ಸಾಸ್ವೆಹಳ್ಳಿ: ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಜನವರಿಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುತ್ತಿಲ್ಲ. ಇದರಿಂದ ಶೌಚಾಲಯ ಇದ್ದೂ ಇಲ್ಲದಂತಾಗಿದೆ.
2021– 22ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿ ಮತ್ತು ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಸಾರ್ವಜನಿಕ ಶೌಚಾಲಯ ಮತ್ತು ಬಸ್ ಶೆಲ್ಟರ್ ಅನ್ನು ಅಂದಾಜು ₹ 30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ದೊಡ್ಡ ಹೋಬಳಿ ಕೇಂದ್ರದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ ಎಂಬ ಕೊರಗು ಇತ್ತು. ಈಗ ಶೌಚಾಲಯ ಇದ್ದೂ ಬಳಕೆಯಾಗದಿರುವುದು ಬೇಸರ ತಂದಿದೆ. ಇಲ್ಲಿರುವ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
‘ಹೋಬಳಿ ಕೇಂದ್ರಕ್ಕೆ ನಿತ್ಯ ಸಾವಿರಾರು ಜನ ವಿವಿಧ ಕೆಲಸಗಳಿಗೆ ಬರುತ್ತಾರೆ. ಅವರಿಗೆ ಸಾರ್ವಜನಿಕ ಶೌಚಾಲಯ ಅತಿ ಅವಶ್ಯಕ. ಅಂಬೇಡ್ಕರ್ ವೃತ್ತದಲ್ಲಿರುವ ಸಾರ್ವಜನಿಕ ಶೌಚಾಲಯ ಹಾಗೂ ಸಂತೆ ಮೈದಾನದಲ್ಲಿ ನಿರ್ಮಿಸಿರುವ ಶೌಚಾಲಯಕ್ಕೆ ಬೀಗ ಹಾಕಲಾಗಿದೆ’ ಎಂದು ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
‘ಕೆಲ ತಿಂಗಳ ಹಿಂದೆ ಇಲ್ಲಿ ಬಸ್ ನಿಲ್ದಾಣ ಇರಲಿಲ್ಲ. ಈಗ ಬಸ್ ನಿಲ್ದಾಣ, ಶೌಚಾಲಯ ಎರಡೂ ನಿರ್ಮಾಣ ಆಗಿವೆ. ಆದರೆ, ಅದನ್ನು ಬಳಸದಂತೆ ಬೇಗ ಹಾಕಿದ್ದಾರೆ. ಇದರಿಂದ ಹೆಣ್ಣು ಮಕ್ಕಳಿಗೆ ಶೌಚಾಲಯಕ್ಕೆ ಹೋಗುವುದೇ ದೊಡ್ಡ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯದ ಬೀಗ ತೆರೆದು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿ ರಾಜಮ್ಮ ಹೇಳಿದರು.
‘ಸಾರ್ವಜನಿಕ ಶೌಚಾಲಯ ಮತ್ತು ಬಸ್ ಶೆಲ್ಟರ್ ಹಾಗೂ ಸಂತೆ ಮೈದಾನದ ಶೌಚಾಲಯ ಉದ್ಘಾಟನೆ ಆಗಿಲ್ಲ. ಗ್ರಾಮ ಪಂಚಾಯಿತಿ ಸಭೆಯಲ್ಲಿ, ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಶೀಘ್ರ ಉದ್ಘಾಟನೆಯ ದಿನಾಂಕವನ್ನು ನಿರ್ಧರಿಸಿ ಈ ಮೂರನ್ನು ಲೋಕಾರ್ಪಣೆ ಮಾಡಲಾಗುವುದು’ ಎಂದು ಸಾಸ್ವೆಹಳ್ಳಿ ಪಿಡಿಒ ಹನುಮಂತ ನಾಯ್ಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.