೆಲಸವನ್ನು ಒಂದೇ ತಿಂಗಳಲ್ಲಿ ಮುಗಿಸಲು ಸಾಧ್ಯವಿದೆ’ ಎನ್ನುತ್ತಾರೆ ಬಾಪೂಜಿ ಎಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.