ADVERTISEMENT

ಬೇಸಿಗೆ | ಎಳನೀರು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ಕೆ.ಎಸ್.ವೀರೇಶ್ ಪ್ರಸಾದ್
Published 27 ಏಪ್ರಿಲ್ 2024, 7:16 IST
Last Updated 27 ಏಪ್ರಿಲ್ 2024, 7:16 IST
ಸಂತೇಬೆನ್ನೂರಿನ ರಸ್ತೆ ಬದಿ ಎಳನೀರು ವ್ಯಾಪಾರಿ ಸಣ್ಣ ಹಾಲಪ್ಪ
ಸಂತೇಬೆನ್ನೂರಿನ ರಸ್ತೆ ಬದಿ ಎಳನೀರು ವ್ಯಾಪಾರಿ ಸಣ್ಣ ಹಾಲಪ್ಪ   

ಸಂತೇಬೆನ್ನೂರು: ಬೇಸಿಗೆಯ ಧಗೆ ಏರುತ್ತಲೇ ಇದೆ. ದೇಹ ತಂಪಾಗಿಸಲು ನೈಸರ್ಗಿಕ ತಂಪು ಪಾನೀಯವೂ,  ಆರೋಗ್ಯವರ್ಧಕವೂ ಆಗಿರುವ ಎಳನೀರಿನ ಇಳುವರಿ ಕುಸಿದಿದ್ದರಿಂದ ಬೇಡಿಕೆ ದುಪ್ಪಟ್ಟಗಾಗಿದೆ. ಲಭ್ಯತೆ ಇಲ್ಲದೆ ಎಳನೀರು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

’ಮಳೆಯ ಕೊರತೆಯಿಂದಾಗಿ ಬಹುತೇಕ ತೆಂಗಿನ ತೋಟಗಳಲ್ಲಿ ಎಳನೀರು ಇಳುವರಿ ಕಡಿಮೆಯಾಗಿದೆ. ಕಳೆದ ತಿಂಗಳು ದಿನಕ್ಕೆ 150ರಿಂದ 200 ಎಳನೀರು ಮಾರಾಟ ಮಾಡುತ್ತಿದ್ದೆ. ಸದ್ಯ ತೋಟಗಳಲ್ಲಿ ಎಳನೀರು ಸಿಗುತ್ತಿಲ್ಲ. ತೋಟಗಳನ್ನು ಅಲೆದು ಹುಡಕಿದರೂ 50 ಎಳನೀರು ಸಿಗುತ್ತಿಲ್ಲ. ಮರ ಹತ್ತಿ ಕೆಡವಿ ತಂದು ಮಾರಲು ಜೀವ ಕೈಗೆ ಬರುತ್ತದೆ. ಸಿಕ್ಕಷ್ಟೇ ಪುಣ್ಯ ಎಂದು ವ್ಯಾಪಾರಕ್ಕಿಳಿದರೆ ಮಧ್ಯಾಹ್ನಕ್ಕೇ ಖಾಲಿಯಾಗುತ್ತದೆ’ ಎಂದು ಎಳನೀರು ವ್ಯಾಪಾರಿ ಸಣ್ಣ ಹಾಲಪ್ಪ ತಿಳಿಸಿದರು.

‘ದೊಡ್ಡಬ್ಬಿಗೆರೆ ವ್ಯಾಪ್ತಿಯಲ್ಲಿ 500 ಎಕರೆಯಷ್ಟು ತೆಂಗಿನ ತೋಟಗಳಿವೆ. ಬಿಸಿಲಿಗೆ ತೆಂಗಿನ ಮರದ ಹೊಂಬಾಳೆಯಲ್ಲಿ ಹರಳುಗಳು ಉದುರುತ್ತಿವೆ. ಸದ್ಯ ತೋಟದಲ್ಲಿ ಎಳನೀರು ಬಿಡುತ್ತಿಲ್ಲ. ನಮ್ಮ 200 ತೆಂಗಿನ ಮರಗಳಲ್ಲಿ ವರ್ಷಕ್ಕೆ 18,000ದಿಂದ 20,000 ಎಳನೀರು ಮಾರಾಟ ಮಾಡುತ್ತಿದ್ದೆವು. ಈ ಬೇಸಿಗೆಯಲ್ಲಿ ಎಳನೀರು ಹಿಡಿದಿಲ್ಲ’ ಎಂದು ರೈತ ವಾಗೀಶ್ ಮಾಹಿತಿ ನೀಡಿದರು.

ADVERTISEMENT

ಗುತ್ತಿಗೆದಾರನಿಗೆ ಪ್ರತಿ ಎಳನೀರಿಗೆ ₹ 13ಕ್ಕೆ ಬೆಲೆ ನಿರ್ಧರಿಸಿ ಕೊಡಲಾಗಿದೆ. 300 ತೆಂಗಿನ ಮರಗಳಿಂದ ಪ್ರತಿ ತಿಂಗಳು 2,000ದಿಂದ 3,000 ಎಳನೀರು ಸಿಗುತ್ತಿತ್ತು. ಸದ್ಯ ಶೇ 60ರಷ್ಟು ಇಳುವರಿ ಕುಸಿದಿದೆ ಎಂದು ಸುಮತೀಂದ್ರ ನಾಡಿಗ್ ತಿಳಿಸಿದರು.

‘ಗ್ರಾಮದಲ್ಲಿ ಐದು ದಶಕಗಳಿಂದ ಎಳನೀರು ಮಾರುತ್ತಿದ್ದೇನೆ. ದಿನಕ್ಕೆ 200ಕ್ಕಿಂತ ಹೆಚ್ಚು ಎಳನೀರು ಖರ್ಚಾಗುತ್ತಿತ್ತು. ಸದ್ಯ 30ರಿಂದ 50 ಎಳನೀರು ಸಿಗುತ್ತಿದೆ. ತೋಟದ ಮಾಲೀಕರಿಂದ ಖರೀದಿಸಿ ₹ 30ರಿಂದ ₹ 35ಕ್ಕೆ ಮಾರಾಟ ಮಾಡುತ್ತೇನೆ. ಈ ಬಾರಿ ಎಳನೀರು ಸಿಗದೆ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ’ ಎಂದು ವ್ಯಾಪಾರಿ ಹನುಮಣ್ಣ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ 1,776 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ನೀರುಣಿಸುವ ಪ್ರಕ್ರಿಯೆಯಲ್ಲಿ ತಡವಾದರೆ ಹರಳುಗಳು ಉದುರುತ್ತವೆ. ಮಳೆಗಾಲ ಆರಂಭವಾದರೆ ಮತ್ತೆ ಕಾಯಿ ಹಿಡಿಯುತ್ತವೆ ಎಂದು ಹಿರಿಯ ತೋಟಗಾರಿಕಾ ಅಧಿಕಾರಿ ಶ್ರೀಕಾಂತ್ ತಿಳಿಸಿದರು.

ಎಚ್.ಮುರಳೀಧರ
ಸಂತೇಬೆನ್ನೂರು ಸಮೀಪದ ಎಸ್‌ಬಿಆರ್ ಕಾಲೊನಿಯಲ್ಲಿ ಎಳನೀರು ತುಂಬಿಸಿದ ಕ್ಯಾಂಟರ್
ತೆಂಗಿನ ತೋಟದಲ್ಲಿ ಎಳನೀರು ಸಂಗ್ರಹಣೆ

ಹೊರ ರಾಜ್ಯಕ್ಕೆ ರಫ್ತು ಕುಸಿತ ‘ಪ್ರತಿ ತಿಂಗಳು ಎಲ್ಲಾ ಸಗಟು ವ್ಯಾಪಾರಸ್ಥರು 3ರಿಂದ 5 ಲಕ್ಷ ಎಳನೀರನ್ನು ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದರು. ಏಪ್ರಿಲ್ ತಿಂಗಳಲ್ಲಿ 1 ಲಕ್ಷಕ್ಕೆ ಕುಸಿದಿದೆ. ಗೋವಾ ಪುಣೆ ಮುಂಬೈಗೆ ಕ್ಯಾಂಟರ್‌ನಲ್ಲಿ 2000 ಹಾಗೂ ಲಾರಿಯಲ್ಲಿ 6000ವರೆಗೂ ಎಳನೀರು ತುಂಬಿ ಕಳುಹಿಸಲಾಗುತ್ತಿತ್ತು. ಈ ಬಾರಿ ರಾಜ್ಯದಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಿದ್ದು ಲಭ್ಯ ಇರುವಷ್ಟು ಸರಬರಾಜು ಮಾಡಲಾಗುತ್ತಿದೆ. ರೈತರಿಂದ ₹ 15ರಿಂದ ₹ 16ಕ್ಕೆ ಎಳನೀರು ಖರೀದಿಸಿ ಹೊರ ಜಿಲ್ಲೆಯ ಸಗಟು ವ್ಯಾಪಾರಿಗಳಿಗೆ ಲೋಡ್‌ ಮತ್ತು ಅನ್‌ಲೋಡ್‌ ಕೂಲಿ ದರ ಸೇರಿ ₹ 26ರಿಂದ ₹ 27ಕ್ಕೆ ಮಾರಾಟ ಮಾಡತ್ತೇನೆ’ ಎಂದು ಎಳನೀರು ಸಗಟು ವ್ಯಾಪಾರಿ ಎಚ್.ಮುರಳಿಧರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.